Consumer Protection 
ಸುದ್ದಿಗಳು

ಹಾದಿ ತಪ್ಪಿಸುವ ಜಾಹೀರಾತು: ವಿದ್ಯಾರ್ಥಿನಿಗೆ ಶುಲ್ಕ ಮರುಪಾವತಿಸಲು ಐಎಎಸ್ ಕೋಚಿಂಗ್ ಸೆಂಟರ್‌ಗೆ ಗ್ರಾಹಕರ ವೇದಿಕೆ ಆದೇಶ

ವಿದ್ಯಾರ್ಥಿಗಳನ್ನು ಸೆಳೆಯಲು ʼಐಎಎಸ್ ಗುರುಕುಲ್ʼ ತನ್ನ ಕರಪತ್ರ ಮತ್ತು ಜಾಹೀರಾತುಗಳಲ್ಲಿ ಸುಳ್ಳು ಪ್ರತಿಪಾದನೆಗಳ ಮೂಲಕ ಅನ್ಯಾಯದ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದೆ ಎಂದಿದೆ ವೇದಿಕೆ.

Bar & Bench

ಹಾದಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರಿಗೆ ₹ 62,363 ಶುಲ್ಕ ಮರುಪಾವತಿ ಮಾಡುವಂತೆ ಮತ್ತು ಆಕೆ ಅನುಭವಿಸಿದ ಮಾನಸಿಕ ಸಂಕಟಗಳಿಗೆ ಪರಿಹಾರ ರೂಪದಲ್ಲಿ ₹ 15,000 ದಂಡ ಪಾವತಿಸುವಂತೆ ಪ್ರಸಿದ್ಧ ನಾಗರಿಕ ಸೇವಾ ಕೋಚಿಂಗ್ ಸಂಸ್ಥೆಯಾದ ʼಐಎಎಸ್ ಗುರುಕುಲ್‌ʼಗೆ ದೆಹಲಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ಆದೇಶಿಸಿದೆ. [ಸತ್ಯತಾ ಮತ್ತು ಐಎಎಸ್‌ ಗುರುಕಲ್‌ ನಡುವಣ ಪ್ರಕರಣ]

ವಿದ್ಯಾರ್ಥಿಗಳನ್ನು ಸೆಳೆಯಲು ಐಎಎಸ್ ಗುರುಕುಲ್ ತನ್ನ ಕರಪತ್ರ ಮತ್ತು ಜಾಹೀರಾತುಗಳಲ್ಲಿ ಸುಳ್ಳು ಪ್ರತಿಪಾದನೆಗಳ ಮೂಲಕ ಅನ್ಯಾಯದ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಅಧ್ಯಕ್ಷ ಇಂದರ್ ಜೀತ್ ಸಿಂಗ್ ಮತ್ತು ಸದಸ್ಯೆ ರಶ್ಮಿ ಬನ್ಸಾಲ್ ಅವರಿದ್ದ ಆಯೋಗ ತಿಳಿಸಿತು.

ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಹಾಗೂ ಮೇಲಿನ ಚರ್ಚೆಯನ್ನು ಪರಿಗಣಿಸಿ ತಾನು ನೀಡಿದ ಭರವಸೆ ಈಡೇರಿಸುವ ಉದ್ದೇಶವಿಲ್ಲದೆ ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ ಜಾಹೀರಾತು ಮತ್ತು ಕರಪತ್ರಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಐಎಎಸ್‌ ಗುರುಕುಲ್‌ ತಪ್ಪಿತಸ್ಥ ಎಂದು ಸೆ. 30ರ ಆದೇಶದಲ್ಲಿ ಆಯೋಗ ವಿವರಿಸಿದೆ.

ಐಎಎಸ್‌ ಗುರುಕುಲ್‌ನ ಸಂಪೂರ್ಣ ಐಎಎಸ್ ತಯಾರಿ ಕೋರ್ಸ್‌ಗೆ ದೂರುದಾರೆ 2017ರ ನವೆಂಬರ್‌ನಲ್ಲಿ ₹98,000 ಪಾವತಿಸಿ ಪ್ರವೇಶ ಪಡೆದಿದ್ದರು. ಆದರೆ ಗುಣಮಟ್ಟದ ಅಧ್ಯಾಪಕರು ಮತ್ತು ಸಮಗ್ರ ತರಬೇತಿ ನೀಡುವ ಭರವಸೆಯನ್ನು ಸಂಸ್ಥೆ ಈಡೇರಿಸಿಲ್ಲ ಎಂಬುದು ಆಕೆಯ ದೂರಾಗಿತ್ತು.

