ಸುದ್ದಿಗಳು

ವಾಟ್ಸಾಪ್ ಮೂಲಕ ದೂರು ನೀಡುವುದು ಸಹ ಎಫ್ಐಆರ್ ದಾಖಲಿಕೆ ನಿಯಮಗಳ ಅನುಪಾಲನೆಯಾಗಿದೆ: ಕಾಶ್ಮೀರ ಹೈಕೋರ್ಟ್

Bar & Bench

ವಾಟ್ಸಾಪ್ ಮೂಲಕ ಪೊಲೀಸರಿಗೆ ದೂರು ನೀಡುವುದು ಸಿಆರ್‌ಪಿಸಿ ಸೆಕ್ಷನ್ 154 (1) ಮತ್ತು 154 (3)ರ ಅಡಿ ಎಫ್‌ಐಆರ್‌ ದಾಖಲಿಸುವಿಕೆ ನಿಯಮಗಳ ಗಣನೀಯ ಅನುಪಾಲನೆಯಾಗುತ್ತದೆ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ತಿಳಿಸಿದೆ [ದಿಲ್ಶಾದ್ ಶೇಖ್ ಮತ್ತಿತರರು ಹಾಗೂ ಎಸ್‌ ಸಭಾ ಶೇಖ್‌ ನಡುವಣ ಪ್ರಕರಣ].

ಕ್ರಿಮಿನಲ್ ದೂರನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಪ್ರಕರಣದಲ್ಲಿ ಕ್ರಿಮಿನಲ್‌ ದೂರಿನ  ವಿವರಗಳನ್ನು ಆರಂಭದಲ್ಲಿ ಪೊಲೀಸರಿಗೆ ವಾಟ್ಸಾಪ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗಿತ್ತು.

ಸಿಆರ್‌ಪಿಸಿಯ ಸೆಕ್ಷನ್ 156 (3) ರ ಅಡಿಯಲ್ಲಿ ದೂರುದಾರರು ಮ್ಯಾಜಿಸ್ಟ್ರೇಟ್ ಎದುರು ಅರ್ಜಿಸಲ್ಲಿಸಿದ್ದರು. ದೂರನ್ನು ಗಮನಿಸಿದ ಮ್ಯಾಜಿಸ್ಟ್ರೇಟ್‌ ಅವರು ಹೆಚ್ಚಿನ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದರು.

ಸಿಆರ್‌ಪಿಸಿ ಸೆಕ್ಷನ್‌ 156 (3)ರ ಅಡಿ ಅರ್ಜಿಯನ್ನು ಆಧರಿಸಿದ ಕ್ರಿಮಿನಲ್‌ ದೂರು ನಿಲ್ಲುತ್ತದೆಯೇ ಎಂಬುದು ಹೈಕೋರ್ಟ್‌ ಎದುರಿದ್ದ ಪ್ರಶ್ನೆಯಾಗಿತ್ತು. ಇದು ದೂರುದಾರರು ಮೊದಲು ಸಿಆರ್‌ಪಿಸಿ ಸೆಕ್ಷನ್ 154 (1) ಮತ್ತು 154 (3), ಅಡಿಯಲ್ಲಿ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ.

ದೂರುದಾರರು ದೂರಿನ ವಿವರಗಳನ್ನು ವಾಟ್ಸಾಪ್ ಮತ್ತು ಇಮೇಲ್ ಮೂಲಕ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದು ಇದು ಸಿಆರ್‌ಪಿಸಿ ಸೆಕ್ಷನ್ 154 (1) ಮತ್ತು 154 (3)ರ ಅಡಿ ಪ್ರಥಮ ವರ್ತಮಾನ ದೂರು (ಎಫ್‌ಐಆರ್‌) ದಾಖಲಿಸುವಿಕೆಗೆ ಅಗತ್ಯವಾದ ಅನುಪಾಲನೆಯಾಗುತ್ತದೆ. ಹಾಗಾಗಿ, ದೂರುದಾರರು ಸಿಆರ್‌ಪಿಸಿ ಸೆಕ್ಷನ್ 156ರ ಅಡಿಯಲ್ಲಿ ಅರ್ಜಿಯೊಂದಿಗೆ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸುವ ಅವಶ್ಯಕತೆಗಳನ್ನು ಪಾಲಿಸಿದ್ದಾರೆಂದು ತೋರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹಿನ್ನೆಲೆ

ದೂರುದಾರೆ ಸಭಾ ಶೇಖ್‌ (ಪ್ರತಿವಾದಿ) ತನ್ನ ದೂರನ್ನು ವಾಟ್ಸಾಪ್ ಮೂಲಕ ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ವಿವಿಧ ಸಂದರ್ಭಗಳಲ್ಲಿ ರವಾನಿಸಿದ್ದರು. ಜೊತೆಗೆ ಅವರು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಳಿಯೂ ದೂರು ದಾಖಲಿಸಿದ್ದರು. ಆದರೆ ದೂರುಗಳ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಾಗ ಅವರು ಸಿಆರ್‌ಪಿಸಿ ಸೆಕ್ಷನ್ 156 (3) ಅಡಿ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಶ್ರೀನಗರ ನ್ಯಾಯಾಲಯವನ್ನು ಎಡತಾಕಿದ್ದರು.

ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಬೇಕು ಮತ್ತು ಸಂಜ್ಞೇಯ ಅಪರಾಧ ನಡೆದಿದ್ದರೆ ಎಫ್‌ಐಆರ್‌ ದಾಖಲಿಸಬೇಕು ಎಂದು ಠಾಣಾಧಿಕಾರಿಗೆ ಸೂಚಿಸಿದ ಶ್ರೀನಗರ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತ್ತು.

ಆದರೆ ಅರ್ಜಿದಾರರಾದ ದಿಲ್ಷದ್‌ ಶೇಖ್‌ ಅವರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಅವರು ದೂರುದಾರರು (ಹೈಕೋರ್ಟ್‌ ಎದುರು ಪ್ರತಿಕ್ರಿಯಿಸಿದವರು) ಸಿಆರ್‌ಪಿಸಿ ಸೆಕ್ಷನ್‌ 154 (1) ಮತ್ತು 154 (3) ಅಡಿಯಲ್ಲಿ ಪೊಲೀಸ್‌ ದೂರು ಸಲ್ಲಿಸಲು ಅಗತ್ಯವಾದ ಕಾನೂನು ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದಿದ್ದರು.

ಆರಂಭದಲ್ಲಿ ಪೊಲೀಸರಿಗೆ ವಾಟ್ಸಾಪ್‌ ಮತ್ತು ಇಮೇಲ್‌ ಮೂಲಕ ತನ್ನ ಅಹವಾಲು ಸಲ್ಲಿಸಿರುವುದಕ್ಕೆ ಸಾಕ್ಷ್ಯ ಒದಗಿಸಿದ್ದ ದೂರುದಾರರು ತಾನು ಸೂಕ್ತ ವಿಧಾನವನ್ನೇ ಅನುಸರಿಸಿರುವುಗಿ ಸಮರ್ಥಿಸಿಕೊಂಡಿದ್ದರು. ಇದುಸೆಕ್ಷನ್ 154 (1) ಮತ್ತು 154 (3), CrPC ಯಗಣನೀಯ ಪಾಲನೆಯಾಗುತ್ತದೆ ಎಂದು ನ್ಯಾಯಾಲಯ ತೀರ್ಮಾನಿಸಿತು.