ಕ್ರಿಮಿನಲ್ ಮೊಕದ್ದಮೆಗಳಿಂದ ತಮ್ಮನ್ನು ವಿಮುಕ್ತಿಗೊಳಿಸುವಂತೆ ಕೋರಿರುವ ಅರ್ಜಿಗಳನ್ನು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯಗಳು ಆರೋಪಿಗಳು ಸಲ್ಲಿಸಿದ ಸಾಕ್ಷ್ಯಗಳನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. [ ಸ್ಟೆಫಿನ್ ರಾಜ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]
ಪ್ರಾಸಿಕ್ಯೂಷನ್ ಸಲ್ಲಿಸಿದ ಪ್ರಕರಣದ ದಾಖಲೆಗಳನ್ನಷ್ಟೇ ವಿಚಾರಣಾ ನ್ಯಾಯಾಲಯಗಳು ಪರಿಗಣಿಸಬೇಕಾಗುತ್ತದೆ ಎಂದು ನ್ಯಾ. ಎ ಬದರುದ್ದೀನ್ ಹೇಳಿದರು.
ಪ್ರಕರಣದಿಂದ ವಿಮುಕ್ತಿಗೊಳಿಸುವಂತೆ ಕೋರಿರುವ ಮನವಿ ಪರಿಗಣಿಸುವಾಗ ವಿಶೇಷ ನ್ಯಾಯಾಲಯ (ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ) ಪ್ರಾಸಿಕ್ಯೂಷನ್ ಸಲ್ಲಿಸಿರುವ ಪ್ರಕರಣದ ದಾಖಲೆಗಳನ್ನು ಮಾತ್ರವೇ ಪರಿಗಣಿಸಬೇಕು, ವಿಮುಕ್ತಿ ಕೋರಿರುವ ಅರ್ಜಿ ನಿರ್ಧರಿಸಲು ಪ್ರಾಸಿಕ್ಯೂಷನ್ ದಾಖಲೆಗಳಿಗೆ ಹೊರತಾದ ದಾಖಲೆಯನ್ನು ಅವು ಆರೋಪಿ ಸಲ್ಲಿಸಿರಲಿ ಅಥವಾ ಇನ್ನಾವುದೇ ವಿಧಾನದಲ್ಲಿ ಸಲ್ಲಿಸಿರಲಿ ಪ್ರಾಸಿಕ್ಯೂಷನ್ ದಾಖಲೆಗಳ ಭಾಗವಾಗಿರದೇ ಇದ್ದರೆ ಅಂತಹವುಗಳನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ವ್ಯಕ್ತಿ ತನ್ನನ್ನು ಪ್ರಕರಣದಿಂದ ವಿಮುಕ್ತಿಗೊಳಿಸುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಐಪಿಸಿ ಸೆಕ್ಷನ್ 376 (2) (ಎನ್) ಮತ್ತು 376 (2) (ಎಫ್) ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆತನ ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆತ ಹೈಕೋರ್ಟ್ ಮೆಟ್ಟಿಲೇರಿದ್ದ.
ತನ್ನ ದೂರದ ಸಂಬಂಧಿಯಾದ ಮಹಿಳೆಯೊಂದಿಗೆ ನಡೆಸಿದ ಲೈಂಗಿಕ ಕ್ರಿಯೆ ಸಂಪೂರ್ಣ ಸಮ್ಮತಿಯಿಂದ ಕೂಡಿತ್ತು ಎಂದಿದ್ದ ಅರ್ಜಿದಾರ ತಾನು ಸಹಮತದೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿ ಯುವಜನ ಆಯೋಗದೆದುರು ಮಹಿಳೆ ಒಪ್ಪಿಕೊಂಡಿರುವುದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ.
ವಿಮುಕ್ತಿಗಾಗಿ ಸಲ್ಲಿಸಿದ ಮನವಿಯನ್ನು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯ ʼಮಹಿಳೆ ಮೇಲ್ನೋಟಕ್ಕೆ ಮದುವೆಯಾಗುತ್ತದೆ ಎಂಬ ಭರವಸೆಯ ಆಧಾರದ ಮೇಲೆ ಲೈಂಗಿಕ ಸಂಭೋಗಕ್ಕೆ ಒಪ್ಪಿರುವುದನ್ನು ಸೂಚಿಸುತ್ತದೆʼ ಎಂದು ತೀರ್ಮಾನಿಸಿದೆ. ಅದರಂತೆ ಮಹಿಳೆ ನೀಡಿದ ಒಪ್ಪಿಗೆಯನ್ನು ತಪ್ಪ ಕಲ್ಪನೆಗೊಳಗಾಗಿ ನೀಡಿದ ಸಮ್ಮತಿ ಎಂದು ಪರಿಗಣಿಸಿ ಐಪಿಸಿ ಸೆಕ್ಷನ್ 90ರ ಅಡಿ ದುರ್ಬಲಗೊಳಿಸಲಾಗುತ್ತದೆ ಎಂದು ಹೈಕೋರ್ಟ್ ನುಡಿದಿದೆ.
ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಲೆದೂಗಿದ ಹೈಕೋರ್ಟ್ ಆರೋಪಿ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಅಂಶಗಳಿವೆ ಎಂದಿತು. ಜೊತೆಗೆ ಯುವಜನ ಆಯೋಗಕ್ಕೆ ನೀಡಿದ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿತ್ತು ಎಂಬ ಆರೋಪಿಯ ವಾದವನ್ನು ತಿರಸ್ಕರಿಸಿತು. ಹಾಗಾಗಿ ಸೆಷನ್ಸ್ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್‌ಅರ್ಜಿ ವಜಾಗೊಳಿಸಿತು.