Karnataka HC and Justice Rajendra Badamikar
Karnataka HC and Justice Rajendra Badamikar 
ಸುದ್ದಿಗಳು

[ಪರಿಹಾರ ನಿರಾಕರಣೆ] ಕ್ರಿಶ್ಚಿಯನ್‌ ಧರ್ಮಕ್ಕೆ ಪತ್ನಿ ಮತಾಂತರದಿಂದ ಮದುವೆ ಅನೂರ್ಜಿತ; ಹಕ್ಕುಗಳು ರದ್ದು: ಹೈಕೋರ್ಟ್‌

Bar & Bench

ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಪತಿಯಿಂದ ಜೀವನಾಂಶ ಕೋರಿದ್ದ ಪತ್ನಿಗೆ ಆಕೆಯು ಕ್ರಿಶ್ಚಿಯನ್‌ ಧರ್ಮಕ್ಕೆ ಪರಿವರ್ತಿತಳಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಎಲ್ಲ ಹಕ್ಕುಗಳು ರದ್ದಾಗಿವೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ತನ್ನ ಆದೇಶದಲ್ಲಿ ತಿಳಿಸಿದೆ.

ಪತ್ನಿಗೆ 4 ಲಕ್ಷ ರೂಪಾಯಿ ಪಾವತಿಸುವಂತೆ ಬೆಂಗಳೂರಿನ ಅಧೀನ ನ್ಯಾಯಾಲಯ ಮಾಡಿರುವ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಎರಡು ಅಧೀನ ನ್ಯಾಯಾಲಯಗಳು ಪತ್ನಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳಿವೆ. ಇದನ್ನು ಪತ್ನಿ ಪ್ರಶ್ನಿಸಿಲ್ಲ. ಮುಂದುವರಿದು ಪತ್ನಿಯು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದು, ಆಕೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡ ದಿನವೇ ಆಕೆಗೆ ಲಭ್ಯವಾಗಿರುವ ಹಕ್ಕುಗಳು ರದ್ದಾಗಲಿವೆ. ಉಭಯ ಪಕ್ಷಕಾರರ ನಡುವೆ ವಿಚ್ಚೇದನವಾಗಿಲ್ಲ. ಪತ್ನಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿರುವುದರಿಂದ ಮದುವೆ ರದ್ದಾಗಲಿದೆ. ಈ ಸಂಬಂಧ ಯಾವುದೇ ಸಕ್ಷಮ ನ್ಯಾಯಾಲಯವು ಯಾವುದೇ ನಿರ್ದಿಷ್ಟ ಘೋಷಣೆ ಮಾಡಿಲ್ಲ. ಅದಾಗ್ಯೂ, ಪತ್ನಿಯು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿರುವುದು ಒಪ್ಪಿತ ವಿಚಾರವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಪತಿಯು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಪತ್ನಿಯು ತನ್ನ ಉಸ್ತುವಾರಿ ನೋಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದ ಕಾರಣ ಆಕೆಗೆ ಅಧೀನ ನ್ಯಾಯಾಲಯವು ಪರಿಹಾರ ಪಾವತಿಸುವಂತೆ ಪತಿಗೆ ಆದೇಶಿಸಿದೆ. ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 22ರ ಅಡಿ ಕೌಟುಂಬಿಕ ದೌರ್ಜನ್ಯ ಸಾಬೀತಾದರೆ ಮಾತ್ರ ಪರಿಹಾರ ನೀಡಬಹುದಾಗಿದೆ. ಹಾಲಿ ಪ್ರಕರಣದಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾದ ತಕ್ಷಣ ಪತ್ನಿಯು ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿದ್ದಾಳೆ. ಅದಾಗ್ಯೂ, ಮೇಲ್ಮನವಿ ನ್ಯಾಯಾಲಯವ ಆಕೆಗೆ 4 ಲಕ್ಷ ಪರಿಹಾರ ಪಾವತಿಸುವಂತೆ ಆದೇಶಿಸುವ ಮೂಲಕ ತಪ್ಪೆಸಗಿದೆ. ಈ ನೆಲೆಯಲ್ಲಿ ಪರಿಹಾರ ಪಾವತಿಸಲು ಆದೇಶಿಸಿದ್ದ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಮೂಲದ ದಂಪತಿಯು 2000ದ ಸೆಪ್ಟೆಂಬರ್‌ 10ರಂದು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಬಾಲ್ಯದಲ್ಲಿಯೇ ಪುತ್ರ ಸಾವನ್ನಪ್ಪಿದ್ದಾನೆ. ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪತಿ-ಪತ್ನಿ ದೂರವಾಗಿದ್ದರು. ಈ ಮಧ್ಯೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಪತ್ನಿಯು ಪತಿಯ ವಿರುದ್ಧ ದಾವೆ ಹೂಡಿದ್ದಳು. ಪತ್ನಿಯು ವರದಕ್ಷಿಣೆ ಕಿರುಕುಳ ಪ್ರಕರಣ ಸಾಬೀತುಪಡಿಸಲು ವಿಫಲಳಾಗಿದ್ದಾಳೆ. ಹೀಗಾಗಿ, ಹಣಕಾಸಿನ ನೆರವಿಗೆ ಅರ್ಹಳಲ್ಲ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಆಕೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೀವನಾಂಶ ನಿರಾಕರಿಸಿ, ಪರಿಹಾರದ ರೂಪದಲ್ಲಿ 4 ಲಕ್ಷ ರೂಪಾಯಿ ಪಾವತಿಸುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯನ್ನು ಈಗ ಹೈಕೋರ್ಟ್‌ ಪುರಸ್ಕರಿಸಿದೆ.