bulldozer 
ಸುದ್ದಿಗಳು

ಪೊಲೀಸರಿಂದ ಮನೆಗಳ ಧ್ವಂಸ: ಸಂತ್ರಸ್ತರಿಗೆ ಪರಿಹಾರ ನೀಡುವಂತೆ ತಾಕೀತು ಮಾಡಿದ ಗುವಾಹಟಿ ಹೈಕೋರ್ಟ್

ಘಟನೆಯ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

Bar & Bench

ಪೊಲೀಸರ ಆದೇಶದಂತೆ ನಡೆದ ಅಕ್ರಮ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್‌ ಮಂಗಳವಾರ ತಾಕೀತು ಮಾಡಿದೆ. [ಎಕ್ಸ್‌ ಮತ್ತು ಅಸ್ಸಾಂ ಸರ್ಕಾರ ನಡುವಣ ಪ್ರಕರಣ].

ಘಟನೆಯ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಇನ್ನು ಹದಿನೈದು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಮುಕ್ತಾಯಗೊಳಿಸಿದ ಮುಖ್ಯ ನ್ಯಾಯಮೂರ್ತಿ ಆರ್‌ಎಂ ಛಾಯಾ ಮತ್ತು ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ಅವರಿದ್ದ ಪೀಠ “ಅಧಿಕಾರಿಗಳ ಅಕ್ರಮ ಕಾರ್ಯಾಚರಣೆಯಿಂದಾಗಿ ತೊಂದರೆ ಅನುಭವಿಸಿದ ವ್ಯಕ್ತಿಗಳಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಕ್ರಮ ಕೈಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಸೂಚಿಸಿತು.

ತನಿಖೆಯ ನೆಪದಲ್ಲಿ ಆರೋಪಿಗಳ ಮನೆ ಧ್ವಂಸಗೊಳಿಸುವ ಪ್ರವೃತ್ತಿ ಬಗ್ಗೆ ಗುವಾಹಟಿ ಹೈಕೋರ್ಟ್ ಕಳೆದ ನವೆಂಬರ್‌ನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಪೊಲೀಸ್‌ ಠಾಣೆಗೆ ಬೆಂಕಿಯಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಐವರು ಆರೋಪಿಗಳ ಮನೆ ನೆಲಸಮಗೊಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಅದು ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿತ್ತು.

“ಅಪರಾಧದ ತನಿಖೆಗಾಗಿ ಪೊಲೀಸರು ಬುಲ್ಡೋಜರ್‌ ಬಳಸಬಹುದು ಎಂಬ ಯಾವುದೇ ಕ್ರಿಮಿನಲ್‌ ಕಾನೂನು ಇದ್ದರೆ ನೀವದನ್ನು (ಸರ್ಕಾರ) ನಮಗೆ ತೋರಿಸಿ?” ಎಂದು ಸರ್ಕಾರಿ ವಕೀಲರನ್ನು ಮುಖ್ಯ ನ್ಯಾಯಮೂರ್ತಿ ಛಾಯಾ ಕಟುವಾಗಿ ಪ್ರಶ್ನಿಸಿದ್ದರು.

ವರದಿಗಳ ಪ್ರಕಾರ ಪೊಲೀಸ್‌ ವಶದಲ್ಲಿದ್ದ ಗ್ರಾಮಸ್ಥನೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮದ ಜನ ನಾಗಾಂವ್‌ ಜಿಲ್ಲೆಯ ಬಟದ್ರವಾ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗ್ರಾಮದ ಐವರು ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸುವಂತೆ ಆದೇಶಿಸಿದ್ದರು.