Kapil Sibal and Supreme Court
Kapil Sibal and Supreme Court  Facebook
ಸುದ್ದಿಗಳು

ಚುನಾವಣಾ ಪ್ರಕರಣ ವಿಚಾರಣೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ತಾರತಮ್ಯ: ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್ ಬಣದ ಅಳಲು

Bar & Bench

ಕೆಲ ರಾಜ್ಯಗಳಿಗೆ ಸಂಬಂಧಿಸಿದ ಚುನಾವಣಾ ಪ್ರಕರಣಗಳನ್ನು ನಿರ್ಧರಿಸಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವ ನ್ಯಾಯಾಲಯಗಳು ಉಳಿದ ರಾಜ್ಯಗಳ ಕೆಲ ಪ್ರಕರಣಗಳನ್ನು ಪ್ರತಿನಿತ್ಯ ವಿಚಾರಣೆ ನಡೆಸುತ್ತವೆ ಎಂದು 2022ರ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ನಡೆದ ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಆಕ್ಷೇಪಿಸಿದರು [ಸುಭಾಷ್ ದೇಸಾಯಿ ಮತ್ತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರದ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ವಾದ ಮಂಡಿಸಲಾಯಿತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿರುವ ಸಾಂವಿಧಾನಿಕ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಪರವಾಗಿ ಹಾಜರಾದ ಸಿಬಲ್‌ ಕೆಲವೊಮ್ಮೆ ರಾಜಸ್ಥಾನದಲ್ಲಿ ಏನಾಗುತ್ತಿದೆ ಎಂಬುದನ್ನು ಚರ್ಚಿಸಲು ನ್ಯಾಯಾಲಯಗಳು ನಿತ್ಯ ವಿಚಾರಣೆ ನಡೆಸುತ್ತವೆ. ಆದರೆ ಗೋವಾ ಮತ್ತಿತರ ವಿಧಾನಸಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ಧರಿಸಲು ವರ್ಷಗಟ್ಟಲೆ ತೆಗೆದುಕೊಳ್ಳುತ್ತವೆ ಎಂದು ದೂರಿದರು.

ಶಾಸಕರೊಬ್ಬರ ಅನರ್ಹತೆಯನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಿದ ಮಧ್ಯಂತರದ ಅವಧಿಯಲ್ಲಿ ಏನಾಗುತ್ತದೆ ಎಂದು ನ್ಯಾ. ಎಂ ಆರ್ ಶಾ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನೀಡಲಾಯಿತು.

ತಕ್ಷಣ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ನಿರೀಕ್ಷಿಸಲಾಗುತ್ತಾದರೂ ದುರದೃಷ್ಟವಶಾತ್‌ ನ್ಯಾಯಾಲಯಗಳು ಹಾಗೆ ಮಾಡುವುದಿಲ್ಲ ಎಂದು ಕಪಿಲ್‌ ವಿವರಿಸಿದರು. ನಿನ್ನೆಯ ವಿಚಾರಣೆ ವೇಳೆ ಅವರು ಶಾಸಕರ ಯಾವುದೇ ಅನರ್ಹತೆ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರಬೇಕು. ಯಾರನ್ನಾದರೂ ಸುಖಾಸುಮ್ಮನೆ ಅನರ್ಹಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿದಾಗ ಅಂತಹ ವ್ಯಕ್ತಿ ಮತ್ತೆ ಸದನಕ್ಕೆ ಮರಳುವಂತಾಗಬೇಕು ಎಂದರು.

ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕೇ ಹಾಗೂ ಶಿವಸೇನೆಯ ಬಿಲ್ಲು- ಬಾಣದ ಗುರುತಿಗೆ ಸಂಬಂಧಿಸಿದಂತೆ ಯಾವ ಬಣಕ್ಕೆ ಹಕ್ಕಿದೆ ಎಂಬ ವಿಷಯದ ಕುರಿತು ಮಂಗಳವಾರದಿಂದ ಸುಪ್ರೀಂ ಕೋರ್ಟ್‌ ವಿಚಾರಣೆ ಆರಂಭಿಸಿದೆ.

ಅನರ್ಹತೆಗೊಳಿಸಲು ಉಪ ಸ್ಪೀಕರ್‌ಗೆ ಇರುವ ಅಧಿಕಾರಕ್ಕೆ ಸಂಬಂಧಿಸಿದಂತೆ ನಬಮ್ ರೆಬಿಯಾ ಮತ್ತು ಡೆಪ್ಯೂಟಿ ಸ್ಪೀಕರ್‌ ನಡುವಣ ಪ್ರಕರಣದಲ್ಲಿನ ತೀರ್ಪನ್ನು ಕೂಡ ಪೀಠ ಪರಿಶೀಲಿಸುತ್ತದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠವು ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.