CJI NV Ramana 
ಸುದ್ದಿಗಳು

ವ್ಯಾಜ್ಯ ಪರಿಹಾರಕ್ಕಾಗಿ ಪರ್ಯಾಯ ಹುಡುಕಾಟ ನಡೆಸಿದ ಬಳಿಕವಷ್ಟೇ ಕಕ್ಷೀದಾರರು ನ್ಯಾಯಾಲಯ ಸಂಪರ್ಕಿಸಬೇಕು: ಸಿಜೆಐ ರಮಣ

ಜಾಗತಿಕ ದೃಷ್ಟಿಕೋನ ಮತ್ತು ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ, ಹೈದರಾಬಾದ್‌ನ ಐಎಎಂಸಿ ಶೀಘ್ರದಲ್ಲೇ ಸಿಂಗಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಸಮನಾಗಲಿದೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.

Bar & Bench

ಕಕ್ಷೀದಾರರು ಮೊಕದ್ದಮೆ ಹೂಡುವುದನ್ನು ಕೊನೆಯ ಉಪಾಯವಾಗಿ ಪರಿಗಣಿಸಬೇಕು, ರಾಜಿ ಮಧ್ಯಸ್ಥಿಕೆಯಂತಹ ವಿವಾದಿತ ಪರ್ಯಾಯ ವಿವಾದ ಪರಿಹಾರ (ಎಡಿಆರ್‌) ವಿಧಾನಗಳನ್ನು ಕಂಡುಕೊಂಡ ನಂತರವಷ್ಟೇ ಅವರು ನ್ಯಾಯಾಲಯಗಳನ್ನು ಸಂಪರ್ಕಿಸಬೇಕು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಸಲಹೆ ನೀಡಿದರು.

ಹೈದರಾಬಾದ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಿ.18ರಂದು ಉದ್ಘಾಟನೆಯಾಗಲಿರುವ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಉದ್ಘಾಟನೆಯ ಪೂರ್ವಭಾವಿ ಸಮಾರಂಭ ಮತ್ತು ಭಾಗೀದಾರರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಕೆಲ ಮಧ್ಯಸ್ಥಿಕೆ ಕೇಂದ್ರಗಳಿದ್ದರೂ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಬಯಸುವ ದೇಶದ ಪಕ್ಷಕಾರರು ಹೆಚ್ಚಾಗಿ ದೇಶದಾಚೆಗಿನ ಮಧ್ಯಸ್ಥಿಕೆ ಕೇಂದ್ರಗಳನ್ನೇ ಆರಿಸಿಕೊಳ್ಳುತ್ತಾರೆ. ಹೈದರಾಬಾದ್‌ನಲ್ಲಿ ಐಎಎಂಸಿ ಸ್ಥಾಪನೆಯಿಂದ ಈ ಪ್ರವೃತ್ತಿ ಬದಲಾಗಲಿದೆ. ಜಾಗತಿಕ ದೃಷ್ಟಿಕೋನ ಮತ್ತು ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ, ಐಎಎಂಸಿ ಶೀಘ್ರದಲ್ಲೇ ಸಿಂಗಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಸಮನಾಗಲಿದೆ ಎಂಬ ಭರವಸೆ ಇದೆ ಎಂದ ಅವರು ದೇಶದ ರಾಜಿ ಮತ್ತು ಮಧ್ಯಸ್ಥಿಕೆ ಕ್ಷೇತ್ರಕ್ಕೆ ಐಎಎಂಸಿ ವರದಾನವಾಗಲಿದೆ ಎಂಬುದಾಗಿ ತಿಳಿಸಿದರು.