INC MLA N A Haris and Karnataka HC
INC MLA N A Haris and Karnataka HC 
ಸುದ್ದಿಗಳು

ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಧ್ಯಂತರ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌; ಚುನಾವಣಾ ಅರ್ಜಿ ವಿಚಾರಣೆ ಅಬಾಧಿತ

Bar & Bench

ಆಸ್ತಿ ವಿಚಾರ ಮುಚ್ಚಿಟ್ಟಿರುವುದು ಚುನಾವಣೆಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದನ್ನು ಪರಾಜಿತ ಬಿಜೆಪಿ ಅಭ್ಯರ್ಥಿ ಕೆ ಶಿವಕುಮಾರ್‌ ಅವರು ತಮ್ಮ ಚುನಾವಣಾ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಚುನಾವಣಾ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಗುರುವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.

ಶಾಸಕ ಹ್ಯಾರಿಸ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿ ಜನವರಿ 29ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠ ಇಂದು ಪ್ರಕಟಿಸಿತು. ಹ್ಯಾರಿಸ್‌ ಅವರ ಮಧ್ಯಂತರ ಅರ್ಜಿ ತಿರಸ್ಕೃತವಾಗಿರುವುದರಿಂದ ಶಿವಕುಮಾರ್‌ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.

‘ಒಂದು ವೇಳೆ ಪ್ರತಿವಾದಿ ಹ್ಯಾರಿಸ್​ ಅವರ ಆಯ್ಕೆಯನ್ನು ಅನೂರ್ಜಿತ ಎಂದು ಘೋಷಿಸಿದರೂ, ಇದೇ ಕಾರಣದಿಂದಾಗಿ ಅರ್ಜಿದಾರ ಶಿವಕುಮಾರ್‌ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ಸಾಧ್ಯವಾಗುವುದಿಲ್ಲ. ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಆಧಾರಗಳ ಅವಶ್ಯಕತೆ ಇದೆ. ಹಾಗಾಗಿ, ಮಧ್ಯಂತರ ಅರ್ಜಿ ವಜಾಗೊಳಿಸಲಾಗುತ್ತಿದೆ’ ಎಂದು ಪೀಠ ತಿಳಿಸಿದೆ.

ಹ್ಯಾರಿಸ್‌ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಆಸ್ತಿಯ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿಲಾಗಿದೆ. ಆದರೆ, ಇದು ಹೇಗೆ ಚುನಾವಣೆಗೆ ಅಡ್ಡಿಪಡಿಸುತ್ತದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಚುನಾವಣಾ ಅರ್ಜಿಯು ಊರ್ಜಿತವಾಗುವುದಿಲ್ಲ” ಎಂದು ಸಮರ್ಥಿಸಿದ್ದರು.

ಅರ್ಜಿದಾರ ಶಿವಕುಮಾರ್‌ ಅವರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಆಸ್ತಿ ವಿವರ ಮುಚ್ಚಿಟ್ಟಿರುವುದು ನಿಜವಾದರೆ ಅದನ್ನು ಸಾಬೀತುಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚುನಾವಣಾ ಅಧಿಕಾರಿ ಉಮೇದುವಾರಿಕೆ ಸ್ವೀಕರಿಸಿದ್ದೇ ತಪ್ಪಾಗಲಿದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿದೆ. ಉಮೇದುವಾರಿಕೆ ಪರಿಶೀಲಿಸಿ ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸಬೇಕಿತ್ತು” ಎಂದು ವಾದಿಸಿದ್ದರು.

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ಸುಳ್ಳು ಘೋಷಣೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರಾಸ್ತಿಗಳನ್ನು ವಾಸ್ತವಕ್ಕಿಂತಲೂ ಕಡಿಮೆ ಅಂದಾಜಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ, ಈ ನಾಮಪತ್ರ ಸ್ವೀಕರಿಸಿರುವುದರಿಂದ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡಿದ್ದು ಅವರನ್ನು ಅನರ್ಹಗೊಳಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ.

K Shivakumar Vs N A Haris and others.pdf
Preview