ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಬಂಧನದಲಿರುವ ಆರೋಪಿ ತನಿಖಾ ಕಚೇರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ಪ್ರೇಮ್ ಪ್ರಕಾಶ್ ಮತ್ತು ಜಾರಿ ನಿರ್ದೇಶನಾಲಯದ ಮೂಲಕ ಭಾರತ ಒಕ್ಕೂಟ ನಡುವಣ ಪ್ರಕರಣ].
ಜಾಮೀನಿಗೆ ಆದ್ಯತೆ ನೀಡಬೇಕು, ಅನಿವಾರ್ಯವಾದಲ್ಲಿ ಮಾತ್ರವೇ ಜೈಲಿನಲ್ಲಿರಿಸಬೇಕು ಎಂಬ ನೀತಿ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿಯ (ಪಿಎಂಎಲ್‌ಎ) ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಕೂಡ ನಿನ್ನೆಯ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತ್ತು.
ಪಿಎಂಎಲ್‌ಎ ಕಾಯಿದೆಯಡಿ ಬಂಧಿತರಾಗಿದ್ದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್ ಅವರಿಗೆ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್ ಈ ಮಹತ್ವದ ಅವಲೋಕನಗಳನ್ನು ಮಾಡಿತ್ತು.
ಪಿಎಂಎಲ್‌ಎ ಆರೋಪಿಗಳಿಗೆ ವರದಾನದ ರೂಪದಲ್ಲಿರುವ ನ್ಯಾಯಾಲಯದ ಅವಲೋಕನದ ಮೂರು ಪ್ರಮುಖ ಅಂಶಗಳು ಈ ರೀತಿ ಇವೆ:
1. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸದಾ ಮಹತ್ವ, ಅದಕ್ಕೆ ಕುಂದು ಬರಬಾರದು
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸದಾ ಮಹತ್ವ ನೀಡಬೇಕು ಮತ್ತು ಕಾನೂನಿನಿಂದ ಸ್ಥಾಪಿತವಾದ ಕಾರ್ಯವಿಧಾನದ ಮೂಲಕ ಅದನ್ನು ಹತ್ತಿಕ್ಕುವುದು ಇಲ್ಲವಾಗಬೇಕು. ಅವಳಿ ಪರೀಕ್ಷೆ ಈ ತತ್ವವನ್ನು ಕಡೆಗಣಿಸುವಂತಿಲ್ಲ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವಕಾಶ ಒದಗಿಸುವ ಸಂವಿಧಾನದ 21ನೇ ವಿಧಿ ಪರಮೋನ್ನತ ಸಾಂವಿಧಾನಿಕ ಹಕ್ಕಾಗಿರುವುದರಿಂದ ಶಾಸನಬದ್ಧ ನಿಬಂಧನೆಗಳು ಆ ಪರಮೋಚ್ಚ ಹಕ್ಕಿಗೆ ಒಗ್ಗಿಕೊಳ್ಳಬೇಕು.
2. ತನಿಖಾ ಸಂಸ್ಥೆಯ ಪ್ರತಿ ಅಫಿಡವಿಟ್ ಸಮರ್ಥ ವಾದ ಕಟ್ಟಿಕೊಡಬೇಕು
ವಿಜಯ್ ಮದನ್‌ಲಾಲ್ ಚೌಧರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ನೀಡಿದ ತೀರ್ಪಿನ ಪ್ರಕಾರ, ಪಿಎಂಎಲ್‌ಯ ಸೆಕ್ಷನ್ 24 ಅನ್ನು ಅನ್ವಯಿಸಲು ಮತ್ತು ಆರೋಪಿಯ ಮೇಲೆ ತಾನು ನಿರ್ದೋಷಿ ಎಂದು ತೋರಿಸುವ ಪುರಾವೆಯ ಹೊರೆಯನ್ನು ವರ್ಗಾಯಿಸಲು, ಮೂರು ಮೂಲಭೂತ ಸಂಗತಿಗಳನ್ನು ಪ್ರಾಸಿಕ್ಯೂಷನ್ ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ:
ಮೊದಲನೆಯದಾಗಿ, ನಿಗದಿತ ಅಪರಾಧಕ್ಕೆ ಸಂಬಂಧಿಸಿದ ಕ್ರಿಮಿನಲ್ ಚಟುವಟಿಕೆ ನಡೆದಿರಬೇಕು. ಎರಡನೆಯದಾಗಿ, ಆ ಕ್ರಿಮಿನಲ್ ಚಟುವಟಿಕೆಯ ಪರಿಣಾಮವಾಗಿ ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಶ್ನಿಸಲಾಗಿರುವ ಆಸ್ತಿ ಅಥವಾ ಗಳಿಕೆಯನ್ನು ಪಡೆದಿರಬೇಕು. ಮೂರನೆಯದಾಗಿ, ಸಂಬಂಧಪಟ್ಟ ವ್ಯಕ್ತಿಯು ಅಪರಾಧದ ಗಳಿಕೆಯಿಂದ ಪಡೆಯಲಾದ ಆಸ್ತಿ, ಗಳಿಕೆಯ ವಿಚಾರದಲ್ಲಿ ಅಥವಾ ಆ ಪ್ರಕ್ರಿಯೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿರಬೇಕು.
