Azim Premji, Supreme Court
Azim Premji, Supreme Court 
ಸುದ್ದಿಗಳು

ಎನ್‌ಜಿಒ ವಿರುದ್ಧ ಅಜೀಂ ಪ್ರೇಮ್‌ಜೀ ಮೊಕದ್ದಮೆ: ತ್ವರಿತ ವಿಚಾರಣೆಗಾಗಿ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ನಿರ್ದೇಶನ

Bar & Bench

ತಮ್ಮ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ಅವಹೇಳನ ಮಾಡಿದ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ʼಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಪರೆನ್ಸಿʼ ವಿರುದ್ಧ ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ಪ್ರೇಮ್‌ಜಿ ವಿರುದ್ಧ ಅನೇಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸಲು ಎನ್‌ಜಿಒ ತಂತ್ರ ನಡೆಸಿರುವ ಬಗ್ಗೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ವಿಭಾಗೀಯ ಪೀಠ ಕಳವಳ ವ್ಯಕ್ತಪಡಿಸಿತು.

"ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ಅಸ್ಪಷ್ಟಗೊಳಿಸುವ ಪ್ರಯತ್ನ ನಿಸ್ಸಂದೇಹವಾಗಿ ಕಂಡುಬರುತ್ತಿದೆ, ಮತ್ತು ಅದು ನಿರ್ಣಾಯಕ ಸ್ಥಿತಿಗೆ ತಲುಪುವುದನ್ನು ತಡೆಯಲು ಪ್ರಕರಣವನ್ನು ಅನಗತ್ಯವಾಗಿ ಹಿಂಜಲಾಗುತ್ತಿದೆ. ವಿಚಾರಣೆಯನ್ನು ವಿಭಜಿಸಲು, ಪ್ರತಿಕ್ರಿಯೆ ಸಲ್ಲಿಸುವುದನ್ನು ಮುಂದೂಡಲು, ಅಡ್ವೊಕೇಟ್ ಜನರಲ್ ಮುಂತಾದವರ ಅನುಮತಿಗೆ ಅಡ್ಡಿಪಡಿಸಲು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

“ಸಾಮಾನ್ಯ ಸಂದರ್ಭಗಳಲ್ಲಿ, ಹೈಕೋರ್ಟ್ ಪ್ರಕರಣವನ್ನು ಹೇಗೆ ಮುಂದುವರೆಸಬೇಕು ಎಂದು ನಾವು ಹೇಳಬೇಕಿಲ್ಲ. ಆದರೆ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ರೀತಿ ನಮ್ಮನ್ನು ವಿಚಲಿತಗೊಳಿಸುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ಇದನ್ನು 'ಅಸಹಜ ನಡೆ' ಎಂದು ಬಣ್ಣಿಸಿದ ನ್ಯಾಯಾಲಯ ಕರ್ನಾಟಕ ಹೈಕೋರ್ಟ್‌ನಲ್ಲಿ ಎರಡೂ ಪಕ್ಷಕಾರರು ಪ್ರಕರಣದ ಇತ್ಯರ್ಥಕ್ಕಾಗಿ ಪಾಲಿಸಬೇಕಾದ ಮಾನದಂಡಗಳನ್ನು ರೂಪಿಸಿತು:

  • ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್‌ ಇನ್ನು ಮುಂದೆ ಯಾವುದೇ ಮಧ್ಯಂತರ ಅರ್ಜಿಗಳನ್ನು ಪರಿಗಣಿಸುವಂತಿಲ್ಲ.

  • ಆಕ್ಷೇಪಣೆಗಳ ಅಡಿ ಇನ್ನೂ ಕೆಲವು ಮಧ್ಯಂತರ ಅರ್ಜಿಗಳು ಇದ್ದಲ್ಲಿ, ಅವುಗಳನ್ನು ತೆರವುಗೊಳಿಸಿಕೊಳ್ಳುವುದು ಮತ್ತು ಮುಂದಿನ ದಿನಾಂಕದಂದು ವಿಚಾರಣೆಗಾಗಿ ಪಟ್ಟಿ ಮಾಡಿಕೊಳ್ಳುವುದು ಪ್ರತಿವಾದಿಯ ಜವಾಬ್ದಾರಿಯಾಗಿರುತ್ತದೆ, ವಿಫಲವಾದರೆ ಆ ಅರ್ಜಿಗಳು ಪ್ರಾಸಿಕ್ಯೂಷನ್ ಮಾಡಲಾಗದ ಕಾರಣಕ್ಕೆ ವಜಾಗೊಳ್ಳುತ್ತವೆ.

