ಪ್ರಕರಣವನ್ನು ಅನಗತ್ಯವಾಗಿ ಮುಂದೂಡುವಂತೆ ಕೋರಿ ದೆಹಲಿ ಗಲಭೆ ಸಂಚಿನ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ತಾಹಿರ್ ಹುಸೇನ್, ಆಸಿಫ್ ಇಕ್ಬಾಲ್ ಹಾಗೂ ಇಶ್ರತ್ ಜಹಾನ್ ಅವರು ವಿಚಾರಣೆ ವಿಳಂಬ ಮಾಡಬಾರದು ಎಂದು ದೆಹಲಿ ನ್ಯಾಯಾಲಯ ಇತ್ತೀಚೆಗೆ ಎಚ್ಚರಿಕೆ ನೀಡಿದೆ.
ಹಿಂದಿನ ವಿಚಾರಣೆ ವೇಳೆ ಪ್ರಕರಣವನ್ನು ನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲದೆ ಆರೋಪಿಗಳ ಪರ ವಕೀಲರು ವಾದ ಮಂಡಿಸುವ ಆದೇಶದ ಬಗ್ಗೆ ಒಮ್ಮತಕ್ಕೆ ಬರಬೇಕು ಎಂದು ಕೂಡ ತಿಳಿಸಲಾಗಿತ್ತು. ಆದರೆ ಕಳೆದ ವಾರ ಪ್ರಕರಣ ಕೈಗೆತ್ತಿಕೊಂಡಾಗ ವಕೀಲರು ವಾದ ಮಂಡಿಸಲು ಸಿದ್ಧರಿರಲಿಲ್ಲ. ಇದು ನ್ಯಾಯಾಲಯದ ಕೋಪಕ್ಕೆ ಕಾರಣವಾಯಿತು. ಹಾಗಾಗಿ ವಿಚಾರಣೆಯನ್ನು ಮತ್ತಷ್ಟು ವಿಳಂಬ ಮಾಡದಂತೆ ಆರೋಪಿಗಳಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಎಚ್ಚರಿಕೆ ನೀಡಿದರು.
ಗಲಭೆಗೆ ಸಂಚು ರೂಪಿಸಿದ ಆರೋಪದಡಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಸಫೂರ ಜರ್ಗರ್, ನತಾಶಾ ನರ್ವಾಲ್, ಆಸಿಫ್ ಇಕ್ಬಾಲ್ ತನ್ಹಾ, ತಾಹಿರ್ ಹುಸೇನ್, ಖಾಲಿದ್ ಸೈಫಿ, ಇಶ್ರತ್ ಜಹಾನ್, ಮೀರಾನ್ ಹೈದರ್, ಗುಲ್ಫಿಶಾ ಫಾತಿಮಾ, ಶಿಫಾ-ಉರ್-ರೆಹಮಾನ್, ಶಾದಾಬ್ ಅಹಮದ್, ತಾಸ್ಲೀಮ್ ಅಹ್ಮದ್ ಮಲಿಕ್, ಮೊಹಮ್ಮದ್ ಸಲೀಂ ಖಾನ್, ಅಥರ್ ಖಾನ್ ಹಾಗೂ ಫೈಜಾನ್ ಖಾನ್ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಆರೋಪಿಗಳು ವಿವಿಧ ಕಾರಣಗಳನ್ನು ನೀಡಿ ತಮ್ಮ ಪ್ರಕರಣ ಮುಂದೂಡುವಂತೆ ಕೋರಿದ್ದರು. ಈ ಬಗ್ಗೆ ಹತಾಶೆ ವ್ಯಕ್ತಪಡಿಸಿದ ನ್ಯಾಯಾಲಯ ಅಕ್ಟೋಬರ್ 21ರಂದು ಮಧ್ಯಾಹ್ನ 12.00 ಗಂಟೆಗೆ ವಿಚಾರಣೆ ಮುಂದೂಡಲು ನಿರ್ಧರಿಸಿತು. ಅಂದು ತಾಹಿರ್ ಹುಸೇನ್ ಪರ ವಕೀಲರು ವಾದ ಮಂಡಿಸಲಿದ್ದಾರೆ.
ಆರೋಪಿ ತಾಹೀರ್ ಹುಸೇನ್ ಪರ ವಾದ ಮುಗಿದ ಕೂಡಲೇ ಉಳಿದ ಆರೋಪಿಗಳ ಪರ ವಕೀಲರು ತಮ್ಮ ವಾದಕ್ಕೆ ಸಿದ್ಧರಾಗಬೇಕು ಮತ್ತು ಯಾವುದೇ ಕಾರಣಕ್ಕೂ ಅವರು ಪ್ರಕರಣ ಮುಂದೂಡಲು ಅವಕಾಶ ನೀಡುವುದಿಲ್ಲ ಎಂದ ನ್ಯಾಯಾಲಯ ತಾಹಿರ್ ಹುಸೇನ್ ಮತ್ತು ಸಲೀಂ ಖಾನ್ ಅವರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂಬುದಾಗಿ ತಿಳಿಸಿದೆ.