ಆರೋಪಿಗಳ ಮನೆ ಧ್ವಂಸ ಮಾಡಿದ ಅಸ್ಸಾಂ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗುವಾಹಟಿ ಹೈಕೋರ್ಟ್

ಅಪರಾಧ ತನಿಖೆಗಾಗಿ ಮನೆ ಧ್ವಂಸ ಮಾಡಬೇಕೆಂದು ಯಾವ ಕಾನೂನು ಹೇಳುತ್ತದೆ ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಾಲಯ. ಸರ್ಕಾರದ ಪರ ವಕೀಲರ ಸಮಜಾಯಿಷಿಗೆ ಅತೃಪ್ತಿ.
bulldozer
bulldozer

ತನಿಖೆಯ ನೆಪದಲ್ಲಿ ಆರೋಪಿಗಳ ಮನೆ ಧ್ವಂಸಗೊಳಿಸುವ ಪ್ರವೃತ್ತಿ ಬಗ್ಗೆ ಗುವಾಹಟಿ ಹೈಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಪೊಲೀಸ್‌ ಠಾಣೆಗೆ ಬೆಂಕಿಯಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಐವರು ಆರೋಪಿಗಳ ಮನೆ ನೆಲಸಮಗೊಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಅದು ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿತು.

ಮನೆಗಳನ್ನು ಧ್ವಂಸ ಮಾಡುವ ಇಂತಹ ಕ್ರಮಕ್ಕೆ ಯಾವ ಕಾನೂನು ಅನುಮತಿ ನೀಡುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆ)  ಆರ್‌ ಎಂ ಛಾಯಾ ಮತ್ತು ನ್ಯಾ. ಸೌಮಿತ್ರಾ ಸೈಕಿಯಾ ಅವರಿದ್ದ ಪೀಠ ತಾಕೀತು ಮಾಡಿತು.

“ಅಪರಾಧದ ತನಿಖೆಗಾಗಿ ಪೊಲೀಸರು ಬುಲ್ಡೋಜರ್‌ ಬಳಸಬಹುದು ಎಂಬ ಯಾವುದೇ ಕ್ರಿಮಿನಲ್‌ ಕಾನೂನು ಇದ್ದರೆ ನೀವದನ್ನು (ಸರ್ಕಾರ) ನಮಗೆ ತೋರಿಸಿ?” ಎಂದು ಸರ್ಕಾರಿ ವಕೀಲರನ್ನು ಸಿಜೆ ಛಾಯಾ ಕಟುವಾಗಿ ಪ್ರಶ್ನಿಸಿದರು.

Also Read
ಪ್ರತಿಭಟನಾಕಾರರ ಮನೆ ಧ್ವಂಸ: ಮಧ್ಯ ಪ್ರವೇಶಿಸುವಂತೆ ಸಿಜೆಐಗೆ ನಿವೃತ್ತ ನ್ಯಾಯಮೂರ್ತಿಗಳ ಪತ್ರ

ಸಮಜಾಯಿಷಿ ನೀಡಲು ಸರ್ಕಾರಿ ವಕೀಲರು ಯತ್ನಿಸಿದಾಗ ನ್ಯಾ. ಛಾಯಾ “ಅವರು ಎಸ್‌ಪಿ ಆಗಿರಬಹುದು. ಆದರೆ ನಿಮಗಿಂತಲೂ ಉನ್ನತ ಅಧಿಕಾರಿಗಳು ಕೂಡ ಕಾನೂನು ಹಾದಿಯಲ್ಲೇ ಸಾಗಬೇಕು. ಅವರು ಪೊಲೀಸ್‌ ಇಲಾಖೆ ಮುಖ್ಯಸ್ಥರು ಎಂಬ ಒಂದೇ ಕಾರಣಕ್ಕೆ ಯಾರದೋ ಮನೆಯನ್ನು ಧ್ವಂಸಗೊಳಿಸಲಾಗದು. ಇಂತಹ ಕ್ರಮಕ್ಕೆ ಅನುಮತಿ ನೀಡಿದರೆ ದೇಶದ ಯಾರೊಬ್ಬರೂ ಸುರಕ್ಷಿತವಾಗಿ ಇರುವುದಿಲ್ಲ” ಎಂದು ಚಾಟಿ ಬೀಸಿದರು.  

“ಲಘುವಾಗಿ ಹೇಳುವುದಾದರೆ ಇಂತಹ ದೃಶ್ಯಗಳನ್ನು ಹಿಂದಿ ಸಿನಿಮಾಗಳಲ್ಲಿ ಕೂಡ ನೋಡಲು ಸಾಧ್ಯವಿಲ್ಲ. ನಿಮ್ಮ ಎಸ್‌ಪಿಯ ಕತೆಯನ್ನು ನಿರ್ದೇಶಕ  ರೋಹಿತ್‌ ಶೆಟ್ಟಿ ಅವರಿಗೆ ನೀಡಿ ಅವರು ಒಂದೊಳ್ಳೆ ಸಿನಿಮಾ ಮಾಡುತ್ತಾರೆ” ಎಂದು ನ್ಯಾಯಾಲಯ ಕುಟುಕಿತು.  

