ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ- 1991ರ ನಿಯಮಾವಳಿ ಪ್ರಶ್ನಿಸುವ ಅರ್ಜಿಗಳನ್ನು ವಿರೋಧಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ವಿರುದ್ಧ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ಮಧ್ಯಪ್ರವೇಶ ಕೋರಿ ಕಾಂಗ್ರೆಸ್ ಅರ್ಜಿ ಸಲ್ಲಿಸಿದೆ.
ಭಾರತದಲ್ಲಿ ಜಾತ್ಯತೀತತೆ ಕಾಪಾಡಲು ಈ ಕಾಯಿದೆ ಅತ್ಯಗತ್ಯವಾಗಿದ್ದು ಅದನ್ನು ಪ್ರಶ್ನಿಸುವುದು ಜಾತ್ಯತೀತತೆಯ ಸ್ಥಾಪಿತ ತತ್ವಗಳನ್ನು ದುರ್ಬಲಗೊಳಿಸುವ ದುರುದ್ದೇಶಪೂರಿತ ಪ್ರಯತ್ನವಾಗಿದೆ ಎಂದು ಅರ್ಜಿ ಹೇಳಿದೆ.
ಅರ್ಜಿಯ ಪ್ರಮುಖಾಂಶಗಳು
ಕಾಯಿದೆಗೆ ಮಾಡುವ ಯಾವುದೇ ಬದಲಾವಣೆಗಳು ಭಾರತದ ಕೋಮು ಸೌಹಾರ್ದತೆ ಮತ್ತು ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರಬಹುದಾಗಿರುವುದರಿಂದ ಕಾಯಿದೆಯ ಸಾಂವಿಧಾನಿಕ ಮತ್ತು ಸಾಮಾಜಿಕ ಮಹತ್ವ ತಿಳಿಸಲು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಬಯಸುತ್ತಿದ್ದೇವೆ.
ಕಾಂಗ್ರೆಸ್ ಜಾತ್ಯತೀತ ತತ್ವಗಳಿಗೆ ಬದ್ಧವಾಗಿದ್ದು ಲೋಕಸಭೆಯಲ್ಲಿ ಜನತಾ ದಳ ಪಕ್ಷವು ಬಹುಮತ ಪಡೆದು ಅಧಿಕಾರದಿಲ್ಲಿದ್ದಾಗ ಈ ಕಾಯಿದೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ತಾನು ಕಾಯಿದೆಯ ಮಂಡನೆ ಮತ್ತು ಜಾರಿಗೆ ಜವಾಬ್ದಾರನಾಗಿದ್ದುದರಿಂದ ತನಗೆ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಕಾಯಿದೆ ಜಾರಿಯ ಕಾನೂನು ಮಾನ್ಯತೆ ರಕ್ಷಿಸುವುದಕ್ಕಾಗಿ ನ್ಯಾಯಾಲಯ ಅನುಮತಿಸಬಹುದಾಗಿದೆ.
ದೇಶದ ಎಲ್ಲಾ ಸಮುದಾಯಗಳ ನಡುವೆ ಕೋಮು ಸೌಹಾರ್ದತೆ ಮತ್ತು ಸೌಹಾರ್ದ ಸಂಬಂಧಗಳಿಗೆ ಪೂಜಾ ಸ್ಥಳಗಳ ಕಾಯಿದೆ ಅತ್ಯಗತ್ಯ.
ಬಿಜೆಪಿಯ ಉಪಾಧ್ಯಾಯ ಅವರು ಸಲ್ಲಿಸಿರುವ ಮನವಿ ಆಕ್ಷೇಪಾರ್ಹ ಉದ್ದೇಶಗಳಿಂದ ಕೂಡಿದೆ. ಉಪಾಧ್ಯಾಯ ಅವರ ಅರ್ಜಿ ಹಿಂದೂ, ಸಿಖ್, ಜೈನ ಮತ್ತು ಬೌದ್ಧ ಸಮುದಾಯಗಳ ಸದಸ್ಯರಿಗೆ ಮಾತ್ರ ಅನ್ವಯವಾಗುವುದರಿಂದ ತಾರತಮ್ಯದಿಂದ ಕೂಡಿದೆ ಎಂದು ತಪ್ಪಾಗಿ ಉಲ್ಲೇಖಿಸಿದೆ.
ಆದರೆ ಕಾಯಿದೆ ಎಲ್ಲಾ ಧಾರ್ಮಿಕ ಸಮುದಾಯಗಳ ನಡುವೆ ಸಮಾನತೆಯನ್ನು ತರಲಿದ್ದು ಯಾವುದೋ ಒಂದು ಸಮುದಾಯಕ್ಕೆ ವಿಶೇಷತೆಯನ್ನು ಒದಗಿಸುವುದಿಲ್ಲ.
ಕಾಯಿದೆಯ ಯಾವುದೇ ಬದಲಾವಣೆಗಳು ಭಾರತದ ಕೋಮು ಸೌಹಾರ್ದತೆಯ ಜಾತ್ಯತೀತ ವ್ಯವಸ್ಥೆ ಸಾರ್ವಭೌಮತೆ ಹಾಗೂ ಏಕತೆಗೆ ಧಕ್ಕೆ ತರಬಹುದು.
ಜಮಿಯತ್ ಉಲೇಮಾ-ಇ-ಹಿಂದ್ ಕೂಡ ಉಪಾಧ್ಯಾಯ ಅವರು ಸಲ್ಲಿಸಿರುವ ಮನವಿಯಲ್ಲಿ ತನ್ನನ್ನು ಕಕ್ಷಿದಾರನನ್ನಾಗಿಸಿಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಲ್ಲದೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಕಾಯಿದೆಯ ಜಾರಿಯಲ್ಲಿರಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಅಸ್ತಿತ್ವದಲ್ಲಿರುವ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ವಿವಾದಕ್ಕೆಳೆಸುವ ಪ್ರಕರಣಗಳಲ್ಲಿ ಅಂತಹ ಧಾರ್ಮಿಕ ಸ್ಥಳಗಳ ಸಮೀಕ್ಷೆಗಾಗಲಿ ಅಥವಾ ವಿವಾದದ ಸಂಬಂಧ ಅಂತಿಮ ಆದೇಶವನ್ನಾಗಲಿ ನೀಡದಂತೆ ಡಿಸೆಂಬರ್ 2024 ರಲ್ಲಿ, ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು.