ಶಿವಸೇನಾ ಪಕ್ಷದ ಹೆಸರು ಮತ್ತು ಅದರ ಚುನಾವಣಾ ಗುರುತಾದ ಬಿಲ್ಲು ಬಾಣದ ಚಿಹ್ನೆಯನ್ನು ನಿರ್ಬಂಧಗೊಳಿಸಿರುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರ ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಪ್ರಕರಣದ ಆದೇಶ ಕಾಯ್ದಿರಿಸುವ ಮುನ್ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಇಸಿಐ ನಿರ್ಧಾರ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಉದ್ಧವ್ ಅವರು ಸಲ್ಲಿಸಿದ್ದ ಮೇಲ್ಮನವಿ ಆಲಿಸಿತು.
ಶಿವಸೇನೆಯ ಪಕ್ಷದ ಹೆಸರು ಮತ್ತು ಅದರ ಚಿಹ್ನೆಯ ಮೇಲೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಹಕ್ಕು ಸಾಧಿಸಿದ್ದವು. ಆದರೆ ಅಕ್ಟೋಬರ್ 8ರಂದು ಮಧ್ಯಂತರ ಆದೇಶ ಜಾರಿಗೊಳಸಿದ ಇಸಿಐ ಎರಡು ಪ್ರತಿಸ್ಪರ್ಧಿ ಬಣಗಳಲ್ಲಿ ಯಾವುದು ಚುನಾವಣಾ ಹೆಸರು ಮತ್ತು ಚಿಹ್ನೆ ಬಳಸಲು ಅರ್ಹ ಎಂಬುದನ್ನು ನಿರ್ಧರಿಸುವವರೆಗೆ ಎರಡೂ ಕಡೆಯವರು ಅವುಗಳನ್ನು ಬಳಸದಂತೆ ನಿರ್ಬಂಧಿಸಿತ್ತು.
ಕಳೆದ ತಿಂಗಳು ಉದ್ಧವ್ ಅವರ ಅರ್ಜಿಯನ್ನು ವಜಾಗೊಳಿಸಿದ, ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಏಕಸದಸ್ಯ ಪೀಠ ಇಸಿಐ ನಡೆಸುವ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಾವುದೇ ತಡೆ ನೀಡಿಲ್ಲ ಎಂದು ಹೇಳಿದ್ದರು. ಆದರೂ, ಪಕ್ಷಗಳು ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ಚಿಹ್ನೆ ಮತ್ತು ಪಕ್ಷದ ಹೆಸರಿನ ಹಂಚಿಕೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಇಸಿಐ ಶೀಘ್ರವಾಗಿ ಇತ್ಯರ್ಥ ಪಡಿಸಬೇಕು ಎಂದು ಹೇಳಿದ್ದರು.
ಉದ್ಧವ್ ಅವರು ತಮ್ಮ ಮನವಿಯಲ್ಲಿ “ಚುನಾವಣಾ ಆಯೋಗದ ಆದೇಶ ಕಾನೂನು ಮತ್ತು ವಾಸ್ತವಾಂಶಗಳೆರಡರಲ್ಲೂ ಅಧಿಕಾರ ವ್ಯಾಪ್ತಿಹೊಂದಿರದ ಸಮರ್ಥನೀಯವಲ್ಲದ ಕಾನೂನುಬಾಹಿರ ಆದೇಶವಾಗಿದೆ ಎಂದು ಹೇಳಲು ಏಕಸದಸ್ಯ ಪೀಠ ವಿಫಲವಾಗಿದೆ” ಎಂಬುದಾಗಿ ವಾದಿಸಿದ್ದರು. ಇಸಿಐ ಭಾವಿಸಿ, ಆದೇಶ ನೀಡಿದಂತೆ ಶಿವಸೇನೆಯಲ್ಲಿ ಎರಡು ಬಣಗಳಿಲ್ಲ. ತಾನು ಮಾತ್ರವೇ ಶಿವಸೇನೆಯಲ್ಲಿ ನ್ಯಾಯಯುತವಾಗಿ ಚುನಾಯಿತನಾದ ಅಧ್ಯಕ್ಷ ಎಂದು ಅವರು ಹೇಳಿಕೊಂಡಿದ್ದರು.