ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ, ಆದರೆ ಅವುಗಳನ್ನು ಆಧರಿಸಿದ ಕೃತಿಗಳಿಗೆ ಅದು ಅನ್ವಯ: ದೆಹಲಿ ಹೈಕೋರ್ಟ್

ವಿವಿಧ ಗುರುಗಳು ಮತ್ತು ಆಧ್ಯಾತ್ಮಿಕ ಗುರುಗಳು ಧಾರ್ಮಿಕ ಗ್ರಂಥಗಳನ್ನು ಅಧರಿಸಿ ಕೃತಿ ರಚಿಸಿದ್ದರೆ ಅದಕ್ಕೆ ಹಕ್ಕುಸ್ವಾಮ್ಯ ಕಾನೂನು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ ನ್ಯಾ. ಪ್ರತಿಭಾ ಎಂ ಸಿಂಗ್.
religious texts and Copyright Act
religious texts and Copyright Act

ಭಗವದ್ಗೀತೆ ಅಥವಾ ಭಾಗವತದಂತಹ ಗ್ರಂಥಗಳಿಗೆ ಸಂಬಂಧಿಸಿದಂತೆ ಯಾರೂ ಹಕ್ಕುಸ್ವಾಮ್ಯ ಪಡೆಯಲು ಸಾಧ್ಯವಿಲ್ಲ, ಆದರೆ ಇವುಗಳನ್ನು ಆಧರಿಸಿ ರಚಿಸಲಾದ ಯಾವುದೇ ವಿವರಣೆ, ರೂಪಾಂತರ ಅಥವಾ ನಾಟಕ ಕೃತಿಗಳು ಹಕ್ಕುಸ್ವಾಮ್ಯ ರಕ್ಷಣೆ ಪಡೆಯಲು ಅರ್ಹವಾಗಿರುತ್ತವೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ಭಗವದ್ಗೀತೆ ಅಥವಾ ಇತರ ಆಧ್ಯಾತ್ಮಿಕ ಪುಸ್ತಕಗಳ ಮೂಲ ಆವೃತ್ತಿ ಮುದ್ರಿಸಿದರೆ ಅದಕ್ಕೆ ಯಾವುದೇ ಆಕ್ಷೇಪಣೆ ಇರದು. ಆದರೆ ವಿವಿಧ ಗುರುಗಳು, ಆಧ್ಯಾತ್ಮಿಕ ಶಿಕ್ಷಕರು ಅವುಗಳನ್ನು ಅರ್ಥೈಸಿ ಕೃತಿಗಳನ್ನು ರಚಿಸಿದ್ದರೆ ಅದಕ್ಕೆ ಹಕ್ಕುಸ್ವಾಮ್ಯ ಕಾನೂನು ಅನ್ವಯವಾಗುತ್ತದೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ತಿಳಿಸಿದ್ದಾರೆ.

Also Read
ರಕ್ಷಣಾ ಸಚಿವಾಲಯದ ಒತ್ತಡದಿಂದ ನ್ಯಾಯಮೂರ್ತಿ ವರ್ಗ: ಕೆಲಸಕ್ಕೆ ಗೈರಾದ ಚಂಡಿಗಢದ ಸಶಸ್ತ್ರ ಪಡೆ ನ್ಯಾಯಮಂಡಳಿ ವಕೀಲರ ಸಂಘ

“(ಮೂಲ ಧಾರ್ಮಿಕ) ಕೃತಿಗಳಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಸ್ವಾಮ್ಯ ಪಡೆಯಲಾಗದು. ಆದರೆ ಅವುಗಳ ಅರ್ಥ ವಿವರಣೆ, ಸಾರಾಂಶ ಅಥವಾ ವ್ಯಾಖ್ಯಾನ ಮಾಡುವ ಕೃತಿಗಳಿಗೆ ಹಕ್ಕು ಸ್ವಾಮ್ಯ ಅನ್ವಯವಾಗುತ್ತದೆ. ಉದಾ: ರಮಾನಂದ್ ಸಾಗರ್ ಅವರ ರಾಮಾಯಣ ಅಥವಾ ಬಿ ಆರ್ ಚೋಪ್ರಾ ಅವರ ಮಹಾಭಾರತದಂತಹ ದೂರದರ್ಶನ ಧಾರಾವಾಹಿಗಳಿಗಾಗಿ ದೃಶ್ಯ ಕೃತಿಗಳನ್ನು ರಚಿಸುವುದು ಸೇರಿದಂತೆ (ಮೂಲ ಧಾರ್ಮಿಕ) ಕೃತಿಯನ್ನು ಆಧರಿಸಿದ ನಾಟಕ ಕೃತಿಗಳು, ರೂಪಾಂತರ ಕೃತಿಗಳ ಮೂಲ ಲೇಖಕರು ಕೃತಿಸ್ವಾಮ್ಯ ರಕ್ಷಣೆ ಪಡೆಯಲು ಅರ್ಹರಾಗಿರುತ್ತಾರೆ” ಎಂದು ನ್ಯಾಯಾಲಯ ನುಡಿದಿದೆ.

