“ವಿಜ್ಞಾನ ಮತ್ತು ತಂತ್ರಜ್ಞಾನ, ತಾರ್ಕಿಕತೆ, ವೈಜ್ಞಾನಿಕ ಮನೋಭಾವ ದೇಶದ ಅಭಿವೃದ್ಧಿಗೆ ಕಾರಣವಾಗಿದೆಯೇ ವಿನಾ ಧಾರ್ಮಿಕ ನಂಬಿಕೆಗಳಲ್ಲ. ಆದರೆ, ರಾಜಕೀಯ ಪಕ್ಷಗಳು ಓಲೈಕೆ ಮಾಡುತ್ತಿವೆ. ಸಾಮಾನ್ಯ ಜನರಿಗೆ ಅನ್ನ, ಆಹಾರ, ಬಟ್ಟೆ ಮುಖ್ಯವೇ ವಿನಾ ಧಾರ್ಮಿಕ ಮೂಲಭೂತವಾದವಲ್ಲ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಕರ್ನಾಟಕ ಸರ್ಕಾರದ ʼಸ್ವಾವಲಂಬಿ ಸಾರಥಿʼ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಆಜ್‌ತಕ್ ವಾಹಿನಿ ಮತ್ತು ಅದರ ಮಾಜಿ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆಯ ಒಂದು ಹಂತದಲ್ಲಿ ದೂರುದಾರ ಶಿವಕುಮಾರ್ ಅವರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಬಾಲನ್ ಅವರು “ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರ ರೂಪಿಸಿರುವ ನೀತಿಯ ಮೇಲೆ ಚರ್ಚೆಯಾದರೆ ಆಕ್ಷೇಪವಿಲ್ಲ. ಆದರೆ, ಸುದ್ದಿ ವಿಶ್ಲೇಷಣೆಯ ನೆಪದಲ್ಲಿ ಪ್ರಚೋದನೆ ನೀಡಲಾಗಿದೆ. ಒಂದು ಸಮುದಾಯವನ್ನು ರಾಕ್ಷಸೀಕರಿಸಲಾಗಿದ್ದು, ದ್ವೇಷ ಹರಡುವ ಪ್ರಯತ್ನ ಮಾಡಲಾಗಿದೆ. ಇಡೀ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಹೇಗೆ ಬಿಂಬಿಸಲಾಗಿದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ವಕ್ಫ್ ಮಂಡಳಿ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಚೋದನೆ ಒಪ್ಪಿತವೇ? ಒಂದು ಸಮುದಾಯದ ವಿರುದ್ಧ ದ್ವೇಷ ಕಾರಬಹುದೇ?” ಎಂದರು.
