ಶಓಮಿ ಖಾತೆ ಜಪ್ತಿ: ಸಕ್ಷಮ ಪ್ರಾಧಿಕಾರದ ಆದೇಶಕ್ಕಿಲ್ಲ ತಡೆ, ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

ಆಕ್ಷೇಪಾರ್ಹವಾದ ಕಾಯಂ ಆದೇಶಕ್ಕೆ ತಡೆ ನೀಡುವಂತೆ ಕೋರಿ ಶಓಮಿ ಟೆಕ್ನಾಲಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
Xiaomi India, enforcement directorate and Karnataka HC
Xiaomi India, enforcement directorate and Karnataka HC

ಚೀನಾದ ಶಓಮಿ ತಂತ್ರಜ್ಞಾನ ಸಂಸ್ಥೆಗೆ ಸೇರಿದ 5551.27 ಕೋಟಿ ರೂಪಾಯಿ ಜಫ್ತಿ ಮಾಡಿದ್ದ ಜಾರಿ ನಿರ್ದೇಶನಾಲಯದ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999ರ ಅಡಿ ರಚಿಸಿರುವ ಸಕ್ಷಮ ಪ್ರಾಧಿಕಾರವು ಕಾಯಂಗೊಳಿಸಿದ್ದನ್ನು ಪ್ರಶ್ನಿಸಿ ಕಂಪೆನಿಯು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಆಕ್ಷೇಪಾರ್ಹವಾದ ಕಾಯಂ ಆದೇಶಕ್ಕೆ ತಡೆ ನೀಡುವಂತೆ ಕೋರಿ ಶಓಮಿ ಟೆಕ್ನಾಲಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು. ಆದರೆ, ಅರ್ಜಿದಾರರ ಕೋರಿಕೆಯನ್ನು ಪುರಸ್ಕರಿಸಲು ನ್ಯಾಯಾಲಯವು ನಿರಾಕರಿಸಿದೆ.

ಜಾರಿ ನಿರ್ದೇಶನಾಲಯವು ಏಪ್ರಿಲ್‌ 29ರಂದು ಜಾರಿ ಮಾಡಿದ್ದ ಜಫ್ತಿ ಆದೇಶಕ್ಕೆ ಹೈಕೋರ್ಟ್‌ ತಾತ್ಕಾಲಿಕವಾಗಿ ತಡೆ ನೀಡಿತ್ತು. ಅಲ್ಲದೇ, ಕಂಪೆನಿಯ ದಿನನಿತ್ಯದ ಖರ್ಚುಗಳಿಗೆ ತನ್ನ ಬ್ಯಾಂಕ್‌ನಿಂದ ಹಣ ತೆಗೆದು ಖರ್ಚು ಮಾಡಲು ಅನುಮತಿಸಿತ್ತು. ಜಾರಿ ನಿರ್ದೇಶನಾಲಯದ ಜಫ್ತಿ ಆದೇಶವನ್ನು ಸಕ್ಷಮ ಪ್ರಾಧಿಕಾರವು ಕಾಯಂಗೊಳಿಸಿದ ಹಿನ್ನೆಲೆಯಲ್ಲಿ ಜಫ್ತಿ ಆದೇಶ ಸ್ವಯಂಚಾಲಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಶಓಮಿ ಕೋರಿತ್ತು. ಇದಕ್ಕೆ ಪೀಠ ನಿರಾಕರಿಸಿದೆ.

ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯದ ಜಫ್ತಿ ಆದೇಶ ಪ್ರಶ್ನಿಸಿದ್ದ ಶಓಮಿ ತಂತ್ರಜ್ಞಾನ ಸಂಸ್ಥೆಯ ಮನವಿಯು ಆತುರದ್ದಾಗಿದೆ ಎಂದು ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿತ್ತು.

ಮುಂದುವರಿದು, “ಶಓಮಿ ಖಾತೆ ಜಫ್ತಿ ಆದೇಶ ಮಾಡಿರುವ ಅಧಿಕಾರಿಯು ಕಾಯಿದೆಯ ಅನ್ವಯ 30 ದಿನಗಳಲ್ಲಿ ಸದರಿ ಆದೇಶವನ್ನು ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಭಾದಿತರಿಗೆ ಅವಕಾಶ ಮಾಡಿಕೊಟ್ಟು, ಸಕ್ಷಮ ಪ್ರಾಧಿಕಾರವು 180 ದಿನಗಳಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು. ಈ ಆದೇಶವನ್ನು ಮೇಲ್ಮನವಿ ನ್ಯಾಯ ಮಂಡಳಿಯ ಮುಂದೆ ಪ್ರಶ್ನಿಸಬಹುದಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿತ್ತು.

Also Read
ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಿರುವ ಇ ಡಿ ಆದೇಶ ಪ್ರಶ್ನಿಸಿರುವ ಶಓಮಿ ಅರ್ಜಿ ಆತುರದ್ದು: ಹೈಕೋರ್ಟ್‌

ಅಲ್ಲದೇ, ಕಾಯಿದೆಯ ಅನ್ವಯ ಜಫ್ತಿ ಆದೇಶ ಮಾಡಿರುವ ಜಾರಿ ನಿರ್ದೇಶನಾಲಯದ ವ್ಯಾಪ್ತಿಯ ವಿಚಾರವನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು. ಸಕ್ಷಮ ಪ್ರಾಧಿಕಾರದ ಮುಂದೆ ಈಗಾಗಲೇ ಜಫ್ತಿ ಆದೇಶ ಇಟ್ಟಿರುವುದರಿಂದ ಈ ಆದೇಶ ಮಾಡಿದ 60 ದಿನಗಳ ಒಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಆದೇಶಿಸಿತ್ತು.

ಶಓಮಿ ದೈನಂದಿನ ಚಟುವಟಿಕೆಗಳನ್ನು ನಡೆಸಲು ಜಫ್ತಿ ಮಾಡಿರುವ ಬ್ಯಾಂಕ್‌ ಖಾತೆಗಳಿಂದ ಹಣ ಬಳಸಬಹುದಾಗಿದೆ ಎಂದು ಈ ಹಿಂದೆ ತಾನು ನೀಡಿರುವ ಮಧ್ಯಂತರ ಆದೇಶವು ಸಕ್ಷಮ ಪ್ರಾಧಿಕಾರ ಆದೇಶ ಮಾಡುವವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು. ಈಗ ಸಕ್ಷಮ ಪ್ರಾಧಿಕಾರವು ಇ ಡಿ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಶಓಮಿ ಹೈಕೋರ್ಟ್‌ ಮೆಟ್ಟಿಲೇರಿದೆ.

Related Stories

No stories found.
Kannada Bar & Bench
kannada.barandbench.com