satish reddy 
ಸುದ್ದಿಗಳು

ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ವಿರುದ್ಧ ಸುದ್ದಿ ಪ್ರಕಟಿಸದಂತೆ 8 ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸಿದ ನ್ಯಾಯಾಲಯ

ದಿ ಟೈಮ್ಸ್‌ ಆಫ್‌ ಇಂಡಿಯಾ, ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ, ದಿ ನ್ಯೂಸ್‌ ಮಿನಿಟ್‌ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯ ಪ್ರತಿಬಂಧಕಾದೇಶ ಹೊರಡಿಸಿದೆ.

Bar & Bench

ಕೋವಿಡ್‌ ವ್ಯಾಪಿಸಿದ್ದ ಸಂದರ್ಭದಲ್ಲಿ ಸ್ಫೋಟಗೊಂಡಿದ್ದ ಬೆಂಗಳೂರು ಬೆಡ್‌ ಬ್ಲಾಕಿಂಗ್‌ ದಂಧೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಅವರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ಎಂಟು ಮಾಧ್ಯಮ ಸಂಸ್ಥೆಗಳು ಮತ್ತು ಫೇಸ್‌ಬುಕ್‌ಗೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌, ಬೆನೆಟ್‌ ಕಾಲ್ಮನ್‌ ಅಂಡ್‌ ಕಂಪೆನಿ, ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌ (ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಮಾತೃ ಸಂಸ್ಥೆ), ಸ್ಪುಂಕ್ಲೇನ್ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ (ದಿ ನ್ಯೂಸ್‌ ಮಿನಿಟ್)‌, ವಿಆರ್‌ಎಲ್‌ ಮೀಡಿಯಾ ಲಿಮಿಟೆಡ್‌ (ವಿಜಯವಾಣಿ), ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ (ಉದಯವಾಣಿ), ಸಂಯುಕ್ತ ಕರ್ನಾಟಕ, ಪ್ರತಿಧ್ವನಿ, ಫೇಸ್‌ಬುಕ್‌ ಇಂಡಿಯಾ ಮತ್ತು ಫೇಸ್‌ಬುಕ್‌ ಮೂಲಸಂಸ್ಥೆಗಳು ರೆಡ್ಡಿ ಅವರ ವಿರುದ್ಧ ಯಾವುದೇ ತೆರನಾದ ಸುದ್ದಿ ಪ್ರಕಟಿಸಬಾರದು ಎಂದು ನ್ಯಾಯಾಲಯ ಹೇಳಿದೆ.

40ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವೀಣಾ ಎಂ ನಾಯ್ಕರ್‌ ಅವರು “ಮಧ್ಯಂತರ ಪ್ರತಿಬಂಧಕಾದೇಶ ಜಾರಿಯಲ್ಲಿರುವವರೆಗೆ ಇಂಟರ್ನೆಟ್‌ ಅಥವಾ ಟಿವಿ ಇಲ್ಲವೇ ಇನ್ನಾವುದೇ ಮಾಧ್ಯಮಗಳ ಮೂಲಕ ಲೇಖನ, ವರದಿ, ವಿಡಿಯೊ ಇತ್ಯಾದಿಗಳನ್ನು ಪ್ರಕಟಣೆ, ಪ್ರಸಾರ, ಪ್ರದರ್ಶನ, ಹಂಚಿಕೆ ಮಾಡದಂತೆ ನಿರ್ಬಂಧಿಸಲಾಗಿದೆ” ಎಂದು ಆದೇಶಿಸಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಆರೋಪಿಸಿದ್ದ ಬೆಡ್‌ ಬ್ಲಾಕಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬು ಎಂಬಾತನ ಬಂಧನವಾಗಿತ್ತು. ಆರೋಪಿ ಬಾಬು ಮತ್ತು ಸತೀಶ್‌ ರೆಡ್ಡಿ ಅವರ ನಡುವೆ ಸಂಪರ್ಕವಿದೆ ಎಂದು ವರದಿ ಪ್ರಕಟಿಸಿದ್ದ ದಿ ನ್ಯೂಸ್‌ ಮಿನಿಟ್‌, ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರತಿಧ್ವನಿ ವಿರುದ್ಧ ರೂ 20 ಕೋಟಿ ಮಾನಹಾನಿ ಪ್ರಕರಣವನ್ನು ರೆಡ್ಡಿ ದಾಖಲಿಸಿದ್ದರು.

ದೂರು ಅಥವಾ ಆರೋಪ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿದ್ದರೂ ಮಾಧ್ಯಮ ಸಂಸ್ಥೆಗಳು ತಮ್ಮ ಹೆಸರನ್ನು ತಳುಕು ಹಾಕಿ ವರದಿ ಪ್ರಕಟಿಸುವ ಮೂಲಕ ತಮ್ಮನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿವೆ ಎಂದು ರೆಡ್ಡಿ ವಾದಿಸಿದ್ದಾರೆ. ಮೇಲ್ನೋಟಕ್ಕೆ ರೆಡ್ಡಿ ವಾದದಲ್ಲಿ ಹುರುಳಿದೆ ಎಂದು ಪರಿಗಣಿಸಿರುವ ನ್ಯಾಯಾಲಯವು ಮಧ್ಯಂತರ ಪರಿಹಾರಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಆದೇಶ ಮಾಡಿದೆ.