Kerala High Court
Kerala High Court 
ಸುದ್ದಿಗಳು

ಗುರುವಾಯೂರು ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ಆಯೋಜನೆಯಿಂದ ದೂರ ಉಳಿಯುವಂತೆ ನ್ಯಾಯಾಧೀಶರಿಗೆ ಕೇರಳ ಹೈಕೋರ್ಟ್ ಕಿವಿಮಾತು

Bar & Bench

ಗುರುವಾಯೂರು ದೇವಸ್ಥಾನದಲ್ಲಿ ವಾರ್ಷಿಕವಾಗಿ ಆಯೋಜಿಸುವ 'ಕೊಡತಿ ವಿಳಕ್ಕು' (ನ್ಯಾಯಾಲಯ ದೀಪ) ಕಾರ್ಯಕ್ರಮದ ಆಯೋಜನೆಯಲ್ಲಿ ಭಾಗವಹಿಸದಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ನ್ಯಾಯಾಧೀಶರು ಮತ್ತು ಇತರ ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿದೆ.

ಚಾವಕ್ಕಾಡ್ ಮುನ್ಸಿಫ್ ನ್ಯಾಯಾಲಯ ವಕೀಲರ ಸಂಘದ ಸದಸ್ಯರನ್ನೊಳಗೊಂಡ ಸಮಿತಿಯಿಂದ ಕೊಡತಿ ವಿಳಕ್ಕು ಆಯೋಜಿಸಲಾಗಿದೆ.

ತ್ರಿಶೂರ್ ಜಿಲ್ಲಾ ಪ್ರಭಾರಿ ನ್ಯಾಯಾಧೀಶ ಎ ಕೆ ಜಯಸಂಹರನ್ ನಂಬಿಯಾರ್ ಅವರ ಉಲ್ಲೇಖದ ಮೇರೆಗೆ ಮೊಮೊ ಹೊರಡಿಸಿರುವ ಹೈಕೋರ್ಟ್‌, “ನ್ಯಾಯಾಲಯವು ಜಾತ್ಯತೀತ ಸಂಸ್ಥೆಯಾಗಿದ್ದು ಯಾವುದೇ ನಿರ್ದಿಷ್ಟ ಧರ್ಮವನ್ನು ಉತ್ತೇಜಿಸುವ ಯಾವುದೇ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವುದರಿಂದ ದೂರ ಉಳಿಯಬೇಕು” ಎಂದು ಆಡಳಿತಾತ್ಮಕ ನಿರ್ದೇಶನ ನೀಡಿದೆ.  ಈ ಕುರಿತು ನವೆಂಬರ್ 1ರಂದು ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಎಂ ಹೇಮಲತಾ ಅವರು ಅಧಿಕೃತ ಮೆಮೊ ಹೊರಡಿಸಿದ್ದಾರೆ.

ವಕೀಲರ ಸಂಘದ ಸದಸ್ಯರಿಗೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾವುದೇ ಆಕ್ಷೇಪಣೆ ಇಲ್ಲದಿದ್ದರೂ, 'ಕೊಡತಿ ವಿಳಕ್ಕು' ಎಂಬ ಹೆಸರನ್ನು ಬಳಸುವುದು ಸ್ವೀಕಾರಾರ್ಹವಲ್ಲ, ಏಕೆಂದರೆ ನಮ್ಮ ರಾಜ್ಯದ ನ್ಯಾಯಾಲಯಗಳು ಕಾರ್ಯಕ್ರಮದ ಆಯೋಜನೆಯೊಂದಿಗೆ ಸಂಪರ್ಕ ಹೊಂದಿವೆ ಎಂಬ ಭಾವವನ್ನು ಇದು ಮೂಡಿಸುತ್ತದೆ… ಸಂವಿಧಾನದ ಅಡಿಯಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಸಂಸ್ಥೆಗಳಾಗಿ, ನ್ಯಾಯಾಲಯಗಳು ಯಾವುದೇ ನಿರ್ದಿಷ್ಟ ಧರ್ಮವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಿರಬಾರದು, " ಎಂದು ಜ್ಞಾಪನಾಪತ್ರದಲ್ಲಿ ಹೇಳಲಾಗಿದೆ.

ನ್ಯಾಯಾಧೀಶರು ಸಂಘಟನಾ ಸಮಿತಿಯ ಭಾಗವಾಗಬಾರದು ಅಥವಾ ಯಾವುದೇ ರೀತಿಯಲ್ಲಿ 'ಕೊಡತಿ ವಿಳಕ್ಕು' ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬಾರದು. ಕಾರ್ಯಕ್ರಮಕ್ಕೆ 'ಕೊಡತಿ ವಿಳಕ್ಕು' ಎಂಬ ಹೆಸರನ್ನು ಬಳಸುವುದು ತಪ್ಪುದಾರಿಗೆಳೆಯುವ ಸಾಧ್ಯತೆಯಿದೆ. ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮಕ್ಕೆ ʼಕೊಡತಿ ವಿಳಕ್ಕುʼ ಎಂಬ ಹೆಸರು ಬಳಸದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಹೈಕೋರ್ಟ್‌ ಹೇಳಿದೆ.