ನ್ಯಾಯಾಲಯದ ಘನತೆಗೆ ಆದ ಅವಮಾನ ಅಥವಾ ಘಾಸಿ ಸರಿಪಡಿಸಲು ನ್ಯಾಯಾಂಗ ನಿಂದನೆ ಅಧಿಕಾರ ಬಳಸದೆ ನ್ಯಾಯದ ಆಡಳಿತಕ್ಕೆ ಧಕ್ಕೆಯಾಗಬಾರದ ರೀತಿಯಲ್ಲಿ ಜನರ ಹಕ್ಕನ್ನು ರಕ್ಷಿಸಲು ಮತ್ತು ಎತ್ತಿಹಿಡಿಯಲು ಉಪಯೋಗಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೀರ್ಪು ನೀಡಿದೆ. (ಕಾಶಿನಾಥ್ ಶೆಟ್ಟಿ ಮತ್ತು ಡೇವಿಡ್ ಕ್ಲೆವರ್ ನಡುವಣ ಪ್ರಕರಣ).
ಅಂತೆಯೇ ಗೋವಾದಲ್ಲಿ ಜಿಲ್ಲಾ ನ್ಯಾಯಾಂಗದ ಸದಸ್ಯರ ವಿರುದ್ಧ ಯೂಟ್ಯೂಬ್ ಮತ್ತು ವಾಟ್ಸಾಪ್‌ನಲ್ಲಿ ಅವಹೇಳನಕಾರಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ನಿರಾಕರಿಸಿದ ಪೀಠ ನಮ್ಮ ಸಂಸ್ಥೆ (ನ್ಯಾಯಾಂಗ) ಇಂತಹ ಕ್ಷುಲ್ಲಕ ಆರೋಪಗಳನ್ನು ತಾಳಿಕೊಳ್ಳುವಂತಹ ದೊಡ್ಡ ಭುಜಗಳನ್ನು ಪಡೆದಿದೆ ಎಂದಿತು.
“ನ್ಯಾಯದ ಆಡಳಿತದಲ್ಲಿ ಸಮುದಾಯ ಹಿತಾಸಕ್ತಿಯ ಜವಾಬ್ದಾರಿ ನ್ಯಾಯಾಲಯದ್ದಾಗಿದ್ದು ನ್ಯಾಯಾಂಗ ನಿಂದನೆಗಾಗಿ ಶಿಕ್ಷಿಸುವ ಅಧಿಕಾರವನ್ನು ಅದು ಪಡೆದಿದೆ. ಈ ಅಧಿಕಾರವನ್ನು ಆ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು, ನ್ಯಾಯಾಲಯದ ಘನತೆಗೆ ಆದ ಅವಮಾನ ಅಥವಾ ಘಾಸಿ ಸರಿಪಡಿಸಲು ಅಲ್ಲ. ಆದರೆ ನ್ಯಾಯದ ಆಡಳಿತ ವಿಕೃತ, ಪೂರ್ವಾಗ್ರಹಪೀಡಿತ ಅಥವಾ ಹಸ್ತಕ್ಷೇಪಕ್ಕೊಳಗಾಗದ ರೀತಿಯಲ್ಲಿ ಜನರ ಹಕ್ಕನ್ನು ರಕ್ಷಿಸಲು ಮತ್ತು ಎತ್ತಿ ಹಿಡಿಯಲು ಈ ಅಧಿಕಾರವನ್ನು ಮಿತವಾಗಿ ಬಳಸಬೇಕು” ಎಂದು ನ್ಯಾಯಾಲಯ ಹೇಳಿತು.