ಆಗ ಪೀಠವು “ಪ್ರಜಾಪ್ರಭುತ್ವದಲ್ಲಿ ಈ ವಿಚಾರಗಳು ಬರುತ್ತವೆ. ಬೇರೆಯವರನ್ನು ನಾವು ಜನಾಂಗೀಯವಾದಿಗಳು ಎಂದು ಆರೋಪಿಸುತ್ತೇವೆ. ಆದರೆ, ವಿಶ್ವದಲ್ಲೇ ಅತ್ಯಂತ ಜನಾಂಗೀಯ ಸಮಾಜ ನಮ್ಮದು. ಸಮುದಾಯದ ಆಧಾರದಲ್ಲಿ ತಾರತಮ್ಯ ಮಾಡಬೇಕು ಎಂಬುದು ನಮ್ಮ ಮಾನಸಿಕತೆ. ಇದೇ ಕಾರಣಕ್ಕೆ, ಬೇರೆ ಎಲ್ಲವನ್ನೂ ಬಿಟ್ಟು ರಾಜಕಾರಣದಲ್ಲಿ ಜಾತಿ ನೋಡಿಕೊಂಡು ಸೀಟು ಹಂಚಿಕೆ ಮಾಡುತ್ತಾರೆ. ಸೀಟು ನೀಡುವಾಗ ಶೇ.50ಕ್ಕೂ ಹೆಚ್ಚಿನ ಪ್ರಮಾಣ ಜಾತಿಯ ಆಧಾರದಲ್ಲೇ ನೀಡಲಾಗುತ್ತದೆ. ರಾಜಕಾರಣಿಗಳು ಭ್ರಷ್ಟರು, ಕ್ರಿಮಿನಲ್‌ಗಳು ಎನ್ನುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ತಕ್ಕ ನಾಯಕರು ಸಿಗುತ್ತಾರೆ. ಇಲ್ಲಿ ಯಥಾ ಪ್ರಜಾ, ತಥಾ ರಾಜ. ಈಸ್ಟ್ ಇಂಡಿಯಾ ಕಂಪೆನಿಯ ಕೆಲವೇ ಕೆಲವು ಸಾವಿರದಷ್ಟು ಭದ್ರತಾ ಸಿಬ್ಬಂದಿ ನಮ್ಮನ್ನು ವಸಹಾತುಗಳನ್ನಾಗಿ ಮಾಡಿಕೊಂಡಿದ್ದರು. ಏಕೆಂದರೆ ನಮಗೆ ಭಾರತೀಯತೆ ಎಂಬುದು ತಿಳಿದಿರಲಿಲ್ಲ. ಅದು ನಮಗೆ ಬಂದ ತಕ್ಷಣ ಬ್ರಿಟಿಷರು ದೇಶ ತೊರೆದರು. ಇದು ಆಧುನಿಕ ವಸಹಾತೀಕರಣದ ಶತಮಾನ. ಕಂಪನಿ, ಕಾರ್ಪೊಟೀಕರಣ.. ಈಗ ಮತ್ತೆ ನಾವು ಹಳೆಯ ಹವ್ಯಾಸಗಳಿಗೆ ಮರಳುತ್ತಿದ್ದೇವೆ” ಎಂದು ಬೇಸರಿಸಿತು.
“ನಾವು ಮನುಷ್ಯರನ್ನು ಮನುಷ್ಯರು ಎಂದು ನೋಡಲು ನಿರಾಕರಿಸುತ್ತೇವೆ. ಯಾವ ರಾಜಕೀಯ ಪಕ್ಷ ಸಂವಿಧಾನದ 14, 19 (1) (ಎ) ಮತ್ತು 21ರಲ್ಲಿ ನಂಬಿಕೆ ಇದೆ ಎಂದು ಹೇಳಿ, ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ? ಒಲೈಕೆಯೇ ಸಮಸ್ಯೆ. ಮನುಷ್ಯರು ಮನುಷ್ಯರೇ. ದುರದೃಷ್ಟವೆಂದರೆ ಸಿದ್ಧಾಂತಗಳಿಂದ ನಾವು ಪ್ರಭಾವಿತರಾಗಿದ್ದೇವೆ. ಧರ್ಮವೇ ಅತ್ಯಂತ ಮಹತ್ತರವಾದ ಸಿದ್ಧಾಂತ. ನಮ್ಮ ಧರ್ಮ ಹೇಳುತ್ತದೆ ಎಂದು ನಾವು ಬಹುತೇಕರು ಶಾಖಾಹಾರಿಗಳು. ಹಲವು ಸ್ವಾಮೀಜಿಗಳು ಮಾಂಸಾಹಾರ ಸೇವಿಸುತ್ತಾರೆ. ಆದರೆ, ಗೋಮಾಂಸ ತಿನ್ನಲ್ಲ ಏಕೆಂದರೆ ನಮ್ಮ ಧರ್ಮ ಹೇಳುತ್ತದೆ ಎನ್ನುತ್ತಾರೆ. ಧರ್ಮ ಹೇಳುತ್ತದೆ ಎಂದು ಕೆಲವರು ಹಂದಿ ಮಾಂಸ ತಿನ್ನಲ್ಲ. ಈ ನಂಬಿಕೆಗಳು ಬೇರೆಯವರಿಗೆ ಸಮಸ್ಯೆ ಮಾಡದಿದ್ದರೆ ಅದು ಸರಿ” ಎಂದರು.
