ಚೀನಾದ ಶಓಮಿ ತಂತ್ರಜ್ಞಾನ ಸಂಸ್ಥೆಗೆ ಸೇರಿದ 5551.27 ಕೋಟಿ ರೂಪಾಯಿ ಜಫ್ತಿ ಮಾಡಿದ್ದ ಜಾರಿ ನಿರ್ದೇಶನಾಲಯದ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) 1999ರ ಅಡಿ ರಚಿಸಿರುವ ಸಕ್ಷಮ ಪ್ರಾಧಿಕಾರವು ಕಾಯಂಗೊಳಿಸಿದ್ದನ್ನು ಪ್ರಶ್ನಿಸಿ ಕಂಪೆನಿಯು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.
ಆಕ್ಷೇಪಾರ್ಹವಾದ ಕಾಯಂ ಆದೇಶ ಪ್ರಶ್ನಿಸಿ ಶಓಮಿ ಟೆಕ್ನಾಲಜಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.
ಶಓಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರತಿವಾದಿಯಾಗಿರುವ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿತ್ತು. ದೈನಂದಿನ ಚಟುವಟಿಕೆಗಳನ್ನು ನಡೆಸಲು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ ಖಾತೆಯಿಂದ ಹಣ ತೆಗೆಯಬಹುದು ಎಂಬ ಷರತ್ತು ವಿಧಿಸಿ, ಹೈಕೋರ್ಟ್ ಅನುಮತಿ ನೀಡಿತ್ತು. ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ತಡೆಯಾಜ್ಞೆ ಮುಂದುವರಿಸಿರುವ ಹೊರತಾಗಿಯೂ ಸ್ಮಾರ್ಟ್ಫೋನ್ಗಳ ಮಾರಾಟ ಮತ್ತು ಉತ್ಪಾದನೆಗೆ ಅಗತ್ಯವಾದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ ಹಣ ಪಾವತಿಸಲು ಶಓಮಿಗೆ ಅನುಮತಿ ನೀಡಲಾಗಿತ್ತು. ಸಕ್ಷಮ ಪ್ರಾಧಿಕಾರ ಆದೇಶ ಮಾಡುವವರೆಗೆ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಹೈಕೋರ್ಟ್ ಹೇಳಿತ್ತು.
ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯದ ಜಫ್ತಿ ಆದೇಶ ಪ್ರಶ್ನಿಸಿದ್ದ ಶಓಮಿ ತಂತ್ರಜ್ಞಾನ ಸಂಸ್ಥೆಯ ಮನವಿಯು ಆತುರದ್ದಾಗಿದೆ ಎಂದು ಜುಲೈನಲ್ಲಿ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿತ್ತು.
ಮುಂದುವರಿದು, “ಶಓಮಿ ಖಾತೆ ಜಫ್ತಿ ಆದೇಶ ಮಾಡಿರುವ ಅಧಿಕಾರಿಯು ಕಾಯಿದೆಯ ಅನ್ವಯ 30 ದಿನಗಳಲ್ಲಿ ಸದರಿ ಆದೇಶವನ್ನು ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಭಾದಿತರಿಗೆ ಅವಕಾಶ ಮಾಡಿಕೊಟ್ಟು, ಸಕ್ಷಮ ಪ್ರಾಧಿಕಾರವು 180 ದಿನಗಳಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು. ಈ ಆದೇಶವನ್ನು ಮೇಲ್ಮನವಿ ನ್ಯಾಯ ಮಂಡಳಿಯ ಮುಂದೆ ಪ್ರಶ್ನಿಸಬಹುದಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿತ್ತು.
ಅಲ್ಲದೇ, ಕಾಯಿದೆಯ ಅನ್ವಯ ಜಫ್ತಿ ಆದೇಶ ಮಾಡಿರುವ ಜಾರಿ ನಿರ್ದೇಶನಾಲಯದ ವ್ಯಾಪ್ತಿಯ ವಿಚಾರವನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು. ಸಕ್ಷಮ ಪ್ರಾಧಿಕಾರದ ಮುಂದೆ ಈಗಾಗಲೇ ಜಫ್ತಿ ಆದೇಶ ಇಟ್ಟಿರುವುದರಿಂದ ಈ ಆದೇಶ ಮಾಡಿದ 60 ದಿನಗಳ ಒಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್ ಆದೇಶಿಸಿತ್ತು.
ಇದರ ಬೆನ್ನಿಗೆ ಸೆಪ್ಟೆಂಬರ್ 19ರಂದು ಸಕ್ಷಮ ಪ್ರಾಧಿಕಾರವು ಜಾರಿ ನಿರ್ದೇಶನಾಲಯದ ಜಪ್ತಿ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶಓಮಿಯು ಹೈಕೋರ್ಟ್ ಕದ ತಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.
“ಶಓಮಿ ಇಂಡಿಯಾವು ಚೀನಾ ಮೂಲದ ಶಓಮಿ ಸಮೂಹದ ಭಾಗವಾಗಿದೆ. ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿರುವ ಕಂಪೆನಿಯ 5551.27 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ಶಓಮಿ ಇಂಡಿಯಾ ಕಂಪೆನಿಯು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ” ಎಂದು ಜಾರಿ ನಿರ್ದೇಶನಾಲಯವು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು.
“2014ರಲ್ಲಿ ಶಓಮಿ ಭಾರತದಲ್ಲಿ ಕಾರ್ಯಾರಂಭ ಮಾಡಿದ್ದು, 2015ರಿಂದ ಹಣ ವರ್ಗಾವಣೆ ಮಾಡುತ್ತಿದೆ. ಭಾರತದ ರೂಪಾಯಿಯಲ್ಲಿ 5551.27 ಕೋಟಿಯಷ್ಟು ವಿದೇಶಿ ಕರೆನ್ಸಿಯನ್ನು ಶಓಮಿ ಸಮೂಹದ ಕಂಪೆನಿ ಸೇರಿದಂತೆ ಮೂರು ವಿದೇಶಿ ಕಂಪೆನಿಗಳಿಗೆ ರಾಜಧನದ ರೂಪದಲ್ಲಿ ವರ್ಗಾವಣೆ ಮಾಡಿದೆ. ಚೀನಾದ ಮಾತೃಸಂಸ್ಥೆಯ ಸೂಚನೆಯಂತೆ ರಾಜಧನದ ರೂಪದಲ್ಲಿ ಅಪಾರ ಹಣವನ್ನು ವರ್ಗಾವಣೆ ಮಾಡಲಾಗಿದೆ. ಶಓಮಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಅಮೆರಿಕಾ ಮೂಲದ ಎರಡು ಕಂಪೆನಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಆದರೆ, ಹಣ ವರ್ಗಾವಣೆ ಮಾಡಿರುವ ಮೂರೂ ಕಂಪೆನಿಗಳಿಂದ ಶಓಮಿ ಇಂಡಿಯಾ ಯಾವುದೇ ಸೇವಾ ಸೌಲಭ್ಯ ಪಡೆದಿಲ್ಲ” ಎಂದು ಇ ಡಿ ಹೇಳಿತ್ತು.
ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ ಬಿ ನರಗುಂದ್, ವಕೀಲ ಮಧುಕರ್ ದೇಶಪಾಂಡೆ ವಾದಿಸಿದರು. ಶಓಮಿಯನ್ನು ಹಿರಿಯ ವಕೀಲ ಉದಯ್ ಹೊಳ್ಳ ಪ್ರತಿನಿಧಿಸಿದ್ದರು.