Drishti IAS academy, Central Consumer Protection Authority 
ಸುದ್ದಿಗಳು

ಯುಪಿಎಸ್‌ಸಿ ತೇರ್ಗಡೆ ಕುರಿತು ಸುಳ್ಳು ಜಾಹೀರಾತು: ಆನ್‌ಲೈನ್‌ ತರಬೇತುದಾರ ದೃಷ್ಟಿ ಐಎಎಸ್‌ಗೆ ಸಿಸಿಪಿಎ ₹5 ಲಕ್ಷ ದಂಡ

ಪಾಸಾದ ಅಭ್ಯರ್ಥಿಗಳ ಹೆಸರನ್ನಷ್ಟೇ ದೃಷ್ಟಿ ಐಎಎಸ್ ಸಂಸ್ಥೆಯ ಜಾಹೀರಾತು ಪ್ರದರ್ಶಿಸಿದ್ದು ಅವರಲ್ಲಿ ಎಷ್ಟು ಮಂದಿ ಉಚಿತವಾಗಿ ತರಬೇತಿ ಪಡೆದಿದ್ದರು ಎಂಬುದನ್ನು ಅದು ಹೇಳಿಲ್ಲ ಎಂದು ಸಿಸಿಪಿಎ ತಿಳಿಸಿದೆ.

Bar & Bench

ಯುಪಿಎಸ್‌ಸಿ ಸಿಎಸ್‌ಇ 2022ನೇ ಸಾಲಿನ ಪರೀಕ್ಷೆಯಲ್ಲಿ ತನ್ನ ಸಂಸ್ಥೆಯಿಂದ 216ಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ ಎಂದು ಸುಳ್ಳು ಮಾಹಿತಿ ಇರುವ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ವಿಡಿಕೆ ಎಜುವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ ನಡೆಸುತ್ತಿರುವ ಲೋಕಸೇವಾ ಆಯೋಗ ಪರೀಕ್ಷೆಗಳ ಆನ್‌ಲೈನ್‌ ಅಧ್ಯಯನ ಜಾಲತಾಣ ದೃಷ್ಟಿ ಐಎಎಸ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ₹5 ಲಕ್ಷ ದಂಡ ವಿಧಿಸಿದೆ.

ಉತ್ತೀರ್ಣರಾದ ಅಭ್ಯರ್ಥಿಗಳ ಹೆಸರು ಮತ್ತು ಛಾಯಾಚಿತ್ರಗಳನ್ನು ಇಡಿಯಾಗಿ ದೃಷ್ಟಿ ಐಎಎಸ್‌ ಜಾಹೀರಾತು ಪ್ರಕಟಿಸಿದ್ದು ಅವರಲ್ಲಿ ಹಣ ತೆತ್ತು ತರಬೇತಿ ಪಡೆದವರೆಷ್ಟು ಮಂದಿ ಹಾಗೂ ಸಂಸ್ಥೆಯ ನೆರವಿಲ್ಲದೆ ಯುಪಿಎಸ್‌ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ತಾವಾಗಿಯೇ ಪಾಸು ಮಾಡಿದ ನಂತರ ಉಚಿತ ಐಜಿಪಿ ಕೋರ್ಸ್‌ಗೆ ದಾಖಲಾದವರು ಎಷ್ಟು ಮಂದಿ ಎಂಬುದನ್ನು ವಿವರಿಸಿಲ್ಲ ಎಂದು ಮುಖ್ಯ ಆಯುಕ್ತರಾದ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ದೃಷ್ಟಿ ಐಎಎಸ್‌ ಜಾಲತಾಣದಲ್ಲಿ ಪ್ರಕಟಿಸಿದ್ದ ಜಾಹೀರಾತಿನ ವಿರುದ್ಧ ಸಿಸಿಪಿಎ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.

216 ವಿದ್ಯಾರ್ಥಿಗಳಲ್ಲಿ 162 ಮಂದಿ ಸಂಸ್ಥೆಯ ನೆರವನ್ನು ಪಡೆಯದೆ ಉತ್ತೀರ್ಣರಾಗಿ ಕೇವಲ ಉಚಿತ ಐಜಿಪಿ ಪಡೆದಿದ್ದರು. 54 ಜನ ಮಾತ್ರ ಹಣ ಪಾವತಿಸಿ ತರಬೇತಿ ಪಡೆದಿದ್ದರು.

ಆದರೆ ಜಾಹೀರಾತಿನಲ್ಲಿ ಎಲ್ಲರೂ ಸಂಸ್ಥೆಯಿಂದ ತರಬೇತಿ ಪಡೆದವರು ಎಂಬಂತೆ ಬಿಂಬಿಸಿ ತಪ್ಪು  ಎಂದಿರುವ ಸಿಸಿಪಿಎ ಆ ಮೂಲಕ ದೃಷ್ಟಿ ಐಎಎಸ್‌ ಅಸತ್ಯ ಅಪರಿಪೂರ್ಣ ಹಾಗೂ ದಿಕ್ಕು ತಪ್ಪಿಸುವ ಜಾಹೀರಾತು ನೀಡಿದೆ ಎಂದು ತಿಳಿಸಿ ದಂಡ ವಿಧಿಸಿತು.  

ಈಗಾಗಲೇ ಇಂಥದ್ದೇ ಕೃತ್ಯಕ್ಕಾಗಿ ಸೆಪ್ಟೆಂಬರ್ 2024 ರಲ್ಲಿ ದಂಡ ತೆತ್ತಿದ್ದ ದೃಷ್ಟಿ ಐಎಎಸ್‌ಗೆ ತಪ್ಪನ್ನು ಪುನರಾವರ್ತಿಸಿದ್ದಕ್ಕಾಗಿ ಮತ್ತೆ ಇದೀಗ ನ್ಯಾಯಾಲಯ ದಂಡ ವಿಧಿಸಿದೆ.  

ಕೋಚಿಂಗ್ ಸಂಸ್ಥೆಗಳು ತಮ್ಮ ಜಾಹಿರಾತುಗಳಲ್ಲಿ ಯಾವ ಕೋರ್ಸು ವಿದ್ಯಾರ್ಥಿಗಳು ತೆಗೆದುಕೊಂಡರು ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದಿರುವ ಅದು ಮುಂದಿನ ಜಾಹೀರಾತುಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿತು.