ಕೊಲೆ, ಅತ್ಯಾಚಾರ ಮತ್ತು ಡಕಾಯಿತಿಯಂತಹ ಗಂಭೀರ ಪ್ರಕರಣಗಳ ವಿಚಾರಣೆ ಪ್ರಾರಂಭವಾಗಿ ಸಾಕ್ಷಿಗಳ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಆರಂಭಿಸಿದ ಬಳಿಕ ಅಂತಹ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ಆಲಿಸುವಾಗ ನ್ಯಾಯಾಲಯಗಳು ಅತ್ಯಂತ ಜಾಗರೂಕವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಈಚೆಗೆ ಹೇಳಿದೆ [ಹೆಸರು ಬಹಿರಂಗಪಡಿಸದ ಆರೋಪಿ ಮತ್ತು ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆರೋಪಿಯ ತಪ್ಪಿಲ್ಲದೆ ವಿಚಾರಣೆ ಅನಗತ್ಯವಾಗಿ ವಿಳಂಬವಾದ ಪ್ರಕರಣಗಳಲ್ಲಿ ಮಾತ್ರ ವಿಚಾರಣೆ ಆರಂಭದ ನಂತರ ಜಾಮೀನು ನೀಡಿದರೆ ಅದು ಸಮರ್ಥನೀಯ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
"ಸಾಮಾನ್ಯವಾಗಿ ಅತ್ಯಾಚಾರ, ಕೊಲೆ, ಡಕಾಯಿತಿ ಮುಂತಾದ ಗಂಭೀರ ಅಪರಾಧಗಳಲ್ಲಿ, ವಿಚಾರಣೆ ಪ್ರಾರಂಭವಾಗಿ ಸಾಕ್ಷಿಗಳ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಆರಂಭಿಸಿದ ಬಳಿಕ ನ್ಯಾಯಾಲಯ ಅದು ವಿಚಾರಣಾ ನ್ಯಾಯಾಲಯವೇ ಇರಲಿ ಅಥವಾ ಹೈಕೋರ್ಟೇ ಇರಲಿ ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸಲು ಒಲವು ತೋರಬಾರದು" ಎಂದು ನವೆಂಬರ್ 27ರಂದು ನೀಡಿದ ಆದೇಶ ಹೇಳಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು, ಜಾಮೀನು ಆದೇಶ ವಿಚಾರಣೆಯ ಹಾದಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಅನಗತ್ಯವಾಗಿ ಬದಲಿಸುವುದರಿಂದ ಅದನ್ನು ನೀಡದೆ ತನ್ನ ತೀರ್ಪು ಪ್ರಕಟಿಸಲು ನ್ಯಾಯಾಲಯಗಳು ಮುಂದಾಗಬೇಕು ಎಂದು ಅದು ತಿಳಿಸಿದೆ.
ಸಾಮಾನ್ಯವಾಗಿ ಗಂಭೀರ ಅಪರಾಧಗಳಲ್ಲಿ, ಒಮ್ಮೆ ವಿಚಾರಣೆ ಪ್ರಾರಂಭವಾದ ಬಳಿಕ ಜಾಮೀನು ಅರ್ಜಿಗಳನ್ನು ಪರಿಗಣಿಸಲು ನ್ಯಾಯಾಲಯಗಳು ಒಲವು ತೋರಬಾರದು.ಸುಪ್ರೀಂ ಕೋರ್ಟ್
ಆರೋಪ ನಿಗದಿಯಾದ ಬಳಿಕ ಇಲ್ಲವೇ ಸಾಕ್ಷ್ಯಗಳು ದಾಖಲಾದ ಬಳಿಕವೂ ಕೇವಲ ಸಂತ್ರಸ್ತರು ನುಡಿದ ಸಾಕ್ಷಿಯ ಸಣ್ಣ ವ್ಯತ್ಯಾಸಗಳನ್ನೇ ಉಲ್ಲೇಖಿಸಿ ಜಾಮೀನು ನೀಡುವ ಪ್ರವೃತ್ತಿಯನ್ನು ನ್ಯಾಯಾಲಯ ಖಂಡಿಸಿದೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿದ್ದ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಅತ್ಯಾಚಾರದಂತಹ ಗಂಭೀರ ಅಪರಾಧದ ಆರೋಪಿಯ ಪರವಾಗಿ ವಿವೇಚನಾಧಿಕಾರ ಚಲಾಯಿಸಲು ಹೈಕೋರ್ಟ್ ನೀಡಿದ ಕಾರಣ ಉತ್ತಮವಾಗಿರಲಿಲ್ಲ ಎಂದಿದೆ.
ಆದರೂ ಜಾಮೀನು ಆದೇಶ ರದ್ದುಗೊಳಿಸದ ನ್ಯಾಯಾಲಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿ ಸಂತ್ರಸ್ತೆಯ ಊರಿಗೆ ಹೋಗುವಂತಿಲ್ಲ ಎಂಬ ಹೊಸ ಷರತ್ತನ್ನು ವಿಧಿಸಿತು. ತನ್ನ ಹೊಸ ಮನೆಯ ವಿಳಾಸವನ್ನು ಪೊಲೀಸರಿಗೆ ನೀಡುವಂತೆಯೂ ಆರೋಪಿಗೆ ಅದು ಸೂಚಿಸಿತು.