ಬೆಡ್‌ ಬ್ಲಾಕಿಂಗ್‌ ದಂಧೆ: ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಸೆಷನ್ಸ್‌ ನ್ಯಾಯಾಲಯ

ಕೋವಿಡ್‌ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಹಂಚಿಕೆ ಮಾಡಲು ಲಂಚ ಪಡೆಯಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಮಿತ್ರರು, ಖಾಸಗಿ ಏಜೆಂಟರುಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು
ಬೆಡ್‌ ಬ್ಲಾಕಿಂಗ್‌ ದಂಧೆ: ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಸೆಷನ್ಸ್‌ ನ್ಯಾಯಾಲಯ

ಬೆಡ್‌ ಬ್ಲಾಕಿಂಗ್‌ ಹಗರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಸೆಷನ್ಸ್‌ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಬಿ ವೆಂಕಟೇಶ್‌ ಅವರು ಕೋವಿಡ್‌ ವಾರ್‌ ರೂಮ್‌ನಲ್ಲಿ ಕೋವಿಡ್‌ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಿ ರೆಹಾನ್‌ ಶಹೀದ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ‌ ಶಶಿಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿಗಳನ್ನು ವಿಪತ್ತು ನಿರ್ವಹಣಾ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಕಳೆದ ಮೇ 5ರಂದು ಜಯನಗರ ಪೊಲೀಸರು ಬಂಧಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.

ಆರೋಪಿಗಳು ಅಗತ್ಯವಿರುವ ರೋಗಿಗಳಿಂದ ಹಣ ಪಡೆದು ಆಸ್ಪತ್ರೆಯಲ್ಲಿ ದಾಖಲಿಸುವ ಸಲುವಾಗಿ ಬೆಡ್‌ ಬ್ಲಾಕಿಂಗ್ ಮಾಡುತ್ತಿದ್ದರು ಎಂದು ಅರೋಪಿಸಲಾಗಿದ್ದರೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸಲಾಗಿಲ್ಲ. ಯಾರಿಂದ ಹಣ ಪಡೆದಿದ್ದಾರೆ ಎನ್ನುವುದನ್ನು ಅಧಿಕೃತವಾಗಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಧೀಶರು ಹೇಳಿದರು.

ಆರೋಪಿಗಳಿಗೆ ತಲಾ ರೂ. 50 ಸಾವಿರ ವೈಯಕ್ತಿಕ ಭದ್ರತೆಯನ್ನು ಪಡೆದು ಜಾಮೀನು ಮಂಜೂರು ಮಾಡಲಾಗಿದ್ದು, ಹದಿನೈದು ದಿನಗಳಿಗೊಮ್ಮೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಕೋವಿಡ್‌ ಆಸ್ಪತ್ರೆಗಳಲ್ಲಿ ಅಗತ್ಯ ಇರುವ ರೋಗಿಗಳಿಗೆ ಹಾಸಿಗೆ ಹಂಚಿಕೆ ಮಾಡಲು ಲಂಚ ಪಡೆಯಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಮಿತ್ರರು ಹಾಗೂ ಕೆಲವು ಖಾಸಗಿ ಏಜೆಂಟ್‌ಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಕೃತಕ ಹಾಸಿಗೆ ಸಮಸ್ಯೆ ತಲೆದೋರಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಆರೋಪಿಸಿದ್ದರು.

Also Read
ಬೆಡ್‌ ಬ್ಲಾಕಿಂಗ್ ಹಗರಣ: ಹಿರಿಯ ಐಪಿಎಸ್‌ ಅಧಿಕಾರಿಯಿಂದ ತನಿಖೆಯ ನಿರಂತರ ಮೇಲ್ವಿಚಾರಣೆಗೆ ಹೈಕೋರ್ಟ್‌ ಆದೇಶ

“ನಾವು ಯಾವುದೇ ಕಮಿಷನ್‌ ದಂಧೆಯಲ್ಲಿ ಪಾಲ್ಗೊಂಡಿಲ್ಲ. ತೇಜಸ್ವಿ ಸೂರ್ಯ ಅವರು ಆರೋಪಿಸಿದ ಹಿನ್ನೆಲೆಯಲಿ ಪ್ರಕರಣದಲ್ಲಿ ನಮ್ಮನ್ನು ಬಲಿಪಶುಗಳನ್ನಾಗಿಸಲಾಗಿದೆ. ವಾರ್‌ ರೂಮ್‌ ಕಾರ್ಯಾಚರಣೆ ಮತ್ತು ಹಾಸಿಗೆ ಹಂಚಿಕೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗೆ ಇರಲಿಲ್ಲ. ರಾಜಕೀಯ ಕಾರಣಕ್ಕಾಗಿ ತಪ್ಪಾಗಿ ನಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ” ಎಂದು ಅರ್ಜಿದಾರರು ವಾದಿಸಿದ್ದರು.

ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಕೃತ್ಯದಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಸರ್ಕಾರಿ ಅಭಿಯೋಜಕರು ಬಲವಾಗಿ ವಿರೋಧಿಸಿದರು. ಶಹೀದ್‌ ಅವರನ್ನು ಮುಜಾಫರ್ ಅಹ್ಮದ್‌ ಮತ್ತು ಅಸೋಸಿಯೇಟ್ಸ್‌ ಹಾಗೂ ಶಶಿಕುಮಾರ್‌ ಅವರನ್ನು ಪ್ರತೀಕ್‌ ಚಂದ್ರಮೌಳಿ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com