ಅಜೀಂ ಪ್ರೇಮ್‌ಜಿ, ಇತರರ ವಿರುದ್ಧ ಮನವಿ ಸಲ್ಲಿಕೆ: ಸರ್ಕಾರೇತರ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್‌

“ಅರ್ಜಿದಾರರು ಒಂದೇ ವ್ಯಾಜ್ಯ ಕಾರಣ ವಿಚಾರವಾಗಿ ವಿವಿಧ ಪೀಠಗಳನ್ನು ಎಡತಾಕಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
Karnataka High Court, Azim Premji
Karnataka High Court, Azim Premji
Published on

ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಮತ್ತು ಇತರರ ವಿರುದ್ಧ ಒಂದೇ ವ್ಯಾಜ್ಯ ಕಾರಣವಿರಿಸಿಕೊಂಡು ಪ್ರಕರಣ ದಾಖಲಿಸುವುದಕ್ಕೆ ಕೋರಿ ಹಲವು ಮನವಿಗಳನ್ನು ಸಲ್ಲಿಸಿದ್ದ ಸರ್ಕಾರೇತರ ಸಂಸ್ಥೆಯಾದ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಫರೆನ್ಸಿಗೆ (ಪಾರದರ್ಶಕತೆಗೆ ಎಚ್ಚರವಾಗಿರುವ ಭಾರತ) ಈಚೆಗೆ ಕರ್ನಾಟಕ ಹೈಕೋರ್ಟ್‌ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಅಜೀಂ ಪ್ರೇಮ್‌ಜಿ ನಡೆಸುತ್ತಿರುವ ಸಂಸ್ಥೆಗಳಲ್ಲಿ ಹಣಕಾಸು ಅಕ್ರಮ ನಡೆದಿದ್ದು, ಅವರ ವಿರುದ್ಧ ಕ್ರಿಮಿನಲ್‌ ಕ್ರಮಕೈಗೊಳ್ಳಬೇಕು ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ಹಲವು ರಿಟ್‌ ಮನವಿಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಅವರು ಪರಿಗಣಿಸಿದ್ದಾರೆ.

“ಅರ್ಜಿದಾರರು ಒಂದೇ ವ್ಯಾಜ್ಯ ಕಾರಣ ವಿಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಉದ್ಯಮಿ ವಿಚಾರದಲ್ಲಿ ಹೇಳಿರುವಂತೆ ಎಲ್ಲಾ ರಿಟ್‌ ಮನವಿಗಳಲ್ಲಿ ಅದೇ ವಿಚಾರ ಪುನರಾವರ್ತನೆಯಾಗಿರುವುದು ಕ್ರಿಮಿನಲ್‌ ನಿಂದನೆಗೆ ಸಮನಾಗಿದೆ… ಈ ಹಿನ್ನೆಲೆಯಲ್ಲಿ ಸದರಿ ರಿಟ್‌ ಮನವಿಯು ಅರ್ಹತೆಯಿಂದ ಕೂಡಿಲ್ಲವಾಗಿದ್ದು, ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರ್ಬಳಕೆಯಾಗಿದೆ. ಈ ಹಿಂದೆಯೇ ಅರ್ಜಿದಾರರಿಗೆ ಎಚ್ಚರಿಕೆ ನೀಡಿದ್ದರೂ ರಿಟ್‌ ಮನವಿಯು ಅದ್ವಿತೀಯ ಎಂಬಂತೆ ಅದರ ಪರ ವಾದಿಸಲು ಮುಂದಾಗುವ ಮೂಲಕ ಅಂತಹ ಕ್ಷುಲ್ಲಕ ಪ್ರಕರಣಗಳಿಗೆ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸುವುದು ಅವಶ್ಯವಾಗಿದೆ,” ಎಂದು ನ್ಯಾಯಾಲಯ ಹೇಳಿದೆ.

ಹಲವು ಮನವಿಗಳನ್ನು ವಜಾಗೊಳಿಸಿದ್ದರೂ ಅರ್ಜಿದಾರರು ಅದೇ ಆರೋಪಗಳನ್ನು ಒಳಗೊಂಡ ಹೊಸ ರಿಟ್‌ ಮನವಿಯನ್ನು ಸಲ್ಲಿಸಿದ್ದಾರೆ ಎಂದು ಪೀಠ ಹೇಳಿದೆ. “ದೂರಿನ ದಿನಾಂಕ ಬದಲಾಗಿದ್ದರೂ ವಿಷಯ ಅದೇ ಆಗಿದ್ದು ವಿದ್ಯಾ ಇನ್ವೆಸ್ಟ್‌ಮೆಂಟ್‌ ಅಂಡ್‌ ಟ್ರೇಡಿಂಗ್‌ ಕಂಪೆನಿ ಪ್ರೈ. ಲಿ., ರೀಗಲ್‌ ಇನ್ವೆಸ್ಟ್‌ಮೆಂಟ್‌ ಅಂಡ್‌ ಟ್ರೇಡಿಂಗ್‌ ಕಂಪೆನಿ ಪ್ರೈ.ಲಿ ಮತ್ತು ನೇಪಿಯನ್‌ ಟ್ರೇಡಿಂಗ್‌ ಅಂಡ್‌ ಇನ್ವೆಸ್ಟ್‌ಮೆಂಟ್‌ ಕಂಪೆನಿ ಪ್ರೈ. ಲಿ. ಈ ಮೂರು ಕಂಪೆನಿಗಳಿಗೆ ಸೇರಿದಂತೆ ಹಣ ವರ್ಗಾವಣೆ ವಿಚಾರವೇ ಅದರಲ್ಲಿದೆ” ಎಂದು ನ್ಯಾಯಾಲಯ ಹೇಳಿದೆ.

