ಒಟ್ಟು ₹ 2,000 ಕೊಟ್ಟು ಖರೀದಿಸಿದ 25 ಊಟಗಳಿಗೆ ಬಿಲ್ ನೀಡದಿದ್ದಕ್ಕಾಗಿ ಮತ್ತು ₹ 1 ಮೌಲ್ಯದ ಉಪ್ಪಿನಕಾಯಿಯನ್ನೂ ಒದಗಿಸದೆ ಇದ್ದುದಕ್ಕಾಗಿ ಗ್ರಾಹಕರೊಬ್ಬರಿಗೆ ₹ 35,000 ಪರಿಹಾರ ನೀಡಬೇಕು ಎಂದು ರೆಸ್ಟರಂಟ್ ಮಾಲೀಕರಿಗೆ ತಮಿಳುನಾಡಿನ ಜಿಲ್ಲಾ ಗ್ರಾಹಕ ಆಯೋಗವೊಂದು ಆದೇಶಿಸಿದೆ [ಸಿ. ಆರೋಕಿಯಾಸಾಮಿ ಮತ್ತು ಹೋಟೆಲ್ ಬಾಲಮುರುಗನ್ ಮಾಲೀಕ ನಡುವಣ ಪ್ರಕರಣ].
ರೆಸ್ಟರಂಟ್ ಮಾಲೀಕರ ಕೃತ್ಯ ಸೇವಾ ನ್ಯೂನತೆ ಎಂದು ವಿಲ್ಲುಪುರಂ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ (ಡಿಸಿಡಿಆರ್‌ಸಿ) ಅಧ್ಯಕ್ಷ ಡಿ ಸತೀಶ್ ಕುಮಾರ್ ಮತ್ತು ಸದಸ್ಯರಾದ ಎಸ್ಎಂ ಮೀರಾ ಮೊಹಿದೀನ್, ಕೆ.ಅಮಲಾ ಅವರು ತಿಳಿಸಿದ್ದಾರೆ.
ಒಟ್ಟು 25 ಊಟಗಳಿಗೆ ಉಪ್ಪಿನಕಾಯಿ ಬಡಿಸದೆ ಇದ್ದದ್ದು ರೆಸ್ಟರಂಟ್‌ನ ಸೇವಾ ನ್ಯೂನತೆಯಾಗಿದೆ. ಉಪ್ಪಿನಕಾಯಿಗೆ ಪಾವತಿಸಿದ್ದ ಹಣ ಮರುಪಾವತಿಸುವಂತೆ ಗ್ರಾಹಕರು ಪತ್ರ ಬರೆದಿದ್ದರೂ ರೆಸ್ಟರಂಟ್ ದೂರುದಾರರ ಅಹವಾಲು ಆಲಿಸಲು ವಿಫಲವಾಗಿದ್ದು ಇದು ಸೇವಾ ನ್ಯೂನತೆ ಎಂದು ಈಚೆಗೆ ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.
ಉಪ್ಪಿನಕಾಯಿ ಬಿಡಿಸದೆ ಇರುವುದಷ್ಟೇ ಅಲ್ಲದೆ ಒಟ್ಟು ₹ 2,000 ಕೊಟ್ಟು ಖರೀದಿಸಿದ 25 ಊಟಗಳಿಗೆ ಬಿಲ್ ಕೂಡ ನೀಡಿಲ್ಲ. ಈ ಸೇವಾ ನ್ಯೂನತೆಯಿಂದಾಗಿ ದೂರುದಾರರು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೀಗಾಗಿ ರೆಸ್ಟರಂಟ್ ಉಪ್ಪಿನಕಾಯಿಗೆ ಪಾವತಿಸಲಾಗಿದ್ದ ₹25ನ್ನು ಮರಳಿಸಬೇಕು. ದೂರುದಾರರು ಅನುಭವಿಸಿದ ದೈಹಿಕ ತೊಂದರೆ ಹಾಗೂ ಮಾನಸಿಕ ಯಾತನೆಗೆ ಪರಿಹಾರ ರೂಪದಲ್ಲಿ ₹30,000 ಪಾವತಿಸಬೇಕು. ಜೊತೆಗೆ ದಾವೆ ವೆಚ್ಚವಾಗಿ ₹ 5,000 ನೀಡಬೇಕು ಎಂದು ರೆಸ್ಟರಂಟ್ ಮಾಲೀಕರಿಗೆ ಸೂಚಿಸಲಾಗಿದೆ.
