
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೂಡಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಕಾಯ್ದಿರಿಸಿದೆ [ ಪಾರ್ಥ ಚಟರ್ಜಿ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ಉಳಿದ ಸಚಿವರೊಡನೆ ಜಾಮೀನಿನ ಕುರಿತು ಹೋಲಿಕೆ ಸಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.
"ಮೇಲ್ನೋಟಕ್ಕೆ, ನೀವು ಭ್ರಷ್ಟ ವ್ಯಕ್ತಿ. (ಜಾಮೀನು ಅರ್ಜಿ ನಿರ್ಧರಿಸಲು) ಎರಡು ವರ್ಷ ತೆಗೆದುಕೊಂಡರೆ ಏನೀಗ, ಸಮಯ ತೆಗೆದುಕೊಳ್ಳಲಿ ... ನೀವು ಹೋಲಿಸಿಕೊಳ್ಳುವಂಥದ್ದು ಏನೂ ಇಲ್ಲ. ತಮಿಳುನಾಡಿನ ಸಚಿವರೊಬ್ಬರು ಜಾಮೀನು ಪಡೆದ ಮಾತ್ರಕ್ಕೆ, ನಿಮಗೂ ಜಾಮೀನು ಸಿಗುತ್ತದೆಯೇ? ದೇಶದ ಇತರ ಸಚಿವರೊಂದಿಗೆ ನೀವು ತುಲನೆ ಮಾಡಿಕೊಳ್ಳುವಂತಿಲ್ಲ” ಎಂದು ನ್ಯಾಯಾಲಯ ಮೌಖಿಕವಾಗಿ ಪ್ರಶ್ನಿಸಿತು.
ಇದೇ ಪ್ರಕರಣದಲ್ಲಿ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾದದವರಂತೆಯೇ ತನಗೂ ಜಾಮೀನು ಬೇಕು ಎನ್ನುವ ಮುನ್ನ ಚಟರ್ಜಿಯವರು ಅಂಕೆಯಲ್ಲಿರಬೇಕು ಎಂದು ಪೀಠ ನುಡಿಯಿತು.
ಅವರೊಂದಿಗೆ ಹೋಲಿಸಿಕೊಳ್ಳಲು ನಿಮಗೆ ನಾಚಿಕೆಯಾಗಬೇಕು. ನಿಮ್ಮಿಂದಾಗಿ ಅವರು ಆರೋಪಿಗಳಾಗಿದ್ದಾರೆ. ನೀವು ಮಂತ್ರಿಯಾಗಿದ್ದಿರಿ ಎಂದು ನ್ಯಾಯಾಲಯ ಸಿಡಿಮಿಡಿಗೊಂಡಿತು.
ಚಟರ್ಜಿ ಅವರು ಬಿಡುಗಡೆಯಾದರೆ ನ್ಯಾಯಯುತ ತನಿಖೆ ಸಾಧ್ಯವೇ, ವಿಚಾರಣೆ ಮೇಲೆ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನು ಅವಲಂಬಿಸಿ ಅವರಿಗೆ ಜಾಮೀನು ದೊರೆಯುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.
ಚಟರ್ಜಿ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿ ವಿಚಾರಣೆ ನಡೆಸಬಹುದೇ ಎಂದು ಜಾರಿ ನಿರ್ದೇಶನಾಲಯವನ್ನು (ಇಡಿ) ಪೀಠ ಪ್ರಶ್ನಿಸಿತು. "ನಿಮ್ಮ ಪ್ರಕಾರ ಅವರು ಶಿಕ್ಷೆಯ ಪ್ರಮಾಣದ ಅರ್ಧದಷ್ಟನ್ನು ಅನುಭವಿಸಿದ ನಂತರವಷ್ಟೇ ಜಾಮೀನು ಪಡೆಯಬೇಕೆ?" ಎಂದು ಇ ಡಿಯನ್ನು ಸಹ ಕುಟುಕಿತು. ಅವರನ್ನು ಹೀಗೆ ದೀರ್ಘ ಕಾಲ ಸೆರೆಯಲ್ಲಿಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿತು.
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್ ಚಟರ್ಜಿ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡುವ ವಿಚಾರವಾಗಿ ಭಿನ್ನ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ ವರ್ಗವಾಗಿದ್ದು ವಿಚಾರಣೆ ನಡೆಯಬೇಕಿದೆ.