ಟೆಲಿವಿಷನ್, ರೇಡಿಯೋ ಮುಂತಾದ ಸಾಂಪ್ರದಾಯಿಕ ವೇದಿಕೆಗಳಲ್ಲಿ ಮಾತ್ರ ಹಕ್ಕುಸ್ವಾಮ್ಯ ಪಡೆದ ಹಾಡುಗಳನ್ನು ಪ್ರಸಾರ ಮಾಡಲು ಕಡ್ಡಾಯ ಪರವಾನಗಿ ಪಡೆಯಬಹುದೇ ವಿನಾ ಅಂತರ್ಜಾಲದ ಮೂಲಕ ಪ್ರಸರಣ ಮಾಡುವ ವೇದಿಕೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ವಿಂಕ್ ಲಿಮಿಟೆಡ್ ಮತ್ತಿತರರು ಹಾಗೂ ಟಿಪ್ಸ್ ಇಂಡಸ್ಟ್ರೀಸ್ ನಡುವಣ ಪ್ರಕರಣ].
ಅರ್ಥಾತ್, ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 31 ಡಿ ಅಡಿಯಲ್ಲಿ ಕಡ್ಡಾಯ ಶಾಸನಬದ್ಧ ಪರವಾನಗಿಗಳ ನಿಬಂಧನೆಯು ರೇಡಿಯೋ, ದೂರದರ್ಶನ ಮತ್ತು ಸಂಗೀತ ಪ್ರದರ್ಶನಗಳಂತಹ ಸಾಂಪ್ರದಾಯಿಕ ಅಂತರ್ಜಾಲವಲ್ಲದ ಪ್ರಸಾರ ಸೇವೆಗಳಿಗೆ ಮಾತ್ರ ಸೀಮಿತವಾಗಿದ್ದು ಅಂತರ್ಜಾಲ ಆಧರಿತ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಅದು ವಿವರಿಸಿದೆ.
ತೀರ್ಪನ್ನು ಅಕ್ಟೋಬರ್ 20, 2022ರಂದು ನೀಡಲಾಗಿದ್ದು, ಸೆಪ್ಟೆಂಬರ್ 29, 2023ರಂದು ಹೈಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಕಾಯಿದೆಯ ಸೆಕ್ಷನ್ 31ಡಿ (ಕಡ್ಡಾಯ ಪರವಾನಗಿ) ಅಡಿಯಲ್ಲಿ ಶಾಸನಬದ್ಧ ಪ್ರಸಾರ ಹಕ್ಕುಗಳ ರಕ್ಷೆ ಪಡೆದು ಏರ್‌ಟೆಲ್ ಒಡೆತನದ ಡಿಜಿಟಲ್ ಸಂಗೀತ ಅಪ್ಲಿಕೇಶನ್ ವಿಂಕ್ ಲಿಮಿಟೆಡ್ ಟಿಪ್ಸ್ ಇಂಡಸ್ಟ್ರೀಸ್ ಒಡೆತನದ ಸಂಗೀತವನ್ನು ಅದರ ಒಪ್ಪಿಗೆಯಿಲ್ಲದೆ ಸಂಗ್ರಹಿಸುವಂತಿಲ್ಲ ಅಥವಾ ಬಳಸುವಂತಿಲ್ಲ ಎಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ರೇಡಿಯೋ ಮತ್ತು ದೂರದರ್ಶನದಂತಹ ಸೇವೆಗಳು ವಸ್ತು ವಿಷಯವನ್ನು ಒದಗಿಸುತ್ತವೆ. ಅಲ್ಲಿ ಬಳಕೆದಾರರು ವಸ್ತುವಿಷಯವನ್ನು ಆಲಿಸಬಹುದು ಇಲ್ಲವೇ ವೀಕ್ಷಿಸಬಹುದು ಅದರ ಮೇಲೆ (ಡೌನ್‌ಲೋಡ್ ರೀತಿಯ) ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಆದರೆ ವಿಂಕ್‌ನಂತಹ ಅಂತರ್ಜಾಲ ಆಧರಿತ ಸೇವೆಗಳು ಡಿಜಿಟಲ್ ಆಡಿಯೊ ಫೈಲ್‌ಗಳನ್ನು ಖರೀದಿಸದೆ ಡೌನ್‌ಲೋಡ್ ಮಾಡಲು ಹೆಚ್ಚುವರಿ ಶುಲ್ಕವನ್ನು ಪಾವತಿಸಿದ ಬಳಕೆದಾರರಿಗೆ ಮಾತ್ರ ಅವಕಾಶ ಒದಗಿಸುತ್ತಿದ್ದವು.
ಆಡಿಯೊ ಫೈಲ್ ಅನ್ನು ಆಫ್‌ಲೈನ್‌ನಲ್ಲಿ (ಡೌನ್‌ಲೋಡ್‌ಗಳ ಮೂಲಕ) ಲಭ್ಯವಾಗುವಂತೆ ಮಾಡುವುದು ವಾಣಿಜ್ಯ ಬಾಡಿಗೆಯ ವ್ಯಾಖ್ಯಾನಕ್ಕೆ ಸರಿಹೊಂದುತ್ತದೆ. ಸೆಕ್ಷನ್ 31ಡಿ ಅಡಿಯಲ್ಲಿ ಶಾಸನಬದ್ಧ ಪರವಾನಗಿಗಳು ಯಾವುದೇ ಇಂಟರ್ನೆಟ್ ಆಧರಿತ ಸೇವೆಗೆ ಅನ್ವಯಿಸುವುದಿಲ್ಲ ಎಂದು ಪೀಠ ತೀರ್ಪಿತ್ತಿದೆ.