New Criminal Laws, Kerala HC 
ಸುದ್ದಿಗಳು

ನೂತನ ಅಪರಾಧಿಕ ಕಾನೂನುಗಳ ಹಿಂದಿ ಶೀರ್ಷಿಕೆ: 'ಸ್ವಲ್ಪ ಗೊಂದಲಮಯವಾಗಿದೆ ಆದರೂ ಕಲಿಯುತ್ತಿದ್ದೇವೆ' ಎಂದ ಕೇರಳ ಹೈಕೋರ್ಟ್

Bar & Bench

ನೂತನ ಅಪರಾಧಿಕ ಕಾನೂನುಗಳ ಹಿಂದಿ ಶೀರ್ಷಿಕೆಗಳನ್ನು ಪ್ರಶ್ನಿಸಿ ದಾಖಲಾಗಿರುವ ಪ್ರಕರಣವೊಂದರ ವಿಚಾರಣೆ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್‌ ಹೊಸ ಕಾನೂನುಗಳ ಶೀರ್ಷಿಕೆಗಳು ಗೊಂದಲಮಯವಾಗಿದ್ದು ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದಿದೆ [ಪಿವಿ ಜವೀಶ್‌ (ವಕೀಲರು) ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಜುಲೈ 1, 2024ರಿಂದ ನೂತನ ಕಾನೂನುಗಳು ಜಾರಿಗೆ ಬಂದಿವೆ. ಇದೇ ವೇಳೆ ಈ ಹೊಸ ಕಾನೂನುಗಳ ಹಿಂದಿ ಹೆಸರುಗಳ ಕುರಿತು ಆಕ್ಷೇಪಗಳು ನ್ಯಾಯಾಲಯದಲ್ಲಿ ಎದ್ದಿವೆ. ಹೀಗೆ ಧ್ವನಿ ಕೇಳಿಬಂದಿರುವ ಸಾಂವಿಧಾನಿಕ ನ್ಯಾಯಾಲಯಗಳ ಸಾಲಿನಲ್ಲಿ ಕೇರಳ ಹೈಕೋರ್ಟ್‌ ಹೊಸ ಸೇರ್ಪಡೆಯಾಗಿದೆ.

ಹೊಸ ಕಾನೂನುಗಳ ಶೀರ್ಷಿಕೆಗಳು ಗೊಂದಲಮಯವಾಗಿದ್ದು ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರಿದ್ದ ಪೀಠ ತಿಳಿಸಿತು.

ಪ್ರತಿಯೊಂದಕ್ಕೂ ಹೊಂದಾಣಿಕೆಯ ಅವಧಿ ಇರುತ್ತದೆ. ಆದರೆ ಹೆಸರು ಸ್ವಲ್ಪ ಗೊಂದಲಮಯವಾಗಿದೆ. ನಾವೂ ಇದೀಗ ಕಲಿಯುತ್ತಿದ್ದೇವೆ. ಈ ಕುರಿತಂತೆ ನ್ಯಾಯಾಂಗ ಅಕಾಡೆಮಿಯಲ್ಲಿ ನಡೆಯುತ್ತಿರುವ ತರಗತಿಗಳಿಗೆ ಹಾಜರಾಗುತ್ತಿದ್ದೇವೆ ಎಂದು ಪೀಠ ಮೌಖಿಕವಾಗಿ ತಿಳಿಸಿತು.

ಹೊಸ ಕಾನೂನುಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಉತ್ತಮವಾಗಿದ್ದರೂ ಹೆಸರುಗಳು ಗೊಂದಲು ಸೃಷ್ಟಿಸುವಂತಿವೆ ಎಂದು ಮದ್ರಾಸ್‌ ಹೈಕೋರ್ಟ್‌ ಇದೇ ಬಗೆಯ ಭಾವನೆ ವ್ಯಕ್ತಪಡಿಸಿತ್ತು.

ಆದರೆ, ಕಾನೂನುಗಳ ಹೆಸರನ್ನು ಬದಲಾಯಿಸುವ ವ್ಯಾಪ್ತಿಯೊಳಗೆ ತಾನು ಪ್ರವೇಶಿಸಬಹುದೇ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ಮುಸ್ತಾಕ್, "ಸಂಸತ್ತನ್ನು ನಿರ್ದೇಶಿಸಲು ನಾವು ಅದಕ್ಕಿಂತ ಹೆಚ್ಚಿನ ಅತೀತ ಸಂಸ್ಥೆಯೇ? ಈ ವಿಚಾರದಲ್ಲಿ, ಸಂಸತ್ತು ತಾನೇ ಅದನ್ನು (ಹೆಸರುಗಳನ್ನು) ಸರಿಪಡಿಸಬೇಕು...ನಾವು ಚುನಾಯಿತ ವ್ಯಕ್ತಿಗಳಲ್ಲ! ನಾವು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ಮಾತ್ರ. ಸಂಸತ್ತಿನಲ್ಲಿರವ 540 ಜನರ ಬುದ್ಧಿವಂತಿಕೆಯನ್ನು ನಾವು ಮೀರಬಹುದೇ? ಇದು ಸಂಸತ್ತು ರೂಪಿಸಿರುವ ಕಾಯಿದೆ. ಅವರು ಈ ದೇಶದ ಚುನಾಯಿತ ಪ್ರತಿನಿಧಿಗಳು. ಈ ವಿಷಯದಲ್ಲಿ ನಾವು ಹೇಗೆ ಹಸ್ತಕ್ಷೇಪ ಮಾಡಬಹುದು? 540 ಜನರು ನಿರ್ಧರಿಸಿದ್ದನ್ನು, ಇಬ್ಬರು ಚುನಾಯಿತರಲ್ಲದವರು ಹೇಗೆ ನಿರ್ಧರಿಸಲು ಸಾಧ್ಯ?" ಎಂದರು.

ಇದೇ ವೇಳೆ ಪ್ರತಿ ವಿಷಯವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ  ರೂಪದಲ್ಲಿ ನ್ಯಾಯಾಲಯಕ್ಕೆ ತರುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಸಂಸತ್ತಿಗೆ ನಿರ್ದೇಶನ ನೀಡಲು ನಾವು ಅತೀತ ಸಂಸ್ಥೆಯಲ್ಲ ಎಂದು ನುಡಿಯಿತು. ಸಂಸತ್ತಿನ 540 ಮಂದಿ ನಿರ್ಧರಿಸಿರುವುದರ ಬಗ್ಗೆ ಇಬ್ಬರು ವ್ಯಕ್ತಿಗಳು (ಪೀಠದಲ್ಲಿರುವ ಇಬ್ಬರು ನ್ಯಾಯಮೂರ್ತಿಗಳು) ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿತು.

ಹೊಸ ಕಾನೂನುಗಳ ಹೆಸರು ಹಿಂದಿಯನ್ನು ಪ್ರಥಮ ಭಾಷೆಯಾಗಿ ಮಾತನಾಡದ ದಕ್ಷಿಣ ಭಾರತ ಮತ್ತು ದೇಶದ ಇತರ ಭಾಗಗಳಲ್ಲಿ ವಕೀಲರಿಗೆ ಗೊಂದಲ ಮತ್ತು ತೊಂದರೆ ಉಂಟುಮಾಡುತ್ತಿದೆ ಎಂದು ನ್ಯಾಯವಾದಿ ಪಿವಿ ಜೀವೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಜುಲೈ 29ರ ಸೋಮವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.