Patent Manual and Delhi HC 
ಸುದ್ದಿಗಳು

ಸಂಕೀರ್ಣವಾಗುತ್ತಿರುವ ಎಐ, ಮಷಿನ್ ಲರ್ನಿಂಗ್ ತಂತ್ರಜ್ಞಾನ: ಪೇಟೆಂಟ್ ಕೈಪಿಡಿ ನವೀಕರಿಸಲು ಸೂಚಿಸಿದ ದೆಹಲಿ ಹೈಕೋರ್ಟ್

ಸಂಕೀರ್ಣವಾದ ವಿಷಯಗಳ ಬಗ್ಗೆ ಪರೀಕ್ಷಕರು ಮತ್ತು ನಿಯಂತ್ರಕರು ವ್ಯವಹರಿಸಲು ನವೀಕರಿಸಿದ ಕೈಪಿಡಿ ಉತ್ತಮ ಮಾರ್ಗದರ್ಶನ ನೀಡುವಂತಿರಬೇಕು ಎಂದು ಹೇಳಿದೆ ಹೈಕೋರ್ಟ್.

Bar & Bench

ಕೃತಕ ಬುದ್ಧಿಮತ್ತೆ (ಎ ಐ) ಮತ್ತು ಮಷಿನ್‌ ಲರ್ನಿಂಗ್‌ ಕ್ಷೇತ್ರಗಳಲ್ಲಿ ವಿಕಸನವಾಗುತ್ತಿರುವ ನೂತನ ಮತ್ತು ಸಂಕೀರ್ಣ ತಂತ್ರಜ್ಞಾನಕ್ಕೆ ತಕ್ಕಂತೆ ಪೇಟೆಂಟ್‌ ಕಚೇರಿಯ ಅಭ್ಯಾಸ ಮತ್ತು ಕಾರ್ಯವಿಧಾನ ಕೈಪಿಡಿಯನ್ನು ನವೀಕರಿಸಲು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಸೂಚಿಸಿದೆ [ಎಜಿಎಫ್‌ಎ ಎನ್‌ವಿ ಮತ್ತಿತರರು ಹಾಗೂ ಪೇಟೆಂಟ್ ಮತ್ತು ವಿನ್ಯಾಸಗಳ ಸಹಾಯಕ ನಿಯಂತ್ರಕರು ಇನ್ನಿತರರ ನಡುವಣ ಪ್ರಕರಣ].

 ಈ ವಲಯಗಳಿಗೆ ಸಂಬಂಧಿಸಿದ ಪೇಂಟೆಂಟ್‌ ಅಪ್ಲಿಕೇಷನ್‌ಗಳು ಹೆಚ್ಚಿನ ಸಂಖ್ಯೆಯ ಕ್ಲೈಮ್‌ಗಳನ್ನು ಹೊಂದಿವೆ ಇಲ್ಲವೇ ಪರಸ್ಪರ ಅಂತರ್‌ಸಂಪರ್ಕ ಹೊಂದಿದ ಬಹಳಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿವೆ ಎಂದು ತಿಳಿಸಿದರು.

"ಭಾರತದಲ್ಲಿ ಪೇಟೆಂಟ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಕಾರಣ ಮತ್ತು ಪೇಟೆಂಟ್ ಕಚೇರಿ ಅಭ್ಯಾಸ ಮತ್ತು ಕಾರ್ಯವಿಧಾನದ ಕೈಪಿಡಿಯನ್ನು ನವೀಕರಿಸುವ ಅವಶ್ಯಕತೆಯಿದೆ, ಇದರಿಂದಾಗಿ ಪರೀಕ್ಷಕರು ಮತ್ತು ನಿಯಂತ್ರಕರು ಸ್ಪಷ್ಟತೆ ಮತ್ತು ಸಂಕ್ಷಿಪ್ತತೆಯ ಕೊರತೆಯ ಆಕ್ಷೇಪಣೆಗಳಂತಹ ಸಂಕೀರ್ಣವಾದ ವಿಷಯಗಳನ್ನು ವ್ಯವಹರಿಸಲು ಉತ್ತಮ ಮಾರ್ಗದರ್ಶನ  ಪಡೆಯಲು ಸಾಧ್ಯವಾಗುತ್ತದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು, ಮಷಿನ್‌ ಲರ್ನಿಂಗ್‌ಯ ಕಾರ್ಯಗಳು, ಕೃಷಿ ರಾಸಾಯನಿಕಗಳು, ಔಷಧಗಳು ಮತ್ತು ಉತ್ಪಾದನಾ ವಿಧಾನಗಳನ್ನು ಒಳಗೊಂಡ ಸಂಕೀರ್ಣ ಪೇಟೆಂಟ್‌ಗಳೊಂದಿಗೆ ವ್ಯವಹರಿಸುವಾಗ ಇದು ವಿಶೇಷವಾಗಿ ಉಪಯೋಗಕ್ಕೆ ಬರಲಿದೆ ”ಎಂದು ನ್ಯಾಯಾಲಯ ಹೇಳಿತು.

ಹೀಗಾಗಿ ಅಭ್ಯಾಸ ಕೈಪಿಡಿಯನ್ನು ನವೀಕರಿಸುವಂತೆ ಇಲ್ಲವೇ ಪರಿಷ್ಕರಿಸುವಂತೆ ನಾನು ಪೇಟೆಂಟ್ಸ್‌, ವಿನ್ಯಾಸ ಹಾಗೂ ವಾಣಿಜ್ಯ ಚಿಹ್ನೆ ಮಹಾ ನಿಯಂತ್ರಕ ಕಚೇರಿಗೆ ಶಿಫಾರಸು ಮಾಡುತ್ತಿದ್ದೇನೆ ಎಂದು ನ್ಯಾಯಮೂರ್ತಿಗಳು ನುಡಿದರು. ಸಂಕೀರ್ಣವಾದ ವಿಷಯಗಳ ಬಗ್ಗೆ  ಪರೀಕ್ಷಕರು ಮತ್ತು ನಿಯಂತ್ರಕರು ವ್ಯವಹರಿಸಲು ನವೀಕರಿಸಿದ ಕೈಪಿಡಿ ಉತ್ತಮ ಮಾರ್ಗದರ್ಶನ ನೀಡುವಂತಿರಬೇಕು ಎಂದು ನ್ಯಾಯಾಲಯ ತಿಳಿಸಿತು.

ದೆಹಲಿಯಲ್ಲಿರುವ ಭಾರತೀಯ ಪೇಟೆಂಟ್ ಕಚೇರಿಯ ಪೇಟೆಂಟ್ ಮತ್ತು ವಿನ್ಯಾಸಗಳ ಸಹಾಯಕ ನಿಯಂತ್ರಕರು ತನ್ನ ಪೇಟೆಂಟ್ ಅರ್ಜಿಗಳನ್ನು ತಿರಸ್ಕರಿಸಿ ಜೂನ್ 17, 2022 ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಜಿಎಫ್‌ಎ ಎನ್‌ವಿ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.