ಕಲಾಪ ಬಹಿಷ್ಕಾರ: ಶ್ರೀರಂಗಪಟ್ಟಣ ವಕೀಲರ ಸಂಘದ ಪದಾಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್‌
Lawyers

ಕಲಾಪ ಬಹಿಷ್ಕಾರ: ಶ್ರೀರಂಗಪಟ್ಟಣ ವಕೀಲರ ಸಂಘದ ಪದಾಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್‌

ಬೇಷರತ್‌ ಕ್ಷಮೆ ಕೋರಿ, ಭವಿಷ್ಯದಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕಾರದಲ್ಲಿ ಭಾಗವಹಿಸುವುದಿಲ್ಲ ಎಂದು ಶ್ರೀರಂಗಪಟ್ಟಣ ವಕೀಲರ ಸಂಘದ ಅಧ್ಯಕ್ಷ ಸಿ ಎ ಕುಮಾರ್‌ ಅಫಿಡವಿಟ್‌ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಪೀಠವು ಪ್ರಕರಣ ವಿಲೇವಾರಿ ಮಾಡಿದೆ.

ನ್ಯಾಯಾಲದಯ ಕಲಾಪ ಬಹಿಷ್ಕರಿಸಿದ್ದಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ವಕೀಲರ ಸಂಘದ ಪದಾಧಿಕಾರಿಗಳು ಬೇಷರತ್‌ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ನೇತೃತ್ವದ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಮನವಿಯನ್ನು ವಿಲೇವಾರಿ ಮಾಡಿತು.

“ಶ್ರೀರಂಗಪಟ್ಟಣ ವಕೀಲರ ಸಂಘದ ಅಧ್ಯಕ್ಷ ಸಿ ಎ ಕುಮಾರ್‌ ಸೇರಿದಂತೆ ಒಂಭತ್ತು ಆರೋಪಿಗಳು ಬೇಷರತ್‌ ಆಗಿ ನ್ಯಾಯಾಲಯದ ಕ್ಷಮೆ ಕೋರಿ ಅಫಿಡವಿಟ್‌ ಸಲ್ಲಿಸಿದ್ದಾರೆ. ಅಲ್ಲದೇ, ನಿವೃತ್ತ ಕ್ಯಾಪ್ಟನ್‌ ಹರೀಶ್‌ ಉಪ್ಪಲ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು ಪ್ರಕರಣ ಹಾಗೂ ಕೃಷ್ಣಕಾಂತ್‌ ವರ್ಸಸ್‌ ಮಧ್ಯಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧವಾಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಭವಿಷ್ಯದಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕಾರ ಚಟುವಟಿಕೆಗಲ್ಲಿ ಭಾಗವಹಿಸುವುದಿಲ್ಲ ಎಂದು ಅಫಿಡವಿಟ್‌ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಮನವಿ ವಿಲೇವಾರಿ ಮಾಡಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

“ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲಾ ನ್ಯಾಯಾಲಯಗಳಿಗೂ ಸಮಸ್ಯೆಯಾಗಿದ್ದು, ಇದರಿಂದ ಕಕ್ಷಿದಾರರ ಜೊತೆಗೆ ವಕೀಲರ ಸಂಘದ ಸದಸ್ಯರಿಗೂ ತೊಂದರೆಗಳಾಗಿವೆ. ಪರಿಸ್ಥಿತಿಯು ನಿಧಾನಕ್ಕೆ ಸಹಜಸ್ಥಿತಿಗೆ ಮರಳುತ್ತಿದ್ದು, ಧರಣಿ/ಬಹಿಷ್ಕಾರಕ್ಕೆ ವಕೀಲರ ಸಂಘಗಳು ಬೆಂಬಲ ನೀಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಹಿಂದಿನ ಆದೇಶದಲ್ಲಿ ತಿಳಿಸಿತ್ತು.

Also Read
ಕಲಾಪದಿಂದ ದೂರ ಉಳಿದ ಏಳು ವಕೀಲರ ಸಂಘಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನಾ ಕ್ರಮಕ್ಕೆ ಮುಂದಾದ ಹೈಕೋರ್ಟ್‌

“ನ್ಯಾಯಾಲಯದ ಕಲಾಪದಿಂದ ಹಿಂದೆ ಸರಿಯುವುದಕ್ಕೆ ಬೆಂಬಲ ನೀಡಿದ ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಾವು ನಿರ್ದೇಶಿಸುತ್ತಿದ್ದೇವೆ. ಸ್ವಯಂಪ್ರೇರಿತ ಕ್ರಮ ಜಾರಿಗೆ ಪ್ರತ್ಯೇಕ ನ್ಯಾಯಾಂಗ ನಿಂದನೆ ಮನವಿ ಸಲ್ಲಿಸಬೇಕು, ಇದರಲ್ಲಿ ವಕೀಲರ ಸಂಘಗಳ ಪದಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಬೇಕು. ರಿಜಿಸ್ಟ್ರಾರ್‌ ಜನರಲ್‌ ಅವರು ಈ ಆದೇಶವನ್ನು ಪರಿಗಣಿಸಿ, ಅಗತ್ಯ ಕ್ರಮಕೈಗೊಳ್ಳಬೇಕು” ಎಂದು ಪೀಠ ಆದೇಶಿಸಿತ್ತು.

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ ಆರ್‌ ಪೇಟೆ, ಪಾಂಡವಪುರ ಮತ್ತು ದಾವಣಗೆರೆ ಸೇರಿದಂತೆ ಏಳು ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಪೀಠವು ಆದೇಶಿಸಿತ್ತು.

Related Stories

No stories found.