ಶೇ 100ರಷ್ಟು ಪಠ್ಯಕ್ರಮ ಅಧ್ಯಯನ ಮತ್ತು ವೈಯಕ್ತಿಕ ಮಾರ್ಗದರ್ಶನ ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತಾದರೂ ಪ್ರಮುಖ ಪಠ್ಯವಿಷಯಗಳಲ್ಲಿ ಅರ್ಹ ಅಧ್ಯಾಪಕರ ಕೊರತೆ ಕಂಡು ಬಂದಿತ್ತು. ತಾವು ತರಗತಿಗೆ ಹಾಜರಾಗಿ ನಾಲ್ಕು ತಿಂಗಳುಗಳು ಕಳೆದರೂ ಯಾವುದೇ ವೈಯಕ್ತಿಕ ಮಾರ್ಗದರ್ಶನ ನೀಡಲಿಲ್ಲ, ಸರಣಿ ಕಿರುಪರೀಕ್ಷೆಗಳನ್ನು ನಡೆಸಲಿಲ್ಲ ಅಥವಾ ಭರವಸೆ ನೀಡಿದ್ದ ಸಂಪನ್ಮೂಲಗಳನ್ನು ಒದಗಿಸಲಿಲ್ಲ. ಸಂಸ್ಥೆಯ ವೈಫಲ್ಯಗಳಿಂದಾಗಿ ತನ್ನ ಸಮಯ ಮತ್ತು ಶ್ರಮ ವ್ಯರ್ಥವಾಗಿದ್ದು ಪರಿಹಾರವಾಗಿ  ₹ 15 ಲಕ್ಷ  ಪರಿಹಾರ ಒದಗಿಸಲು ನಿರ್ದೇಶಿಸಬೇಕು ಎಂದು ಆಕೆ ಕೋರಿದ್ದರು. 

ಆದರೆ ದೂರುದಾರೆ ಯಾವುದೇ ಆಕ್ಷೇಪಗಳಿಲ್ಲದೆ ಒಂಬತ್ತು ತಿಂಗಳ ಕಾಲ ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಐಎಎಸ್‌ ಗುರುಕುಲ್‌ ವಾದಿಸಿತು. ವೈಯಕ್ತಿಕ ಕಾರಣಗಳಿಗಾಗಿ ಐಎಎಸ್ ಸಿದ್ಧತೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದ ಆಕೆ ಇದೀಗ ಶುಲ್ಕ ಮರುಪಾವತಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ತನ್ನಿಂದ ಯಾವುದೇ ಸೇವಾ ನ್ಯೂನತೆ ಉಂಟಾಗಿಲ್ಲ. ಆಕೆ ಪ್ರವೇಶ ಪಡೆಯುವ ಮುನ್ನ ಡೆಮೊ ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ತಾನು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಿಲ್ಲ. ದೂರುದಾರೆ ಪ್ರವೇಶಾತಿ ಪಡೆದ ಬಳಿಕ ಬ್ರೋಷರ್‌ ಪ್ರಕಟಿಸಲಾಗಿದೆ ಎಂದಿತು.

ವಾದ ಆಲಿಸಿದ ಆಯೋಗ,  ದೂರುದಾರೆ ಒಂಬತ್ತು ತಿಂಗಳ ಕಾಲ ಕೋರ್ಸ್‌ಗೆ ಹಾಜರಾಗಿದ್ದರು ಎಂಬ ತನ್ನ ಹೇಳಿಕೆಗೆ ಪುರಾವೆ ಒದಗಿಸಲು ʼಐಎಎಸ್‌ ಗುರುಕುಲ್‌ʼ ವಿಫಲವಾಗಿದೆ. ಹೀಗಾಗಿ ನಾಲ್ಕು ತಿಂಗಳ ಕಾಲ ಹಾಜರಾಗಿದ್ದಾಗಿ ದೂರುದಾರೆ ಮಂಡಿಸಿದ ವಾದವನ್ನು ಪುರಸ್ಕರಿಸಲಾಗಿದೆ. ಸಂಸ್ಥೆ ಬಳಸುವ ಜಾಹೀರಾತುಗಳು ಮತ್ತು ಕರಪತ್ರಗಳು ತಪ್ಪುದಾರಿಗೆಳೆಯುವಂತಿವೆ. ಹೆಸರಾಂತ ಮಾರ್ಗದರ್ಶಕರು ಮತ್ತು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿಕೊಂಡರೂ ಅವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿರುವುದಕ್ಕೆ ಯಾವುದೇ ಪುರಾವೆಗಳನ್ನು ಸಂಸ್ಥೆ ಒದಗಿಸಿಲ್ಲ ಎಂದಿತು.

ಎಫ್ಐಐಟಿ ಜೆಇಇ ಲಿಮಿಟೆಡ್ ಮತ್ತು ಮಿನಾತಿ ರಾಥ್‌ ನಡುವಣ ಪ್ರಕರಣದಲ್ಲಿ ದೆಹಲಿ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ನೀಡಿದ್ದ ತೀರ್ಪಿನಂತೆ ಪೂರ್ಣ ಶುಲ್ಕವನ್ನು ಮುಂಗಡವಾಗಿ ಪಡೆಯುವಂತಿಲ್ಲ. ಹೀಗೆ ಶುಲ್ಕ ಪಡೆಯುವುದು ಅನ್ಯಾಯವಾದ್ದರಿಂದ ಕೋರ್ಸ್‌ ಬಳಸದ ಅವಧಿಯ ಶುಲ್ಕವನ್ನು ಆಕೆಗೆ ಸಂಸ್ಥೆ ಮರುಪಾವತಿಸಬೇಕು ಎಂದು ಆದೇಶಿಸಿತು.