ಆಧುನಿಕ ಶಿಕ್ಷಣ ಪ್ರಯೋಜನವಾದಿಯಾಗಿದ್ದು, ವ್ಯಕ್ತಿತ್ವ ನಿರ್ಮಾಣಕ್ಕೆ ಯೋಗ್ಯವಲ್ಲ: ಸಿಜೆಐ ಎನ್‌ ವಿ ರಮಣ

ನಿಜವಾದ ಕಲಿಕೆ ಎಂಬುದು ನ್ಯಾಯೋಚಿತ ಮತ್ತು ನೈತಿಕ ಮೌಲ್ಯಗಳ ಅಭಿವೃದ್ಧಿ ಸೇರಿದಂತೆ ವ್ಯಕ್ತಿಯ ಸಮಗ್ರ ಬೆಳವಣಿಗೆಯನ್ನು ಒಳಗೊಂಡಿರಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದರು.
CJI NV Ramana
CJI NV Ramana

ಆಧುನಿಕ ಶಿಕ್ಷಣ ತನ್ನ ಸ್ವರೂಪದಲ್ಲಿ ಪ್ರಯೋಜನವಾದಿಯಾಗಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಅಥವಾ ನೈತಿಕ ಮೌಲ್ಯ ಪೋಷಿಸಲು ಸಹಾಯ ಮಾಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಸೋಮವಾರ ವಿಷಾದ ವ್ಯಕ್ತಪಡಿಸಿದರು.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಪುಟ್ಟಪರ್ತಿಯಲ್ಲಿರುವ ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ 40ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿಜವಾದ ಕಲಿಕೆ ಎಂಬುದು ನ್ಯಾಯೋಚಿತ ಮತ್ತು ನೈತಿಕ ಮೌಲ್ಯಗಳ ಅಭಿವೃದ್ಧಿ ಸೇರಿದಂತೆ ವ್ಯಕ್ತಿಯ ಸಮಗ್ರ ಬೆಳವಣಿಗೆಯನ್ನು ಒಳಗೊಂಡಿರಬೇಕು ಎಂದು ಅವರು ಹೇಳಿದರು.

Also Read
[ದೆಹಲಿ ವಾಯುಮಾಲಿನ್ಯ] ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು ಮನೆಯಲ್ಲೂ ಮಾಸ್ಕ್ ಧರಿಸುವಂತಾಗಿದೆ: ಸಿಜೆಐ ಎನ್ ವಿ ರಮಣ

"ಆಧುನಿಕ ಶಿಕ್ಷಣ ವ್ಯವಸ್ಥೆಯು ಉಪಯೋಗಿತ್ವದ ಸುತ್ತ ಕೇಂದ್ರೀಕೃತವಾಗಿದ್ದು ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸಲು ಮತ್ತು ಅವರಲ್ಲಿ ನೈತಿಕ ಮೌಲ್ಯ ಬಿತ್ತಲು ಇದು ಯೋಗ್ಯವಾಗಿಲ್ಲ. ತಾಳ್ಮೆ, ಪರಸ್ಪರ ತಿಳಿವಳಿಕೆ ಹಾಗೂ ಪರಸ್ಪರ ಗೌರವವನ್ನು ನಿಜವಾದ ಶಿಕ್ಷಣ ಬೆಳೆಸುತ್ತದೆ. ಮಾನವನ ನಿಜವಾದ ಅಂತರಂಗವನ್ನು ವಿಕಾಸಗೊಳಿಸಲು ಯೋಚಿಸಿ ಶೈಕ್ಷಣಿಕ ಯಾನ ಕೈಗೊಳ್ಳಿ" ಎಂದು ಸಿಜೆಐ ರಮಣ ಹೇಳಿದರು.

ಇದೇ ವೇಳೆ ಸಿಜೆಐ ಅವರು ವಿಶ್ವವಿದ್ಯಾನಿಲಯದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. "ಸತ್ಯ ಸಾಯಿ ಬಾಬಾ ಅವರಿಗೆ ಮಕ್ಕಳ ಮೇಲೆ ಇದ್ದ ಅಚಲವಾದ ಪ್ರೀತಿಯಿಂದ ಈ ಶಿಕ್ಷಣ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ" ಎಂದು ಹೇಳಿದರು. ವಿಶ್ವವಿದ್ಯಾನಿಲಯವು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯ ವೃದ್ಧಿಸುವ ಶಿಕ್ಷಣವನ್ನು ಹೇಗೆ ನೀಡುತ್ತಿದೆ ಎಂಬುದನ್ನು ಅವರು ವಿವರಿಸಿದರು. ಕೋವಿಡ್‌ ಸಾಂಕ್ರಾಮಿಕ ಆಳವಾಗಿ ಬೇರೂರಿರುವ ಅಸಮಾನತೆ ಮತ್ತು ದೌರ್ಬಲ್ಯಗಳನ್ನು ಹೇಗೆ ಬಹಿರಂಗಪಡಿಸಿತು ಎಂಬುದನ್ನು ಪ್ರಸ್ತಾಪಿಸಿದ ಅವರು "ಈಗ ಬೇಕಾಗಿರುವುದು ಜನರು ಒಗ್ಗೂಡುವುದು. ಇಲ್ಲಿಂದ ಪದವಿ ಪಡೆದ ನನ್ನ ಯುವ ಮಿತ್ರರು ಸಾರ್ವಜನಿಕ ಒಳಿತಿನ ಕಲ್ಪನೆಯನ್ನು ಎತ್ತಿಹಿಡಿಯುತ್ತಾರೆ ಎಂದು ಖಾತ್ರಿಯಿದೆ" ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com