ಭಾರತೀಯ ಸಶಸ್ತ್ರ ಪಡೆಗಳಿಗೆ ಪ್ರವೇಶಕ್ಕಾಗಿ ಅಗ್ನಿಪಥ್ ಯೋಜನೆಯನ್ನು ತಜ್ಞರು ರೂಪಿಸಿದ್ದು ಅಂತಹ ಯೋಜನೆ ಬಗ್ಗೆ ತೀರ್ಪು ನೀಡುವ ತಜ್ಞ ಸಂಸ್ಥೆ ನ್ಯಾಯಾಲಯವಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.
ತಾನು ಬೇರೆ ದೇಶಗಳಲ್ಲಿ ಜಾರಿಯಲ್ಲಿರುವ ರಕ್ಷಣಾ ಪಡೆ ನಿಯಂತ್ರಿಸುವ ಯೋಜನೆಗಳನ್ನು ಪರಿಶೀಲಿಸಲೂ ಹೋಗುವುದಿಲ್ಲ ಇಲ್ಲವೇ ಸೇನಾ ಕಾರ್ಯತಂತ್ರದ ಬಗ್ಗೆ ಪ್ರತಿಕ್ರಿಯಿಸುವುದೂ ಇಲ್ಲ ಎಂದು ಕೂಡ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
"ನಮಗೆ ಯುವ ಸೈನ್ಯ ಬೇಕು ಎಂದು ಸರ್ಕಾರ ಹೇಳುತ್ತಿದೆ. ತಜ್ಞರು ಯೋಜನೆ ರೂಪಿಸಿದ್ದಾರೆ. ನಾವು (ನ್ಯಾಯಾಧೀಶರು) ತಜ್ಞರಲ್ಲ... ಯಾವುದು ಒಳ್ಳೆಯದು ಎಂದು ನಿರ್ಧರಿಸಲು ನಾವಿದ್ದೇವೆಯೇ? ನಾಲ್ಕು ವರ್ಷಗಳೋ ಅಥವಾ ಏಳು ವರ್ಷಗಳೋ? ಇದೆಲ್ಲ ನಮ್ಮ ಕ್ಷೇತ್ರವಲ್ಲ" ಎಂದು ಪೀಠ ಹೇಳಿದೆ.
ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಸೇನೆಗೆ ಪ್ರವೇಶಿಸಲು ಹೊಸದಾಗಿ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅಗ್ನಿಪಥ್ ಯೋಜನೆಯ ಪ್ರಕಾರ ನಾಲ್ಕು ವರ್ಷಗಳ ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿಯನ್ನು ಮಾತ್ರ ಭಾರತೀಯ ಸೇನೆಯಲ್ಲಿ ಮುಂದುವರಿಸಲಾಗುತ್ತದೆ. ಉಳಿದವರಿಗೆ ಸೇನೆಯಲ್ಲಿ ಉದ್ಯೋಗ ನಿರಾಕರಿಸಲಾಗುತ್ತದೆ.
ದೇಶಾದ್ಯಂತ ಯೋಜನೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದವು. ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಅಗ್ನಿಪಥ್ ಯೋಜನೆ ಮತ್ತು ಸಶಸ್ತ್ರ ಪಡೆಗಳ ನೇಮಕಾತಿಗೆ ಸಂಬಂಧಿಸಿದ ಸುಮಾರು ಇಪ್ಪತ್ತಕ್ಕೂ ಹೆಚು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಒಟ್ಟು ಮೂರು ವರ್ಗದ ಅರ್ಜಿಗಳಿವೆ. ಒಂದು ವರ್ಗದ ಅರ್ಜಿ ಸರ್ಕಾರದ ಯೋಜನೆಯನ್ನು ಪ್ರಶ್ನಿಸಿದ್ದರೆ ಮತ್ತೊಂದು ವರ್ಗ ಯೋಜನೆಯ ಹೊರತಾಗಿಯೂ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ದೂರಿತ್ತು. ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಇನ್ನೂ ನೇಮಕಾತಿ ನಡೆದಿಲ್ಲ ಎಂದು ದೂರಿವೆ ಮೂರನೇ ವರ್ಗದ ಅರ್ಜಿಗಳು. ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಯೋಜನೆಯ ಸಂಬಂಧ ದಾಖಲಾಗಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಅಲಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು. ಪರಿಣಾಮ ಆ ಅರ್ಜಿಗಳು ದೆಹಲಿ ಹೈಕೋರ್ಟ್‌ಗೆ ವರ್ಗಾವಣೆಗೊಂಡಿವೆ. ಪ್ರಕರಣವನ್ನು ನ್ಯಾಯಾಲಯ ಬುಧವಾರ ಮತ್ತೆ ವಿಚಾರಣೆ ನಡೆಸಲಿದೆ.