ಆರೋಪಿಯ ಜಾಮೀನು ಅರ್ಜಿಯನ್ನು ವಿರೋಧಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸುವ ತನಿಖಾ ಸಂಸ್ಥೆಯ ಪ್ರತಿಯೊಂದು ಅಫಿಡವಿಟ್ ಈ ಮೂರು ಸಂಗತಿಗಳು ಹೇಗೆ ಪ್ರಾಥಮಿಕವಾಗಿ ಸಾಬೀತಾಗಿವೆ ಎಂಬ ಬಗ್ಗೆ ಪ್ರಬಲ ವಾದ ಮಂಡಿಸಬೇಕು. ಆ ನಂತರವೇ ಸೆಕ್ಷನ್ 24 ರ ಅಡಿಯಲ್ಲಿ ಆರೋಪಿಗಳ ಮೇಲೆ ಹೊಣೆಗಾರಿಕೆ ಹೊರಿಸಬೇಕು.
3. ಕಸ್ಟಡಿಯಲ್ಲಿರುವ ಪಿಎಂಎಲ್‌ಎ ಆರೋಪಿ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಸ್ವೀಕಾರಾರ್ಹವಲ್ಲ
ಪಿಎಂಎಲ್ಎ ಆರೋಪಿ ತನಿಖಾ ಕಚೇರಿಗೆ ನೀಡಿದ ತಪ್ಪೊಪ್ಪಿಗೆ ಸಾಕ್ಷ್ಯವಾಗಿ ಪರಿಗಣಿಸಲಾಗದು.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ತನ್ನ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗೆ ನೀಡುವ ತಪ್ಪೊಪ್ಪಿಗೆ ಹೇಳಿಕೆ ಸ್ವೀಕಾರಾರ್ಹವಲ್ಲ. ಏಕೆಂದರೆ ಹಾಗೆ ಹೇಳಿಕೆ ನೀಡುವಾಗ ವ್ಯಕ್ತಿ ಮುಕ್ತ ಮನಸ್ಸಿನಿಂದ ಹೇಳಿಕೆ ನೀಡಿರುತ್ತಾನೆ ಎನ್ನಲಾಗದು. ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 25ರ ಅಡಿಯಲ್ಲಿ ಅಂತಹ ತಪ್ಪೊಪ್ಪಿಗೆಗಳನ್ನು ರದ್ದುಗೊಳಿಸಲಾಗುತ್ತದೆ. ಹಾಗಾಗಿ ಇಂತಹ ಹೇಳಿಕೆಯನ್ನು ಮತ್ತೊಂದು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಬಳಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಮೇಲ್ಮನವಿದಾರನ ಹೇಳಿಕೆಗಳು ತಪ್ಪೊಪ್ಪಿಗೆಯಾಗಿದ್ದಾಗ ಸೆಕ್ಷನ್ 25ರಿಂದ ಅದನ್ನು ರದ್ದುಗೊಳಿಸಲಾಗುವುದು. ಅವರು ಮತ್ತೊಂದು ಇಸಿಐಆರ್ ಕಾರಣಕ್ಕೆ ಕಸ್ಟಡಿಯಲ್ಲಿದ್ದರು ಎಂಬ ಹೇಳಿಕೆಯನ್ನು ಮನ್ನಿಸುವುದು ವಿಡಂಬನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