ಸುದ್ದಿಗಳು

ಕೆಎಸ್‌ಬಿಸಿ ವಿರುದ್ಧ ಭ್ರಷ್ಟಾಚಾರ ಆರೋಪ: ವಿಚಾರಣೆ ಮುಗಿಯುವವರೆಗೆ ಮಂಜುನಾಥ್‌ ವಕೀಲಿಕೆಗೆ ಪರಿಷತ್ ತಡೆ‌

Bar & Bench

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ತಾನು ಕೈಗೊಂಡಿರುವ ವಿಚಾರಣೆ ಮುಗಿಯುವವರೆಗೆ ಸಿಡಿ ಸಂತ್ರಸ್ತೆ ಪರ ವಕೀಲರಲ್ಲಿ ಒಬ್ಬರಾದ ಆರ್‌ ಮಂಜುನಾಥ್‌ ಅವರುವಕೀಲಿಕೆ ಕೈಗೊಳ್ಳುವಂತಿಲ್ಲ ಎಂದು ಪರಿಷತ್‌ ಆದೇಶಿಸಿದೆ.

ಮಂಜುನಾಥ್‌ ವಿರುದ್ಧ ಪರಿಷತ್‌ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪರಿಷತ್‌ ಮುಂದಾಗಿದ್ದು ಇನ್ನು ಹತ್ತು ದಿನದೊಳಗೆ ತಾನು ನೀಡಿರುವ ನೋಟಿಸ್‌ಗೆ ಉತ್ತರಿಸುವಂತೆ ತಿಳಿಸಿದೆ. ಅಲ್ಲದೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರು ವಕೀಲಿಕೆ ವೃತ್ತಿ ಮುಂದುವರೆಸುವುದನ್ನು ತಡೆಹಿಡಿಯಲಾಗಿದೆ.

ವಕೀಲರ ಕಲ್ಯಾಣ ನಿಧಿಯ ಸ್ಟಾಂಪ್‌ ಶುಲ್ಕವನ್ನು ಪರಿಷತ್ತಿನ ಸದಸ್ಯರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಂಜುನಾಥ್‌ ಅವರು ಫೇಸ್‌ಬುಕ್‌, ವಾಟ್ಸಾಪ್‌ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಪರಿಷತ್ತಿನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ. ಕುಖ್ಯಾತ ತೆಲಗಿ ನಕಲಿ ಛಾಪಾ ಕಾಗದ‌ ಹಗರಣಕ್ಕೆ ಹೋಲಿಸಿ ಅವರು ಪರಿಷತ್‌ ಸದಸ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಅವರ ಆರೋಪ ಆಧಾರರಹಿತ ಮತ್ತು ಅವಹೇಳನಕಾರಿಯಾಗಿದ್ದು ವಕೀಲ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಅವರು ಮಾಡಿರುವ ಆರೋಪ ಉದಾತ್ತ ವೃತ್ತಿಯ ಹಿತಾಸಕ್ತಿಗೆ ಧಕ್ಕೆ ತರುವಂತಿದೆ ಎಂದು ಕೆಎಸ್‌ಬಿಸಿ ಪ್ರಕಟಣೆ ತಿಳಿಸಿದೆ.

ವಕೀಲ ಕೆ ಎನ್‌ ಜಗದೀಶ್‌ ಕುಮಾರ್‌ಗೂ ಸಂಕಷ್ಟ?

ಸಿಡಿ ಸಂತ್ರಸ್ತೆ ಪರ ವಾದ ಮಂಡಿಸುತ್ತಿರುವ ಮತ್ತೊಬ್ಬ ವಕೀಲ ಕೆ ಎನ್‌ ಜಗದೀಶ್‌ ಕುಮಾರ್‌ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳುವಂತೆ ದೆಹಲಿ ವಕೀಲರ ಸಂಘಕ್ಕೆ ಪತ್ರ ಬರೆಯಲು ಪರಿಷತ್‌ ಮುಂದಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅವರ ಸದಸ್ಯತ್ವ ಕುರಿತು ಮಾಹಿತಿ ಪಡೆಯಲು ಮತ್ತು ಶಿಸ್ತುಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಮನವಿ ಮಾಡುವುದಾಗಿ ಪರಿಷತ್‌ ಅಧ್ಯಕ್ಷ ಎಲ್‌ ಶ್ರೀನಿವಾಸ್‌ ಬಾಬು ಹೇಳಿದ್ದಾರೆ ಎನ್ನಲಾಗಿದೆ. ದೆಹಲಿ ವಕೀಲರ ಸಂಘದಲ್ಲಿ ನೋಂದಣಿ ಮಾಡಿಕೊಂಡಿರುವುದಾಗಿ ಕೆ ಎನ್‌ ಜಗದೀಶ್‌ ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತಾಪಿಸಿ ಸಂಬಂಧಿಸಿದ ದಾಖಲೆಯನ್ನು ಪ್ರಕಟಿಸಿದ್ದರು.