ESBEDA  Facebook
ಸುದ್ದಿಗಳು

ಕ್ಯಾರಿ ಬ್ಯಾಗ್‌ಗೆ ₹ 20 ಶುಲ್ಕ: ʼಎಸ್ಬೆಡಾʼ ಅಂಗಡಿಗೆ ₹ 35 ಸಾವಿರ ದಂಡ ವಿಧಿಸಿದ ಗ್ರಾಹಕರ ವೇದಿಕೆ

ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್ ನೀಡದೆ ಅದಕ್ಕೆ ಶುಲ್ಕ ಪಡೆದಿರುವುದು ಸೇವಾ ಲೋಪವಾಗುತ್ತದೆ ಮತ್ತು ಅನ್ಯಾಯದ ವ್ಯಾಪಾರಾಭ್ಯಾಸ ಎಂದು ಪರಿಗಣಿಸಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟ ಗ್ರಾಹಕರ ವೇದಿಕೆ.

Bar & Bench

ಗ್ರಾಹಕರೊಬ್ಬರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಬೆಲೆಗೆ ಕ್ಯಾರಿ ಬ್ಯಾಗ್‌ ಮಾರಾಟ ಮಾಡಿದ್ದ ಚರ್ಮದ ಉತ್ಪನ್ನಗಳ ವಹಿವಾಟು ನಡೆಸುವ ಎಸ್ಬೆಡಾ ಕಂಪೆನಿಯ ಅಂಗಡಿಯೊಂದಕ್ಕೆ ಮುಂಬೈ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಇತ್ತೀಚೆಗೆ ₹ 35,000ಕ್ಕೂ ಅಧಿಕ ದಂಡ ವಿಧಿಸಿದೆ.

ದೂರುದಾರೆ ರೀಮಾ ಚಾವ್ಲಾ ನಗರದ ಫೀನಿಕ್ಸ್ ಮಾರ್ಕೆಟ್‌ ಸಿಟಿಯ ಎಸ್ಪೆಡಾ ಶೋರೂಮ್‌ನಿಂದ ₹ 1,690 ಮೌಲ್ಯದ ಬ್ಯಾಗ್‌ ಖರೀದಿಸಿದ್ದರು. ಶುಲ್ಕ ಪಾವತಿ ವೇಳೆ ಕಂಪೆನಿಯ ಲಾಂಛನ ಇರುವ ಕ್ಯಾರಿ ಬ್ಯಾಗ್‌ ನೀಡಿ ₹ 20 ಪಡೆಯಲಾಗಿತ್ತು.

ಗ್ರಾಹಕರು ಖರೀದಿಸಿದ ಉತ್ಪನ್ನಗಳನ್ನು ಸಾಗಿಸುವ ಕ್ಯಾರಿ ಬ್ಯಾಗ್‌ಗೆ ಶುಲ್ಕ ವಿಧಿಸುವುದು ಅನ್ಯಾಯ ಎಂದು ರೀಮಾ ಅವರು ಆಕ್ಷೇಪಿಸಿದರೂ ಮಳಿಗೆಯ ಮ್ಯಾನೇಜರ್‌ ಒಪ್ಪಲಿಲ್ಲ. ಬಳಿಕ ಹಣ ಮರಳಿಸುವಂತೆ ಸೂಚಿಸಿ ಲೀಗಲ್‌ ನೋಟಿಸ್‌ ನೀಡಿದರೂ ಮಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಅವರು ಬಾಂದ್ರಾ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.

ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್‌ ನೀಡದೆ ಅದಕ್ಕೆ ಶುಲ್ಕ ಪಡೆದಿರುವುದು ಸೇವಾ ಲೋಪವಾಗುತ್ತದೆ. ಜೊತೆಗೆ ಅನ್ಯಾಯದ ವ್ಯಾಪಾರಾಭ್ಯಾಸವಾಗುತ್ತದೆ ಎಂದು ಅಭಿಪ್ರಾಯಪಟ್ಟ ವೇದಿಕೆ, ಕ್ಯಾರಿ ಬ್ಯಾಗ್‌ಗೆ ವಿಧಿಸಿದ್ದ ಶುಲ್ಕ ₹ 20ನ್ನು ಪಾವತಿಸಬೇಕು ಎಂದಿತು. ಅಲ್ಲದೆ ದಾವೆ ವೆಚ್ಚವಾಗಿ ರೂ ₹ 3,000; ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರ ರೂಪದಲ್ಲಿ ₹ 10,000 ಹಾಗೂ ಗ್ರಾಹಕರ ಕಲ್ಯಾಣ ನಿಧಿಗೆ ₹ 25,000 ಹಣ ನೀಡುವಂತೆ ನಿರ್ದೇಶಿಸಿತು.