ತಮ್ಮ ಮೃತ ಸಂಬಂಧಿಯ ಪುಣ್ಯ ತಿಥಿ ನಿಮಿತ್ತ ನವೆಂಬರ್ 2022ರಲ್ಲಿ ವಿಲ್ಲುಪುರಂನ ಹೋಟೆಲ್ ಬಾಲಮುರುಗನ್‌ನಿಂದ 25 ಊಟದ ಪಾರ್ಸೆಲ್‌ಗಳನ್ನು ಸಿ ಆರೋಕ್ಯಸ್ವಾಮಿ ಅವರು ಆರ್ಡರ್ ಮಾಡಿದ್ದರು. ತನಗೆ ಒದಗಿಸಲಾಗುವ ಊಟದ ಮೆನು ಒದಗಿಸುವಂತೆ ಖರೀದಿದಾರರು ರೆಸ್ಟರಂಟ್ ಮಾಲೀಕರನ್ನು ಕೋರಿದ್ದರು.
ಅದರಲ್ಲಿ ಅನ್ನ, ಸಾಂಬಾರ್, ಖಾರ ಕುಳುಂಬು, ರಸಂ, ಮಜ್ಜಿಗೆ, ಕೂಟ್ಟು, ಪೊರಿಯಾಲ್, ಹಪ್ಪಳ, ಉಪ್ಪಿನಕಾಯಿ, ದೊಡ್ಡ ಗಾತ್ರದ ಬಾಳೆ ಎಲೆ ಮತ್ತು ಒಂದು ಕವರ್ ನೀಡುವುದಾಗಿ ತಿಳಿಸಲಾಗಿತ್ತು. ಇದಕ್ಕೆ ಸಮ್ಮತಿಸಿದ್ದ ದೂರುದಾರ ಪ್ರತಿ ಊಟಕ್ಕೆ ₹80ರಂತೆ 25 ಊಟಕ್ಕೆ ₹2000 ಪಾವತಿಸಿದ್ದರು.
ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಬಡಿಸಿದ ಊಟದಲ್ಲಿ ಉಪ್ಪಿನಕಾಯಿ ಇಲ್ಲದೇ ಇದ್ದುದರಿಂದ ತಾವು ಅವಮಾನ ಹಾಗೂ ಮುಜುಗರ ಅನುಭವಿಸಿದ್ದಾಗಿ ದೂರುದಾರ ತಿಳಿಸಿದ್ದರು.
ರೆಸ್ಟರಂಟ್ ಮಾಲೀಕರನ್ನು ಸಂಪರ್ಕಿಸಿದಾಗ ತಪ್ಪೊಪ್ಪಿಕೊಂಡ ಅವರು ಉಪ್ಪಿನಕಾಯಿ ಒದಗಿಸುವ ಭರವಸೆ ನೀಡಿದರು. ಆದರೆ ಅಷ್ಟರಲ್ಲಾಗಲೇ ಊಟ ಮುಗಿದಿದ್ದರಿಂದ ಉಪ್ಪಿನಕಾಯಿಗೆ ನೀಡಿದ್ದ ಹಣ ಮರಳಿಸುವಂತೆ ದೂರುದಾರ ರೆಸ್ಟರಂಟ್ ಮಾಲೀಕರನ್ನು ಕೋರಿದ್ದರು. ಅಲ್ಲದೆ ತಾನು ಪಾವತಿಸಿದ್ದ ₹ 2,000ಕ್ಕೆ ಸೂಕ್ತ ಬಿಲ್ ನೀಡದೆ ಒಂದು ಸಣ್ಣ ಚೀಟಿಯಲ್ಲಿ ಹಣದ ಮೊತ್ತ ನಮೂದಿಸಿಕೊಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.