ಹಶಮ್‌ ಇನ್ವೆಸ್ಟ್‌ಮೆಂಟ್‌ ಮತ್ತು ಟ್ರೇಡಿಂಗ್‌ ಕಂಪೆನಿ (ಅಜೀಮ್ ಪ್ರೇಮ್‌ಜಿ ಟ್ರಸ್ಟ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ) ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಎಸ್‌ ಗಣೇಶ್‌ ಮತ್ತು ಸಿ ವಿ ನಾಗೇಶ್‌ ಅವರು ಮನವಿ ನಿರ್ವಹಣೆಯ ಪ್ರಾಥಮಿಕ ತಕರಾರು ಎತ್ತಿದರು. ಪ್ರೇಮ್‌ಜಿ ಮತ್ತು ಅವರ ಸಹವರ್ತಿಗಳು ನಡೆಸಿದ್ದಾರೆ ಎನ್ನಲಾದ ಅಪರಾಧಗಳನ್ನು ತನಿಖೆ ನಡೆಸಿ, ಕಾನೂನು ಕ್ರಮಕೈಗೊಳ್ಳುವ ಸಂಬಂಧ ಬಹು ಶಿಸ್ತೀಯ ತನಿಖಾ ತಂಡ ರಚಿಸುವಂತೆ ಕೋರಿ ಹಿಂದೆ ಅರ್ಜಿದಾರರು ಪಿಐಎಲ್‌ ಸಲ್ಲಿಸಿದ್ದರು ಎಂದು ವಾದಿಸಿದರು.

ಬಳಿಕ, ಹಲವು ಶಾಸನಬದ್ಧ ಪ್ರಾಧಿಕಾರಗಳ ವಿರುದ್ಧ ಐದು ಪ್ರತ್ಯೇಕ ರಿಟ್‌ ಮನವಿಗಳನ್ನು ಸಲ್ಲಿಸಲಾಗಿದ್ದು, ಈ ಪೈಕಿ ಮೂರು ರಿಟ್‌ ಮನವಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ. 2018ರಲ್ಲಿ ಪರವಾನಗಿ ಹಿಂಪಡೆದಿದ್ದ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ವಿರುದ್ಧ ನಿರ್ದೇಶನ ನೀಡುವಂತೆ ಅರ್ಜಿದಾರರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Also Read
ನಿಧಿ ದುರುಪಯೋಗ: ಅಜೀಂ ಪ್ರೇಮ್‌ಜಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಕ್ರಮ ಕೋರಿದ್ದ ಮನವಿ ವಜಾಗೊಳಿಸಿದ ಹೈಕೋರ್ಟ್‌

ಪಿಐಎಲ್‌ನಲ್ಲಿ ಪರಿಹಾರ ಕೋರಿದ್ದು, ಈ ರಿಟ್‌ ಮನವಿಯು ಒಂದೇ ಅಲ್ಲ ಎನ್ನುವುದರ ಜೊತೆಗೆ ಪ್ರತಿವಾದಿಗಳು ಎತ್ತಿದ ಪ್ರಾಥಮಿಕ ತಕರಾರಿಗೆ ಅರ್ಜಿದಾರರ ಪರ ವಕೀಲ ಆರ್‌ ಸುಬ್ರಮಣಿಯನ್‌ ವಿರೋಧ ವ್ಯಕ್ತಪಡಿಸಿದ್ದರು. ಒಂದೇ ವ್ಯಾಜ್ಯ ಕಾರಣದ ಕುರಿತು ವಿಭಿನ್ನ ಪರಿಹಾರವನ್ನು ಮನವಿದಾರರು ಕೋರಿದರೆ ಹಿಂದಿನ ಮನವಿಯಲ್ಲಿನ ತೀರ್ಮಾನದ ಸಿದ್ಧಾಂತ ಅನ್ವಯಿಸುವುದಿಲ್ಲ ಎಂದು ಅವರು ವಾದಿಸಿದ್ದರು.

ವಾದ ಆಲಿಸಿದ ಪೀಠವು, ಅಜೀಂ ಪ್ರೇಮ್‌ಜಿ ಮತ್ತು ಇತರರ ವಿರುದ್ಧ ಅರ್ಜಿದಾರರು ಸಲ್ಲಿಸಿದ್ದ ಎರಡು ಮನವಿಗಳನ್ನು ಇದೇ ಪೀಠವು ವಜಾಗೊಳಿಸಿದೆ. ಹೈಕೋರ್ಟ್‌ನ ಸಮನ್ವಯ ಪೀಠವು ಅದೇ ಕಾರಣವನ್ನು ನೀಡಿ ಮತ್ತೊಂದು ಮನವಿಯನ್ನು ವಜಾಗೊಳಿಸಿದೆ. ಹೀಗಾಗಿ ನ್ಯಾಯಾಲಯವು ಮನವಿದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಅದನ್ನು ನಾಲ್ಕು ವಾರಗಳ ಒಳಗೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪಾವತಿಸುವಂತೆ ಸೂಚಿಸಿದೆ.

Kannada Bar & Bench
kannada.barandbench.com