ಜೊತೆಗೂಡಿ ಬಾಳಲು ಆದೇಶವಿದ್ದರೂ ಪತ್ನಿ ಅದನ್ನು ಪಾಲಿಸದಿರುವುದು ವಿವಾಹ ವಿಚ್ಚೇದನಕ್ಕೆ ಆಧಾರ: ಹೈಕೋರ್ಟ್‌

“ಕೌಟುಂಬಿಕ ನ್ಯಾಯಾಲಯ ಪ್ರಕರಣದ ಅಂಶಗಳನ್ನು ಪರಿಗಣಿಸದೆ ಪತಿಯ ಅರ್ಜಿಯನ್ನು ವಜಾಗೊಳಿಸಿರುವುದು ಸರಿಯಲ್ಲ. ಆ ಮೂಲಕ ಕೌಟುಂಬಿಕ ನ್ಯಾಯಾಲಯ ತಪ್ಪೆಸಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
Justices S R Krishna Kumar & G Basavaraja and Karnataka HC (Dharwad Bench)
Justices S R Krishna Kumar & G Basavaraja and Karnataka HC (Dharwad Bench)

“ಪತಿಯ ಜೊತೆಗೂಡಿ ಸಂಸಾರ ನಡೆಸಲು ನ್ಯಾಯಾಲಯದ ಆದೇಶವಿದ್ದರೂ ಸಹ ಪತ್ನಿ ಅದನ್ನು ಪಾಲಿಸದಿರುವುದು ವಿವಾಹ ವಿಚ್ಚೇದನಕ್ಕೆ ಆಧಾರವಾಗಲಿದೆ” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಬೆಳಗಾವಿ ದಂಪತಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆದೇಶಿಸಿದೆ.

ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣಕುಮಾರ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ನ್ಯಾಯಾಲಯ ವೈವಾಹಿಕ ಹಕ್ಕು ಪುನರ್ ಸ್ಥಾಪನೆ ಸಂಬಂಧ ಏಕಪಕ್ಷೀಯ ಆದೇಶ ಹೊರಡಿಸಿ ಪತಿಯ ಜೊತೆಗೂಡಿ ಬಾಳಲು ಪತ್ನಿಗೆ ಆದೇಶಿಸಿದೆ. ಪತ್ನಿ ಒಂದೂವರೆ ದಶಕ ಕಳೆದರೂ ಆದೇಶವನ್ನು ಪಾಲಿಸಿಲ್ಲ. ಹೀಗಾಗಿ, ಆದೇಶ ಉಲ್ಲಂಘನೆಯೇ ವಿವಾಹ ವಿಚ್ಚೇದನಕ್ಕೆ ಆಧಾರವಾಗಿದೆ. ಇದು ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13(1ಎ)(2) ವ್ಯಾಪ್ತಿಗೆ ಒಳಪಡುತ್ತದೆ” ಎಂದು ಪೀಠ ಹೇಳಿದೆ.

ಕೌಟುಂಬಿಕ ನ್ಯಾಯಾಲಯ ಪ್ರಕರಣದ ಅಂಶಗಳನ್ನು ಪರಿಗಣಿಸದೆ ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿರುವುದು ಸರಿಯಲ್ಲ. ಆ ಮೂಲಕ ಕೌಟುಂಬಿಕ ನ್ಯಾಯಾಲಯ ತಪ್ಪೆಸಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ಹಿನ್ನೆಲೆ: ದಂಪತಿಯು 2009ರಲ್ಲಿ ಮದುವೆಯಾಗಿದ್ದರು. ಆನಂತರ ಅವರಿಗೆ ಒಂದು ಗಂಡು ಮಗು ಜನಿಸಿತ್ತು. ಪತಿ ಬೆಳಗಾವಿ ತಾಲ್ಲೂಕು ರಾಯಭಾಗದಲ್ಲಿ ನೆಲೆಸಿದ್ದರು. ಆದರೆ, ಪತ್ನಿಯು ಪತಿಯಿಂದ ದೂರವಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ ನಗರದಲ್ಲಿ ಮೂರು ವರ್ಷ ಪ್ರತ್ಯೇಕವಾಗಿ ನೆಲೆಸಿದ್ದರು. ಆನಂತರ ಪತಿ, ತಮ್ಮ ವೈವಾಹಿಕ ಹಕ್ಕು ಪುನರ್ ಸ್ಥಾಪನೆ ಕೋರಿ 2016ರಲ್ಲಿ ರಾಯಭಾಗ ನ್ಯಾಯಾಲಯದ ಮೊರೆ ಹೋಗಿದ್ದರು.

ರಾಯಭಾಗ ನ್ಯಾಯಾಲಯ 2016ರ ಡಿಸೆಂಬರ್‌ 5ರಂದು ಅರ್ಜಿದಾರರ ಪರ ಏಕಪಕ್ಷೀಯ ಆದೇಶ ನೀಡಿ, ಪತ್ನಿಯು ಪತಿಯ ಜೊತೆಗೂಡಿ ಸಂಸಾರ ನಡೆಸಲು ನಿರ್ದೇಶನ ನೀಡಿತ್ತು. ಆದರೆ, ಆ ಆದೇಶವನ್ನು ಪತ್ನಿ ಪಾಲಿಸಲಿಲ್ಲ, ಜೊತೆಗೆ ನ್ಯಾಯಾಲಯದ ಮುಂದೆಯೂ ಹಾಜರಾಗಲಿಲ್ಲ.  ಆನಂತರ ಪತಿಯು ತನ್ನ ಪತ್ನಿ ತೊರೆದು ಹೋಗಿದ್ದಾರೆ ಎಂಬ ಆಧಾರದಲ್ಲಿ ವಿವಾಹ ವಿಚ್ಚೇದನ ನೀಡುವಂತೆ ಕೋರಿದ್ದರು. ಪತ್ನಿ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಆದರೆ, ಕೌಟುಂಬಿಕ ನ್ಯಾಯಾಲಯ ಪತಿಯ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com