  • ನಮ್ಮ ದೃಷ್ಟಿಯಲ್ಲಿ, ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಪ್ರಾರಂಭಿಸಲು ಅಡ್ವೊಕೇಟ್ ಜನರಲ್ ಅವರು ಒಪ್ಪಿಗೆ ನೀಡುವ ಮೊದಲು ವಿಚಾರಣೆಯ ಸಮಸ್ಯೆಯನ್ನು ಎತ್ತುವ ಪ್ರಶ್ನೆಯೇ ಇಲ್ಲ. ಇದು ವಿಭಿನ್ನ ನ್ಯಾಯಾಲಯಗಳ ಪ್ರಕ್ರಿಯೆಗಳನ್ನು ಅವಲಂಬಿಸಲು ಬಯಸುವ ವಿಚಾರಣೆಯನ್ನು ಖಚಿತವಾಗಿ ಅಸ್ಪಷ್ಟಗೊಳಿಸುತ್ತದೆ.

  • ಪ್ರಕರಣದಲ್ಲಿ ತಮ್ಮ ಮೌಖಿಕ ವಾದ ಮಂಡಿಸಲು ಎರಡೂ ಪಕ್ಷಗಳಿಗೆ ತಲಾ ಅರ್ಧ ಗಂಟೆ ನೀಡಿ ಮತ್ತು ಪ್ರತಿ ಮೂರು ಪುಟಗಳಿಗಿಂತ ಹೆಚ್ಚಿಲ್ಲದ ಸಂಕ್ಷಿಪ್ತ ಸಾರಾಂಶವನ್ನು ಸಲ್ಲಿಸಬಹುದು. ಮೌಖಿಕ ಸಲ್ಲಿಕೆಗಳಿಗೆ ನ್ಯಾಯಾಲಯಗಳು ಸಮಯ ಮಿತಿಯನ್ನು ಹಾಕಲು ಇದು ಸಕಾಲ.

  • ನ್ಯಾಯಾಲಯಗಳು ಕಾಲಕಾಲಕ್ಕೆ ಹೊರಡಿಸಿದ ಆದೇಶಗಳನ್ನು ಆಧರಿಸಿದ ಪ್ರಸ್ತುತ ವಾ ಸ್ತವಿಕ ಸನ್ನಿವೇಶದಲ್ಲಿ, ವಿಚಾರಣೆಗಾಗಿ ಹಕ್ಕು ಸಾಧಿಸುವ ಪ್ರಶ್ನೆಯೇ ಇರುವುದಿಲ್ಲ.

  • ಅವಹೇಳನ ಪ್ರಕ್ರಿಯೆಯು ಮೇಲಿನ ಷರತ್ತುಗಳಲ್ಲಿ ಮುಕ್ತಾಯಗೊಳ್ಳುತ್ತದೆ ಮತ್ತು ನಾವು ಪ್ರತಿಕ್ರಿಯಿಸದಿರುವ ವಿಷಯದ ಅರ್ಹತೆಯ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು ನಂತರ ನಿರ್ಧರಿಸುತ್ತದೆ.

ಮುಂದಿನ ನಿರ್ದೇಶನಗಳಿಗಾಗಿ ಜನವರಿ 11, 2022 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಹಿರಿಯ ವಕೀಲ ಎಸ್ ಗಣೇಶ್ ಜೊತೆಗೆ ಅಡ್ವೊಕೇಟ್ ಆನ್ ರೆಕಾರ್ಡ್ ಇ ಸಿ ಅಗರವಾಲಾ ಮತ್ತು ವಕೀಲರಾದ ಮಹೇಶ್ ಅಗರ್ವಾಲ್, ರಿಷಿ ಅಗರವಾಲಾ, ಹಿಮಾಂಶು ಸತಿಜಾ ಮತ್ತು ಆರುಷಿ ಟಿಕು ಅವರು ಪ್ರೇಮ್‌ಜಿ ಅವರ ಪರವಾಗಿ ವಾದ ಮಂಡಿಸಿದರು. ಎನ್‌ಜಿಒ ಪರವಾಗಿ ಅಡ್ವೊಕೇಟ್ ಆರ್ ಸುಬ್ರಮಣಿಯನ್ ಮತ್ತು ಅಡ್ವೊಕೇಟ್ ಆನ್ ರೆಕಾರ್ಡ್ ಶ್ರುತಿ ಅಗರ್‌ವಾಲ್‌ ವಾದ ಮಂಡಿಸಿದ್ದರು.

ಈ ವರ್ಷದ ಫೆಬ್ರವರಿ 12 ರಂದು, ಪ್ರೇಮ್‌ಜಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಒಂದೇ ಬಗೆಯ ವಿವಿಧ ಅರ್ಜಿಗಳನ್ನು ಸಲ್ಲಿಸಿದ್ದಕ್ಕಾಗಿ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ಎನ್‌ಜಿಒಗೆ ₹ 10 ಲಕ್ಷ ದಂಡ ವಿಧಿಸಿತ್ತು.