ಇದೇನು ಗುಂಪುಗಳ ನಡುವಿನ ಮಾರಾಮಾರಿಯೇ (ಗ್ಯಾಂಗ್‌ ವಾರ್‌) ಅಥವಾ ಪೊಲೀಸ್‌ ಕಾರ್ಯಾಚರಣೆಯೇ? ಗುಂಪುಗಳ ನಡುವಿನ ಮಾರಾಮಾರಿಯಲ್ಲಿ ಒಬ್ಬರು ಮತ್ತೊಬ್ಬರ ಮನೆಯನ್ನು ಧ್ವಂಸಗೊಳಿಸಿದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು ಅದರೆ ಇಂತಹ ಪೊಲೀಸ್‌ ಕಾರ್ಯಾಚರಣೆಯನ್ನು ನಾವೆಲ್ಲೂ ನೋಡಿಲ್ಲ," ಎಂದು ನ್ಯಾಯಾಲಯವು ಪೊಲೀಸರ ಕೃತ್ಯಕ್ಕೆ ತನ್ನ ಗಂಭೀರ ಅಸಮಾಧಾನ ಸೂಚಿಸಿತು.

ಜೊತೆಗೆ “ಹೀಗಾಗಿಯೇ ಕಾನೂನು ಮತ್ತು ಸುವ್ಯವಸ್ಥೆ ಎಂಬ ಪದಗಳನ್ನು ಉದ್ದೇಶಪೂರ್ವಕವಾಗಿ ಒಟ್ಟೊಟ್ಟಿಗೆ ಬಳಸಲಾಗುತ್ತದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು ಅದೇ ನಿಮಗೆ ಎಲ್ಲವನ್ನೂ ಹೇಳುತ್ತದೆ. ಇದರಿಂದ ಹೊರಬರಲು ಒಂದು ದಾರಿ ಕಂಡುಕೊಳ್ಳಿ” ಎಂದು ಅದು ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯು (ಎಸ್‌ಪಿ) ತಮ್ಮ ಮುಖ ಉಳಿಸಿಕೊಳ್ಳುವ ಸಲುವಾಗಿ ವರದಿ ನೀಡುವುದರಿಂದ ಅವರಿಂದ ನ್ಯಾಯಾಲಯಕ್ಕೆ ಯಾವುದೇ ಉಪಯೋಗವಿಲ್ಲ ಎಂದ ಪೀಠವು ಹಾಗಾಗಿ ಪ್ರಕರಣವನ್ನು ಪೊಲೀಸ್‌ ಮಹಾನಿರ್ದೇಶಕರ ಗಮನಕ್ಕೆ ತರಲು ರಾಜ್ಯದ ಪರ ವಕೀಲರಿಗೆ ಸೂಚಿಸಿತು.

"ಈ ಬಗ್ಗೆ ಡಿಜಿಪಿ ಅವರ ಗಮನಕ್ಕೆ ತನ್ನಿ, ಇಲ್ಲದೆ ಹೋದಲ್ಲಿ ಈ ಪ್ರಕರಣ ಪರಿಹಾರವಾಗದು. ಇದೇ ವೇಳೆ ಒಂದನ್ನು ಅರ್ಥಮಾಡಿಕೊಳ್ಳಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಈ ರೀತಿಯಲ್ಲಿ ಅಲ್ಲ. ನೀವು ಯಾವುದೇ ವ್ಯಕ್ತಿಯ ವಿರುದ್ಧ ಅವರು ಮಾಡಿದ ತಪ್ಪುಗಳಿಗಾಗಿ ವಿಚಾರಣೆ ಕೈಗೊಳ್ಳಬಹುದು. ಅದರ ಹೊರತಾಗಿ, ಹೀಗೆ ಯಾರದೋ ಮನೆಯನ್ನು ಧ್ವಂಸ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು?" ಎಂದು ಪೀಠವು ಕಿವಿ ಹಿಂಡಿತು.

ಪೊಲೀಸ್‌ ಅಧಿಕಾರಿಗಳ ಪ್ರತಿಕ್ರಿಯೆ ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕರಣವನ್ನು ಡಿ. 13ಕ್ಕೆ ಮುಂದೂಡಲಾಯಿತು.

Related Stories

No stories found.
Kannada Bar & Bench
kannada.barandbench.com