ನ್ಯಾಯಾಲಯ ಅಂತಹ ವಿಚಾರಗಳನ್ನು ತಿರಸ್ಕರಿಸಬೇಕೇ ವಿನಾ ನ್ಯಾಯಾಂಗ ನಿಂದನೆಗೆ ಮಣೆ ಹಾಕಲು ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಆರ್.ವಿ.ಮೆಟ್ರೋಪಾಲಿಟನ್ ಪೊಲೀಸ್ ಕಮಿಷನರ್ ಪ್ರಕರಣದಲ್ಲಿ ಲಾರ್ಡ್ ಡೆನ್ನಿಂಗ್ ನೀಡಿದ ತೀರ್ಪನ್ನು ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಲಂಬಿಸಿದೆ. ಆ ಪ್ರಕರಣದಲ್ಲಿ ವಕೀಲರು ಬರೆದ ಕಟುವಾದ ಲೇಖನವೊಂದರ ವಿರುದ್ಧ ಕ್ರಮ ಕೈಗೊಳ್ಳಲು ಡೆನ್ನಿಂಗ್ ನಿರಾಕರಿಸಿದ್ದರು.
ಪ್ರತಿವಾದಿ ನಂ .1 ಅಪ್‌ಲೋಡ್ ಮಾಡಿದ್ದರು ಎನ್ನಲಾದ ಅಂತಹ ವಿಚಾರವನ್ನು ತಿರಸ್ಕಾರದ ನೆಲೆಯಲ್ಲಿ ನೋಡಬೇಕೇ ವಿನಾ ನ್ಯಾಯಾಂಗ ನಿಂದನೆಯ ನೆಲೆಯಲ್ಲಿ ಅಲ್ಲ. ಮೇಲ್ನೋಟಕ್ಕೆ ನಂಬಲರ್ಹ ವಿಚಾರವಿದ್ದರೂ ಪ್ರತಿವಾದಿ ನಂ .1 ಯಾವುದೇ ನಿರ್ದಿಷ್ಟ ನಿದರ್ಶನಗಳನ್ನು ಉಲ್ಲೇಖಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಥವಾ ಯಾವುದೇ ದೂರುಗಳನ್ನು ನೀಡಲು ತೊಂದರೆಗೊಳಗಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಗೋವಾದ ಕೆಲವು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಟುವಾದ ಆರೋಪಗಳನ್ನು ಒಳಗೊಂಡ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಡೇವಿಡ್ ಕ್ಲೆವರ್ ಎಂಬಾತನ ವಿರುದ್ಧ ಕಾಶಿನಾಥ್ ಶೆಟ್ಟಿ ಎಂಬುವವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
ಕ್ಲೆವರ್ ಅಪ್‌ಲೋಡ್ ಮಾಡಿದ ವಿಚಾರ ಸಾಕಷ್ಟು "ಆಘಾತಕಾರಿ ಮತ್ತು ಸ್ಥಾಪಿತವಾಗಿದ್ದರೆ ಕ್ರಿಮಿನಲ್ ಅವಹೇಳನವಾಗಬಹುದು" ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದರೂ, ನ್ಯಾಯಾಂಗ ಸಂಸ್ಥೆಗಳ ಘನತೆ ಮತ್ತು ಅಧಿಕಾರವು ಕ್ಲೆವರ್ ರೀತಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಮೇಲೆ ಅವಲಂಬಿತವಾಗಿಲ್ಲ ಅಥವಾ ಅಂತಹ ದಿಕ್ಕೆಟ್ಟ ನಿರ್ಲಕ್ಷ್ಯ ಇಲ್ಲವೇ ಬೇಜವಾಬ್ದಾರಿಯುತ ವಿಚಾರದಿಂದ ಸಂಸ್ಥೆಯ ಮತ್ತದರ ಅಧಿಕಾರಿಗಳ ಘನತೆಗೆ ಕುಂದುಂಟಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವನ್ನು ಮತ್ತಷ್ಟು ಮುಂದುವರೆಸುವುದರಿಂದ ಗೋವಾದ ನ್ಯಾಯದ ಆಡಳಿತಕ್ಕೆ ಸಂಬಂಧಿಸಿದ ಕೆಲ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಬದಲಾಗಿ ಕಂಟೆಂಟ್ ಅಪ್‌ಲೋಡ್ ಮಾಡಿದವರ ಪ್ರಚಾರದ ಹುಚ್ಚಿಗೆ ನೀರೆರೆಯಲು ಸಹಾಯ ಮಾಡಲು ಸೀಮಿತವಾಗುತ್ತದೆ ಎಂದ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತು.