Kannada and Karnataka High Court 
ಸುದ್ದಿಗಳು

ಪದವಿ ಹಂತದಲ್ಲಿ ಕಡ್ಡಾಯ ಕನ್ನಡ ಕಲಿಕೆ: ಜನವರಿ 31ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಪದವಿ ತರಗತಿಗಳ ಸೆಮಿಸ್ಟರ್‌ ಪರೀಕ್ಷೆಗಳು ಫೆಬ್ರವರಿ 15ರಿಂದ ಆರಂಭವಾಗಲಿವೆ. ಹೀಗಾಗಿ, ಮನವಿಯ ಅಂತಿಮ ವಿಲೇವಾರಿಗಾಗಿ ಹತ್ತಿರದ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಕೋರಿದ ವಕೀಲ ಶ್ರೀಧರ್‌ ಪ್ರಭು.

Bar & Bench

ಪದವಿ ಹಂತದಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ಜನವರಿ 31ರಂದು ನಡೆಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆಯ ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶ ಮಾಡಬೇಕು ಎಂದು ಕೋರಿ ಶಿವಕುಮಾರ್‌ ಕೆ ಜಿ ಸೇರಿದಂತೆ ಆರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ‌ ಅರ್ಜಿದಾರ ವಿದ್ಯಾರ್ಥಿ ಶಿವಕುಮಾರ್ ಮತ್ತಿತರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್‌ ಪ್ರಭು ಅವರು “ನಮ್ಮ ಮನವಿಯನ್ನು ಪಿಐಎಲ್‌ ಆಗಿ ಪರಿವರ್ತಿಸಲಾಗಿದೆ. ಹೈಕೋರ್ಟ್‌ನ ಪಿಐಎಲ್‌ ನಿಯಮಗಳ ಅನುಸಾರ ಅಗತ್ಯ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈಗ ನಮ್ಮ ಮನವಿಯು ಪಿಐಎಲ್‌ ರೂಪ ಪಡೆದಿದೆ” ಎಂದರು.

ಮುಂದುವರಿದು, “ಪದವಿ ತರಗತಿಗಳ ಸೆಮಿಸ್ಟರ್‌ ಪರೀಕ್ಷೆಗಳು ಫೆಬ್ರವರಿ 15ರಿಂದ ಆರಂಭವಾಗಲಿವೆ. ಹೀಗಾಗಿ, ಮನವಿಯ ಅಂತಿಮ ವಿಲೇವಾರಿಗಾಗಿ ಹತ್ತಿರದ ದಿನಾಂಕವನ್ನು ನಿಗದಿಪಡಿಸಬೇಕು” ಎಂದು ಕೋರಿದರು.

ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌ ಮತ್ತಿತರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಭಾಷೆಯನ್ನು ಕಲಿಯುವುದಕ್ಕೆ ನಿರ್ಬಂಧ ವಿಧಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹಿಂದಿನ ಆದೇಶದಲ್ಲಿ ನ್ಯಾಯಾಲಯ ನಿರ್ದೇಶಿಸಿದೆ. ಆ ಬಳಿಕ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಬೇಕಿತ್ತು. ಈ ವಿಶ್ವವಿದ್ಯಾಲಯಗಳಿಗೆ ಸೇರಿದ ಕಾಲೇಜುಗಳು ನಮಗೆ ಸೂಚನೆ ಇಲ್ಲ” ಎಂದು ಹೇಳುತ್ತಿವೆ ಎಂದು ಪೀಠದ ಗಮನಕ್ಕೆ ತಂದರು.

ಐದನೇ ಪ್ರತಿವಾದಿಯಾದ ವಿಜಯ ಕಾಲೇಜಿನ ಪರವಾಗಿ ವಕೀಲ ಕೆ ಎಂ ಪ್ರಕಾಶ್‌ ಅವರು ಮಧ್ಯಪ್ರವೇಶ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಆಗ ನಾಗಾನಂದ್‌ ಅವರು “ಕಕ್ಷಿದಾರರಾಗಲು ಬಯಸಿ ಮನವಿ ಸಲ್ಲಿಸುವ ಎಲ್ಲರನ್ನೂ ಮಧ್ಯಪ್ರವೇಶಕಾರರನ್ನಾಗಿ ಪರಿಗಣಿಸಿ ವಾದ ಆಲಿಸಬೇಕು. ಮಧ್ಯಪ್ರವೇಶಕಾರರನ್ನಾಗಿ ಪರಿಗಣಿಸಿ ವಾದ ಆಲಿಸದಿದ್ದಲ್ಲಿ ಇಡೀ ವಿಚಾರಣೆಯು ಹಾದಿ ತಪ್ಪಲಿದೆ” ಎಂದು ಕೋರಿದರು. ಎಲ್ಲರ ವಾದವನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಿತು.