Bombay High Court 
ಸುದ್ದಿಗಳು

ಬಂಧನಕ್ಕೆ ಆಧಾರ ಏನೆಂಬುದನ್ನು ಬಂಧಿತ ವ್ಯಕ್ತಿಯ ಪತ್ನಿಗೆ ತಿಳಿಸಿದರಷ್ಟೇ ಸಾಲದು, ವಾರೆಂಟ್ ಅಗತ್ಯ: ಬಾಂಬೆ ಹೈಕೋರ್ಟ್

ಆರೋಪಿಯ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿದ ನ್ಯಾಯಾಲಯ ರಿಮಾಂಡ್ ಆದೇಶ ರದ್ದುಗೊಳಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.

Bar & Bench

ಸಿಆರ್‌ಪಿಸಿ ಅಡಿಯಲ್ಲಿ ಬಂಧನದ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ವಾರಂಟ್ ಇಲ್ಲದೆಯೇ ಬಂಧನಕ್ಕೆ ಕಾರಣ ಏನೆಂಬುದನ್ನು ಬಂಧಿತ ವ್ಯಕ್ತಿಯ ಪತ್ನಿಗೆ ತಿಳಿಸುವುದು ಸಾಕಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸುವ ವೇಳೆ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ತಿಳಿಸಿದೆ.

ಬಂಧಿತ ವ್ಯಕ್ತಿಗೆ ಆತನ ಬಂಧನಕ್ಕೆ ಕಾರಣಗಳನ್ನು ತಿಳಿಸದ ಪೊಲೀಸರು ಆರೋಪಿ ನೀಡಿದ್ದ ಸಂಖ್ಯೆ ಬಳಸಿಕೊಂಡು ಆತನ ಪತ್ನಿಗಷ್ಟೇ ಈ ಮಾಹಿತಿ  ತಿಳಿಸಿದ್ದಾರೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಆಗ ಪೀಠ, ವಾರೆಂಟ್‌ ಇಲ್ಲದೆ ಬಂಧಿತನಾದ ವ್ಯಕ್ತಿಗೆ ಆತನ ಬಂಧನಕ್ಕೆ ಆಧಾರ ಏನೆಂಬುದನ್ನು ತಿಳಿಸಬೇಕು ಎಂಬ ಸಿಆರ್‌ಪಿಸಿ ಸೆಕ್ಷನ್‌ 50ರ ಅವಶ್ಯಕತೆಯನ್ನು ಇದು ಪೂರೈಸುವುದಿಲ್ಲ ಎಂದಿತು.

ಆರೋಪಿಯನ್ನು 2023ರ ನವೆಂಬರ್ 1ರಂದು ಕರಾಡ್ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಕೊಲೆ, ಅಪಹರಣ ಸೇರಿದಂತೆ ಗಂಭೀರ ಆರೋಪ ಎದುರಿಸುತ್ತಿದ್ದ ಈತನನ್ನು ತನಿಖೆಯ ವೇಳೆ ಆರೋಪಿಯನ್ನಾಗಿ ಸೇರಿಸಲಾಗಿತ್ತು. ಆದರೆ ತನ್ನ ಬಂಧನಕ್ಕೆ ಕಾರಣಗಳೇನು ಎಂಬ ಬಗ್ಗೆ ಲಿಖಿತವಾಗಿ ತಿಳಿಸಿರಲಿಲ್ಲ. ಇದು ಸಾಂವಿಧಾನಿಕ ಆದೇಶ ಮತ್ತು ಸಿಆರ್‌ಪಿಸಿ ಸೆಕ್ಷನ್ 50ರ ಅವಶ್ಯಕತೆಗಳನ್ನು ಉಲ್ಲಂಘಿಸುತ್ತದೆ ಎಂಬುದು ಆರೋಪಿಯ ವಾದವಾಗಿತ್ತು.

ಆದರೆ ಡಿಕೆ ಬಸು ಪ್ರಕರಣದಲ್ಲಿ ನೀಡಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಂಧನ ನಡೆದಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆರೋಪಿಯ ಪತ್ನಿಗೆ ಆತನ ಬಂಧನದ ಬಗ್ಗೆ ತಿಳಿಸಲಾಗಿದ್ದು ರಿಮಾಂಡ್ ವರದಿ ಒದಗಿಸುವುದು ಸೇರಿದಂತೆ ಅಗತ್ಯ ಶಿಷ್ಟಾಚಾರಗಳನ್ನು ಪಾಲಿಸಲಾಗಿದೆ ಎಂದು ಅದು ಹೇಳಿತ್ತು.

ವಾದ ಆಲಿಸಿದ ಕೋರ್ಟ್‌ ಪತ್ನಿಗೆ ಬಂಧನದ ಕಾರಣ ತಿಳಿಸಿದರಷ್ಟೇ ಸಾಲದು ಎಂದಿತು. ಅಂತೆಯೇ ಆರೋಪಿಯ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿದ ನ್ಯಾಯಾಲಯ ರಿಮಾಂಡ್ ಆದೇಶ ರದ್ದುಗೊಳಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.