Karnataka High Court
Karnataka High Court 
ಸುದ್ದಿಗಳು

ವಿಚಾರಣೆಯ ನೇರಪ್ರಸಾರಕ್ಕೆ ಪ್ರಕರಣ ಆಯ್ಕೆ ಮಾಡುವಾಗ ನ್ಯಾಯಾಲಯಗಳು ಜಾಗರೂಕವಾಗಿರಬೇಕು: ಕರ್ನಾಟಕ ಹೈಕೋರ್ಟ್

Bar & Bench

ವಿಚಾರಣೆಯ ನೇರಪ್ರಸಾರಕ್ಕಾಗಿ ಆಯ್ಕೆ ಮಾಡುವ ಪ್ರಕರಣಗಳನ್ನು ನ್ಯಾಯಾಲಯಗಳು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ವೈಯಕ್ತಿಕ ಆರೋಪ ಒಳಗೊಂಡ ಪ್ರಕರಣಗಳು ನೇರ ಪ್ರಸಾರಕ್ಕೆ ಆಯ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಕಿವಿಮಾತು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡ ಪ್ರಕರಣಗಳು ಲೈವ್ ಸ್ಟ್ರೀಮಿಂಗ್‌ಗೆ ಉತ್ತಮ ಆಯ್ಕೆ ಎಂದು ಹೇಳಿತು.

ಸೋಮವಾರದ ಪ್ರಕರಣಗಳ ವಿಚಾರಣೆಯ ಬಳಿಕ ಹೈಕೋರ್ಟ್‌ ತಾನು ಇತ್ತೀಚೆಗೆ ಕೈಗೊಂಡ ವಿಚಾರಣೆಯ ನೇರಪ್ರಸಾರದ ಕುರಿತು ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಧ್ಯಾನ್ ಚಿನ್ನಪ್ಪ ಅವರ ಅಭಿಪ್ರಾಯವನ್ನು ಪೀಠ ಕೇಳಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮೇ 31ರಂದು ಕರ್ನಾಟಕ ಹೈಕೋರ್ಟ್‌ ಪ್ರಾಯೋಗಿಕವಾಗಿ ವಿಚಾರಣೆಯ ನೇರ ಪ್ರಸಾರ ಮಾಡಿತ್ತು. ಆ ಮೂಲಕ ಆ ಹಿರಿಮೆಗೆ ಪಾತ್ರವಾದ ದೇಶದ ಎರಡನೇ ಉಚ್ಚ ನ್ಯಾಯಾಲಯ ಎನಿಸಿಕೊಂಡಿತು. ಗುಜರಾತ್‌ ಹೈಕೋರ್ಟ್ ಈ ಸಾಧನೆ ಮಾಡಿದ ಮೊದಲ ನ್ಯಾಯಾಲಯ. ಮುಖ್ಯ ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠದ ನ್ಯಾಯಾಲಯದ ಹಾಲ್ ನಂ 1ರ ವಿಚಾರಣೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಯೂಟ್ಯೂಬ್‌ ಚಾನೆಲ್‌ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ.

ಸೋಮವಾರ ಬೈತಕೊಲ್‌ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಮತ್ತು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅಂತಿಮ ವಿಚಾರಣೆಯ ನೇರ ಪ್ರಸಾರ ಮಾಡಲಾಯಿತು.

"ಕೋವಿಡ್‌ ಸಂದರ್ಭದಲ್ಲಿ ನೇರಪ್ರಸಾರ ಉತ್ತಮ ಕ್ರಮ. ಏಕೆಂದರೆ ಇದು ಮುಕ್ತ ನ್ಯಾಯಾಲಯ ಸಂಸ್ಕೃತಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು. ಅಲ್ಲದೆ ವಿಚಾರಣೆ ವೀಕ್ಷಿಸಲು ಜನ ಹೈಕೋರ್ಟ್‌ ಯೂಟ್ಯೂಬ್‌ ಚಾನೆಲ್‌ಗೆ ಲಾಗ್‌-ಇನ್‌ ಆಗುತ್ತಾರೆ" ಎಂದು ಕೂಡ ಅವರು ಹೇಳಿದರು. ಆದರೆ ಎಲ್ಲವೂ ವಿಚಕ್ಷಣೆಗೆ ಒಳಗಾಗುವುದರಿಂದ ನ್ಯಾಯಾಲಯಗಳಲ್ಲಿ ಹಾಸ್ಯ ಮತ್ತು ವಿನೋದದ ಸನ್ನಿವೇಶಗಳಿಗೆ ವಕೀಲರು ಮುಂದಾಗದೇ ಹೋಗಬಹುದು ಎಂದು ಅವರು “ನ್ಯಾಯಾಲಯ ಹಾಸ್ಯದ ವೇಳೆಯೂ ನಾವು ಜಾಗರೂಕರಾಗಿರಬೇಕಾಗುತ್ತದೆ ಏಕೆಂದರೆ ಎಲ್ಲವೂ ದಾಖಲೀಕರಣವಾಗುತ್ತಿರುತ್ತದೆ” ಎಂದು ಲಘು ಧಾಟಿಯಲ್ಲಿ ಪ್ರತಿಕ್ರಿಯಿಸಿದರು.

ಬಳಿಕ ʼಬಾರ್ ಮತ್ತು ಬೆಂಚ್ʼ ಜೊತೆ ಮಾತನಾಡಿದ ಎಎಜಿ ಚಿನ್ನಪ್ಪ ನೈಜಸಮಯದಲ್ಲಿ ನ್ಯಾಯಾಲಯ ವಿಚಾರಣೆ ವೀಕ್ಷಿಸುವುದು ಕಾನೂನು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾದರೂ ಇದು ನ್ಯಾಯಾಲಯಗಳಲ್ಲಿ ತಕ್ಕಮಟ್ಟಿನ ಅನೌಪಚಾರಿಕತೆಯನ್ನು ಕಸಿದುಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

ನೇರ ಪ್ರಸಾರಕ್ಕಾಗಿ ಸುಪ್ರೀಂಕೋರ್ಟ್ ಹೊರಡಿಸಿರುವ ಕರಡು ನಿಯಮಗಳನ್ನು ಪರಿಶೀಲಿಸುತ್ತಿರುವುದಾಗಿ ನ್ಯಾಯಾಲಯ ಸೋಮವಾರ ಮಾಹಿತಿ ನೀಡಿದೆ. ಸುಪ್ರೀಂಕೋರ್ಟ್‌ ಇ-ಸಮಿತಿ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ನ್ಯಾಯಾಲಯ ವಿಚಾರಣೆಗಳ ನೇರಪ್ರಸಾರ ಮತ್ತು ರೆಕಾರ್ಡಿಂಗ್‌ಗಾಗಿ ಕರಡು ಮಾದರಿ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಜೊತೆಗೆ ಎಲ್ಲಾ ಭಾಗೀದಾರರಿಂದ ಮಾಹಿತಿ ಮತ್ತು ಸಲಹೆ ಆಹ್ವಾನಿಸಿತ್ತು. ಬಾಂಬೆ, ದೆಹಲಿ, ಮದ್ರಾಸ್ ಮತ್ತು ಕರ್ನಾಟಕ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನೊಳಗೊಂಡ ಉಪ ಸಮಿತಿ ಕರಡು ನಿಯಮಗಳನ್ನು ರೂಪಿಸಿದೆ.