ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಅವರಿಗೆ ಕೋಮು ದ್ವೇಷ ಭಾಷಣ ಮಾಡುವುದು ಹವ್ಯಾಸವಾಗಿದ್ದು, ಸಮುದಾಯಗಳ ಮಾತಿರಲಿ, ಅವರು ದೇವರುಗಳನ್ನೂ ಬಿಟ್ಟಿಲ್ಲ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ಪ್ರತಿಪಾದಿಸಿತು.
ಕೋಮು ದ್ವೇಷದ ಮಾತುಗಳನ್ನಾಡಿದ ಸಂಬಂಧ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾದ ವಿಡಿಯೋ ಆಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಸತ್ಯೇಂದರ್ ಕುಮಾರ್ ಆಂಟಿಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿರುವ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ. ಬಿಎನ್‌ಎಸ್‌ಎಸ್ ಸೆಕ್ಷನ್ 35(3) ಅಡಿ ಪೊಲೀಸರು ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿಲ್ಲ” ಎಂದಿತು.
ಇದಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ಆಸ್ಮಾ ಕೌಸರ್ ಅವರು “ಅರ್ನೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವಂತೆ ಬಿಎನ್‌ಎಸ್‌ಎಸ್ ಸೆಕ್ಷನ್ 35(3) ಅಡಿ ನೋಟಿಸ್ ನೀಡಲಾಗಿದ್ದು, ಅದಕ್ಕೆ ಪ್ರತಿಕ್ರಿಯೆ ಪಡೆಯಲಾಗಿದೆ. ಅವರ ಮನೆಗೆ ನೋಟಿಸ್ ಅಂಟಿಸಲಾಗಿತ್ತು. ಆನಂತರ ಪ್ರಭಾಕರ್ ಭಟ್ ಅವರು ಧ್ವನಿ ಮಾದರಿ ನೀಡಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಎಂದರು.
“ದೂರುದಾರರು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಎಫ್‌ಐಆರ್ ದಾಖಲಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಪ್ರಭಾಕರ್ ಭಟ್ ಅವರ ಭಾಷಣವು ಕಾನೂನಿಗೆ ವಿರುದ್ಧವಾಗಿದ್ದು, ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ದ್ವೇಷ ಕಾರಿದ್ದಾರೆ. ಇತರರನ್ನು ಪ್ರಚೋದಿಸಿದ್ದಾರೆ. ಪ್ರಭಾಕರ್ ಭಟ್ ಅವರು ರಾಜಕಾರಣಿಯಲ್ಲ. ಇದು ರಾಜಕೀಯ ಪ್ರೇರಿತ ದ್ವೇಷ ಭಾಷಣವಲ್ಲ. ಯುವಕರನ್ನು ಅನ್ಯ ಕೋಮುಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ವಿವೇಕಾನಂದ ಜಯಂತಿಯಲ್ಲಿ ಪ್ರಭಾಕರ್ ಭಟ್ ಮಾಡಿರುವ ಭಾಷಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಸಹ ಸಲ್ಲಿಸಲಾಗಿದೆ. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದು, ಅಲ್ಲಿ 1,500-2,000 ವಿದ್ಯಾರ್ಥಿಗಳಿದ್ದಾರೆ. ಅಲ್ಲಿ ಕಲಿಯುತ್ತಿರುವ ಎಲ್ಲವೂ ಯುವ ಮನಸ್ಸುಗಳು, ಭಾಷಣವು ಅವರ ಮನಸ್ಸಿನ ಮೇಲೆ ಬೇರೆಯದೇ ಪರಿಣಾಮ ಬೀರುತ್ತದೆ” ಎಂದರು.
ಪ್ರಭಾಕರ್ ಭಟ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿಲ್ಲ. ಮನೆಯ ಗೋಡೆಗೆ ಪೊಲೀಸರು ನೋಟಿಸ್ ಅಂಟಿಸಿ ಹೋಗಿದ್ದರು. 21.1.2026ರಂದು ಎಫ್‌ಐಆರ್ ಆಗಿದ್ದು, 22ರಂದು ಪ್ರಭಾಕರ್ ಭಟ್ ಧ್ವನಿ ಮಾದರಿ ನೀಡಿದ್ದಾರೆ” ಎಂದರು.
“ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಆಧರಿಸಿ ಸುತ್ತೋಲೆ ಹೊರಡಿಸಿದ್ದಾರೆ. ಹಾಲಿ ಪ್ರಕರಣವು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ಗೆ ಸಂಬಂಧಿಸಿರುವುದರಿಂದ ಮಾರ್ಗಸೂಚಿಯನ್ನು ರೂಪಿಸಬೇಕು. ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಸಲ್ಲಿಸಿದ್ದೇನೆ. ದೂರುದಾರರಿಗೆ ನೋಟಿಸ್ ನೀಡಲಾಗಿಲ್ಲ. ದೂರುದಾರರು ಬಾಧಿತ ವ್ಯಕ್ತಿಯಲ್ಲ” ಎಂದರು.
ವಾದ-ಪ್ರತಿವಾದ ಆಲಿಸಿದ ಪೀಠವು “ಅರ್ಜಿ ವಜಾ ಮಾಡಬೇಕು ಎಂದು ಆಸ್ಮಾ ಕೌಸರ್ ಕೋರಿದ್ದಾರೆ, 6.2.2026ರಂದು ಮಧ್ಯಂತರ ಆದೇಶ ಮಾಡಲಾಗಿದ್ದು, ದೂರುದಾರರಿಗೆ ನೋಟಿಸ್ ಜಾರಿ ಮಾಡಲಾಗಿಲ್ಲ. ಅವರಿಗೆ ಹ್ಯಾಂಡ್ ಸಮನ್ಸ್ ನೀಡಬೇಕು. ಅದನ್ನು ಸೋಮವಾರದೊಳಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಮಧ್ಯಂತರ ಆದೇಶ ವಿಸ್ತರಿಸಲಾಗಿದ್ದು, ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಲಾಗಿದೆ” ಎಂದು ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಪ್ರಭಾಕರ್ ಭಟ್ ವಿರುದ್ಧದ ದೂರಿನಲ್ಲಿ, ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿದ್ದ ಪ್ರಭಾಕರ್ ಭಟ್ ಅವರು ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯಗಳ ವಿರುದ್ಧ ದ್ವೇಷ ಹರಡುವಂತ ಭಾಷಣ ಮಾಡಿದ್ದಾರೆ. ಮೊದಲಿಗೆ ಮೊಘಲರು ಆನಂತರ ಕ್ರಿಶ್ಚಿಯನ್ನರು ದಾಳಿ ನಡೆಸಿದ್ದಾರೆ. ಪ್ರತ್ಯೇಕ ಪಾಕಿಸ್ತಾನ ನೀಡದೇ ಇದ್ದರೆ ಹಿಂದೂಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದ್ದರು. ದೇವಸ್ಥಾನ ಒಡೆದು, ಗೋವು ಕತ್ತರಿಸಿ, ತಾಯಂದಿರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಲಕ್ಷಾಂತರ ಹಿಂದೂಗಳ ಹತ್ಯೆ ಮಾಡಿದ್ದಾರೆ. ಆವತ್ತಿನ ಚಿತ್ರ ಮತ್ತೆ ಇಂದೂ ಕಾಣುತ್ತಿದೆ ಎಂದು 12.01.2026ರಂದು ಭಾಷಣ ಮಾಡಿದ್ದರು. ಈ ಭಾಷಣವನ್ನು ವಿಕಸನ ಟಿವಿಯು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿತ್ತು ಎಂದು ಆರೋಪಿಸಲಾಗಿತ್ತು.
ಇದನ್ನು ಆಧರಿಸಿ ಕಲ್ಲಡ್ಕ ಪ್ರಭಾಕರ್ ಭಟ್, ವಿಕಸನ ಯೂಟ್ಯೂಬ್ ಮತ್ತು ಕಾರ್ಯಕ್ರಮದ ಸಂಘಟಕರ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 196,299,302,353(2) ಜೊತೆಗೆ 3(5) ಅಡಿ ಪ್ರಕರಣ ದಾಖಲಿಸಲಾಗಿದೆ.