ನ್ಯಾಯಾಂಗ ನಿಂದನೆ ಪ್ರಕರಣ: ನಟ ಚೇತನ್‌ಗೆ ₹5 ಸಾವಿರ ದಂಡ ವಿಧಿಸಿ ವಾರೆಂಟ್‌ ಹಿಂಪಡೆದ ಹೈಕೋರ್ಟ್‌

ದಂಡದ ಮೊತ್ತವನ್ನು ಹೈಕೋರ್ಟ್‌ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯ ಘಟಕಕ್ಕೆ ಪಾವತಿಸಬೇಕು. ಹಾಗೆಯೇ ಹೊಸದಾಗಿ ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌ ಸಲ್ಲಿಸಿ ಜಾಮೀನು ಪಡೆಯಬೇಕು ಎಂದು ಆದೇಶಿಸಿದ ಪೀಠ.
Actor Chetan and Karnataka HC
Actor Chetan and Karnataka HC
Published on

ಹಿಜಾಬ್‌ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ದ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಆರೋಪದ ಮೇಲೆ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ನಟ ಚೇತನ್‌ ಕುಮಾರ್‌ ಅಹಿಂಸಾ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ₹5,000 ದಂಡ ವಿಧಿಸುವ ಮೂಲಕ ಅವರ ವಿರುದ್ಧ ಹೊರಡಿಸಿದ್ದ ಜಾಮೀನುರಹಿತ ವಾರೆಂಟ್‌ ಅನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಹಿಂಪಡೆದಿದೆ.

ಬೆಂಗಳೂರಿನ ಚೇತನ್‌ ಕುಮಾರ್‌ ಅಹಿಂಸಾ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ತೌಹೀದ್‌ ಜಮಾತ್‌ ಅಧ್ಯಕ್ಷ ಆರ್‌ ರಹಮತುಲ್ಲಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್‌ ಭಾರದ್ವಾಜ್‌ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಕೆ ರಾಜೇಶ್‌ ರೈ ಅವರ ವಿಭಾಗೀಯ ಪೀಠ ನಡೆಸಿತು.

ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ನಟ ಚೇತನ್‌ ಪರವಾಗಿ ವಕೀಲ ಕಾಶಿನಾಥ್‌ ಜೆ ಡಿ ಅವರು 14.09.2024ರಂದು ನ್ಯಾಯಾಲಯವು ಹೊರಡಿಸಿರುವ ಜಾಮೀನುರಹಿತ ವಾರೆಂಟ್‌ ಹಿಂಪಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು. ಇದಕ್ಕಾಗಿ ಚೇತನ್‌ಗೆ ₹5,000 ರೂಪಾಯಿ ದಂಡ ವಿಧಿಸಿದ್ದು, ಅದನ್ನು ಹೈಕೋರ್ಟ್‌ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯ ಘಟಕಕ್ಕೆ ಪಾವತಿಸಬೇಕು. ಅದಕ್ಕೆ ಸಂಬಂಧಿಸಿದ ಮೆಮೊ ಸಲ್ಲಿಸಬೇಕು ಎಂದು ಆದೇಶಿಸಿದೆ.

ಈ ಹಿಂದೆಯೂ ಎರಡನೇ ಆರೋಪಿಯಾಗಿರುವ ಚೇತನ್‌ ವಿರುದ್ಧ ಜಾಮೀನುರಹಿತ ವಾರೆಂಟ್‌ ಹೊರಡಿಸುವ ಮೂಲಕ ಅವರನ್ನು ನ್ಯಾಯಾಲಯದ ಮುಂದೆ ಬರುವಂತೆ ಮಾಡಲಾಗಿತ್ತು. ಆನಂತರ ₹75,000 ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ನೀಡಲಾಗಿತ್ತು. ಒಂದೊಮ್ಮೆ ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಬಾಂಡ್‌ ರದ್ದಾಗಲಿದೆ ಎಂದು ಆದೇಶಿಸಲಾಗಿತ್ತು. ಆದೇಶ ಪಾಲಿಸಲು ವಿಫಲವಾಗಿರುವುದರಿಂದ ಈಗ ಚೇತನ್‌ ಜಾಮೀನು ರದ್ದಾಗಿದ್ದು, ಹೊಸದಾಗಿ ಅವರು ₹1,00,000 ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತೆಯನ್ನು ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್‌ ಅವರಿಗೆ ಒಂದು ವಾರದಲ್ಲಿ ಒದಗಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Also Read
[ಹಿಜಾಬ್ ತೀರ್ಪು] ನಟ ಚೇತನ್, ರಹಮತುಲ್ಲಾ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಎಜಿ ಸಮ್ಮತಿ

ಈ ಮಧ್ಯೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ವಿಳಂಬವಾಗಿರುವುದರಿಂದ ಅರ್ಜಿಯು ಅನೂರ್ಜಿತವಾಗಲಿದೆ ಎಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ಒಂದನೇ ಆರೋಪಿ ಆರ್‌ ರಹಮತುಲ್ಲಾ ಪರ ವಕೀಲ ಎ ವೇಲನ್‌ ಆಕ್ಷೇಪಿಸಿದರು. ಇದಕ್ಕೆ ಪೀಠವು ಈ ಹಂತದಲ್ಲಿ ಅದನ್ನು ಪರಿಗಣಿಸಲಾಗದು ಎಂದಿತು.

ಅಂತಿಮವಾಗಿ ಪೀಠವು ಆರೋಪ ನಿಗದಿಗೂ ಮುನ್ನ ಆರೋಪಿಗಳನ್ನು ಆಲಿಸಲು ವಿಚಾರಣೆಯನ್ನು ನವೆಂಬರ್‌ 6ಕ್ಕೆ ನಿಗದಿಗೊಳಿಸಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ ಮಧುಸೂದನ್‌ ಅಡಿಗ ವಾದಿಸಿದರು.

Kannada Bar & Bench
kannada.barandbench.com