ಇಸ್ಕಾನ್‌ನ ಭಕ್ತಿವೇದಾಂತ ಬುಕ್ ಟ್ರಸ್ಟ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯ ವಿಚಾರಣೆ ವೇಳೆ  ನ್ಯಾಯಾಲಯ ಈ ವಿಚಾರ ತಿಳಿಸಿತು. ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್‌ (ಇಸ್ಕಾನ್‌) ಸಂಸ್ಥಾಪಕರಾದ  ಶ್ರೀಲ ಪ್ರಭುಪಾದರು ಈ ಟ್ರಸ್ಟ್‌ ಸ್ಥಾಪಸಿದ್ದರು.

Also Read
ಕೆಜಿಎಫ್‌ ಕೃತಿ ಸ್ವಾಮ್ಯ ಉಲ್ಲಂಘನೆ: ನ್ಯಾಯಾಂಗ ನಿಂದನೆ ಅರ್ಜಿ ದಾಖಲು; ರಾಹುಲ್‌ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಪ್ರಭುಪಾದ ಅವರು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಹಿಂದೂ ಧರ್ಮಗ್ರಂಥಗಳ ಸಂದೇಶ ಹರಡಿದ ಪ್ರಸಿದ್ಧ ವಿದ್ವಾಂಸ, ತತ್ವಜ್ಞಾನಿ ಹಾಗೂ ಸಾಂಸ್ಕೃತಿಕ ರಾಯಭಾರಿ. ಅವರು ಮರಣವನ್ನಪ್ಪಿದ ನಂತರ 1977 ರಲ್ಲಿ ಪ್ರಕರಣದ ಫಿರ್ಯಾದಿಯಾದ ಟ್ರಸ್ಟ್‌ಗೆ ಹಕ್ಕುಸ್ವಾಮ್ಯವನ್ನು ವರ್ಗಾಯಿಸಲಾಗಿತ್ತು. ಈ ಎಲ್ಲಾ ಕೃತಿಗಳ ಹಕ್ಕುಸ್ವಾಮ್ಯ ಲೇಖಕರದ್ದಾಗಿದೆ. ಆದರೆ ಹಕ್ಕುಸ್ವಾಮ್ಯ ಹೊಂದಿರುವ ಆ ಕೃತಿಗಳ ವಿಚಾರ ಹರಡುತ್ತಿದ್ದ ನಾಲ್ಕು ಜಾಲತಾಣಗಳು, ಐದು ಮೊಬೈಲ್‌ ಅಪ್ಲಿಕೇಷನ್‌ಗಳು ಹಾಗೂ ನಾಲ್ಕು ಇನ್‌ಸ್ಟಾಗ್ರಾಂ ಹ್ಯಾಂಡಲ್‌ಗಳ ವಿರುದ್ಧ ತಡೆಯಾಜ್ಞೆ ನೀಡಬೇಕೆಂದು ಟ್ರಸ್ಟ್‌ ಕೋರಿತ್ತು.

ವಾದವನ್ನು ಪರಿಗಣಿಸಿದ ನ್ಯಾ. ಸಿಂಗ್‌ ಟ್ರಸ್ಟ್‌ನ ಕೃತಿಗಳ ದೊಡ್ಡ ಪ್ರಮಾಣದ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಅಕ್ರಮವಾಗಿ ಪ್ರತಿಗಳ ನಕಲು ಮಾಡುವ ಕಾರ್ಯ ನಡೆದಿದೆ ಎಂದರು. ಹೀಗಾಗಿ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ಜಾರಿಗೊಳಿಸಿದ ಅವರು ಟ್ರಸ್ಟ್‌ನ ಕೃತಿಗಳ ಹಕ್ಕುಸ್ವಾಮ್ಯ ಉಲ್ಲಂಘಿಸದಂತೆ ನಿರ್ಬಂಧ ವಿಧಿಸಿದರು.

ಗೂಗಲ್ ಮತ್ತು ಮೆಟಾ ಅಪ್ಲಿಕೇಶನ್‌ಗಳು ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ಪುಟಗಳನ್ನು ತೆಗೆದುಹಾಕಬೇಕು ಎಂದು ತಿಳಿಸಿದ ಪೀಠ ಅಧಿಕಾರಿಗಳನ್ನುಉದ್ದೇಶಿಸಿ, ಜಾಲತಾಣಗಳನ್ನು ನಿರ್ಬಂಧಿಸಿ ಆದೇಶ ರವಾನಿಸಬೇಕು ಎಂದು ಸೂಚಿಸಿತು.

Related Stories

No stories found.
Kannada Bar & Bench
kannada.barandbench.com