“ಧರ್ಮಕ್ಕೆ ಎರಡು ಮುಖಗಳಿವೆ. ಒಂದು ಆಧ್ಯಾತ್ಮ ಇನ್ನೊಂದು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದ ನಿಯಮಗಳು. ಕಲ್ಯಾಣ ರಾಜ್ಯ ಜಾರಿಗೆ ಬಂದ ಮೇಲೆ ಅದು ಹೋಗಿದೆ. ರಾಜ್ಯಗಳು ರಾಜಕೀಯವಾಗಿ ಮರು ವಿಂಗಡೆಯಾಗುವವರೆಗೆ ಧರ್ಮ ಮಾತ್ರ ಅದನ್ನು ಮುನ್ನಡೆಸುತ್ತಿತ್ತು. ಅದರಲ್ಲಿ ಬುಡಕಟ್ಟು ಪ್ರವೃತ್ತಿ ಇತ್ತು. ನಮ್ಮ ಸಮಾಜ ಬಿಟ್ಟು ಬೇರೆಯವರ ಜೊತೆ ಸ್ನೇಹ ಮಾಡಬಾರದು. ಅವರನ್ನು ಸಾಯಿಸಬೇಕು. ಮತಾಂತರವಾದರೆ ನೇಣು ಹಾಕುತ್ತೇವೆ, ಈ ಕಡೆ ಬಂದರೆ ಜಾತಿ ವ್ಯವಸ್ಥೆ ಇತ್ತು. ಆಗ ನಿಯಮ ಬೇಕಿತ್ತು. ಆದರೆ, ಕಾಸ್ಮೊಪಾಲಿಟನ್ ಸಮಾಜವಾಗಿರುವ ಭಾರತಕ್ಕೆ ಅದು ಬೇಕಿಲ್ಲ” ಎಂದರು.
“ಸತಿ ಪದ್ಧತಿ, ವೈವಾಹಿಕ ದೌರ್ಜನ್ಯ, ಮಹಿಳೆಯರಿಗೆ ಸಮಾನ ಹಕ್ಕು, ಬಹುಪತ್ನಿತ್ವ ಇವೆಲ್ಲವೂ ದೊಡ್ಡ ವಿಚಾರಗಳು. ನಮ್ಮ ಧರ್ಮ ಇಟ್ಟುಕೊಂಡು ಬೇರೆಯವರೆಗೆ ಸಮಸ್ಯೆ ಮಾಡುವುದೇ ಸಮಸ್ಯೆ. ಇದು ಎಲ್ಲರಿಗೂ ಅನ್ವಯಿಸುತ್ತದೆ. ದೇವರ ವಿಚಾರ ಅವರವರಿಗೆ ಬಿಟ್ಟ ವಿಚಾರ. ಸಹಬಾಳ್ವೆ ನಡೆಸುವುದು ಮುಖ್ಯ” ಎಂದಿತು.
ಅಂತಿಮವಾಗಿ ಪೀಠವು "ಆಜ್‌ತಕ್ ಪ್ರಸಾರ ಮಾಡಿರುವ ಸುಧೀರ್ ಚೌಧರಿ ನಡೆಸಿಕೊಟ್ಟಿರುವ ಸುದ್ದಿಯ ವಿಶ್ಲೇಷಣೆಯಲ್ಲಿ ಅದು ಪ್ರಚೋದನಕಾರಿಯಾಗಿದ್ದರೂ ಸರ್ಕಾರದ ನೀತಿಯ ಬಗ್ಗೆ ಸತ್ಯ ಮಾತನಾಡಲಾಗಿದೆಯೇ? ಸುಳ್ಳಾಗಿದ್ದರೆ ಅದು ಏನು? ವಿಶ್ಲೇಷಣೆಯಲ್ಲಿ ಮಾತನಾಡಿರುವುದು ಸತ್ಯ ಎಂದಾದರೆ ಅರ್ಜಿ ಪುರಸ್ಕರಿಸಲಾಗುವುದು. ನ್ಯಾಯಾಲಯ ಅದು ಸುಳ್ಳು ಎಂಬ ಅಭಿಮತ ಹೊಂದಿ, ಪ್ರಚೋದನೆಯ ಅಂಶ ಇದೆ ಎಂಬ ತೀರ್ಮಾನಕ್ಕೆ ಬಂದರೆ ಅರ್ಜಿ ವಜಾಗೊಳಿಸಲಾಗುವುದು” ಎಂದು ಹೇಳಿತು. ಅಲ್ಲದೇ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿ, ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಆಜ್‌ತಕ್ ಮತ್ತು ಸುಧೀರ್ ಚೌಧರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ರಾಜ್ಯ ಸರ್ಕಾರದ ನೀತಿಯ ವಿಶ್ಲೇಷಣೆ ಮಾಡಿದ್ದು, ಅದರಲ್ಲಿ ಗಲಭೆ ಪ್ರಚೋದನೆ ನೀಡುವ ಯಾವುದೇ ಅಂಶವಿಲ್ಲ” ಎಂದರು.
ವಕೀಲ ಬಾಲನ್ ಅವರು “ಐಪಿಸಿ ಸೆಕ್ಷನ್ 153ಎ, 505ಗೆ ಸಂಬಂಧಿಸಿದಂತೆ ವಾದಾಂಶ ಸಲ್ಲಿಸಲಾಗುವುದು” ಎಂದರು.