Tejasvi Surya 
ಸುದ್ದಿಗಳು

ಕೋವಿಡ್ ಹಾಸಿಗೆ ಹಗರಣ: ಸಂಸದ ತೇಜಸ್ವಿ ಸೂರ್ಯ ಆರೋಪ ಕುರಿತು ತನಿಖೆ ನಡೆಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಆದೇಶ

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಮುಂದಿನ ವಿಚಾರಣೆ ಹೊತ್ತಿಗೆ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತು.

Bar & Bench

ಕೋವಿಡ್‌ ಹಾಸಿಗೆ ಹಗರಣ ಸಂಬಂಧ ಬಿಜೆಪಿ ಸಂಸದ ಮತ್ತು ವಕೀಲ ತೇಜಸ್ವಿ ಸೂರ್ಯ ಅವರು ಮಾಡಿರುವ ಆರೋಪಗಳ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ಬಿಬಿಎಂಪಿಗೆ ಗುರುವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಭಾಗೀಯ ಪೀಠ ಮೇ 11 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಅಷ್ಟರೊಳಗೆ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ಪಾಲಿಕೆಗೆ ನಿರ್ದೇಶಿಸಿತು.

ಕೋವಿಡ್‌ ಉಲ್ಬಣಗೊಂಡಿರುವ ಸಮಯದಲ್ಲಿ ಬಿಬಿಎಂಪಿ ಮತ್ತು ಆಸ್ಪತ್ರೆಯ ಅಧಿಕಾರಿಗಳು ಹಣಗಳಿಸುವ ಉದ್ದೇಶದಿಂದ ನಕಲಿ ಹೆಸರಿನಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುತ್ತಿದ್ದಾರೆ. ಇದರಿಂದ ರಾಜ್ಯದ ರಾಜಧಾನಿಯಲ್ಲಿ ಕೋವಿಡ್‌ ರೋಗದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಆರೈಕೆ ಮತ್ತು ಆಸ್ಪತ್ರೆ ಹಾಸಿಗೆಗಳು ದೊರೆಯುತ್ತಿಲ್ಲ. ಕನಿಷ್ಠ 4,065 ಹಾಸಿಗೆಗಳನ್ನು ನಕಲಿ ಹೆಸರುಗಳಲ್ಲಿ ಕಾಯ್ದಿರಿಸಲಾಗಿದೆ ಎಂದು ಸಂಸದ ಆರೋಪಿಸಿದ್ದರು. ಆದರೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಿಬಿಎಂಪಿ ನೌಕರರು ಹಾಗೂ ಹೊರಗುತ್ತಿಗೆಯಡಿ ಕೋವಿಡ್‌ ವಾರ್‌ರೂಂನಲ್ಲಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ನಿರ್ದಿಷ್ಟವಾಗಿ ಆರೋಪ ಮಾಡಿದ್ದರಿಂದಾಗಿ ತೇಜಸ್ವಿ ಅವರ ಮಾತುಗಳು ವಿವಾದಕ್ಕೀಡಾಗಿದ್ದವು.

ಗುರುವಾರ ಕೋವಿಡ್‌ ಪ್ರಕರಣಗಳ ನಿರ್ವಹಣೆ ಕುರಿತಂತೆ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುತ್ತಿದ್ದ ವೇಳೆ ವಕೀಲ ಜಿ.ಆರ್.ಮೋಹನ್ ಹಾಸಿಗೆ ಹಗರಣವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ನ್ಯಾಯಾಲಯ ”ನಗರದಲ್ಲಿ ಹಾಸಿಗೆಗಳ ಲಭ್ಯತೆ ತುಂಬಾ ಗಂಭೀರ ಸ್ಥಿತಿಗೆ ತಲುಪಿದೆ” ಎಂದಿತು.

ಬಿಬಿಎಂಪಿ ಪರ ಹಾಜರಾದ ವಕೀಲ ಶೀನಿಧಿ ಅವರು " ವಾರ್ಡ್ ಮಟ್ಟದಲ್ಲಿ ಆಮ್ಲಜನಕ ಲಭ್ಯವಾಗುವಂತೆ ಮಾಡಲು ಮುಖ್ಯ ಆಯುಕ್ತರು ಯುದ್ಧೋಪಾದಿಯಲ್ಲಿ ಹೆಜ್ಜೆ ಇರಿಸಿದ್ದಾರೆ. ಈಗ ಆಸ್ಪತ್ರೆಗಳಲ್ಲಿ ಎಷ್ಟು ಆಮ್ಲಜನಕ ಲಭ್ಯ ಇದೆ ಮತ್ತು ಎಷ್ಟು ಬೇಕು ಎಂದು ಕಂಡುಹಿಡಿಯಲು ನಾವು ವಾರ್ಡ್ ಮಟ್ಟಕ್ಕೆ ಇಳಿದಿದ್ದೇವೆ. ಆಮ್ಲಜನಕ ವ್ಯವಸ್ಥೆಯಿರುವ 233 ಹಾಸಿಗೆಗಳ 12 ಹೆರಿಗೆ ಆಸ್ಪತ್ರೆಗಳನ್ನು ನಾವು ಪ್ರಸ್ತುತ ಸುಪರ್ದಿಗೆ ಪಡೆಯುತ್ತಿದ್ದೇವೆ. ಅಲ್ಲದೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 100 ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳನ್ನು ಒದಗಿಸುತ್ತಿದ್ದೇವೆ” ಎಂದು ಅವರು ಹೇಳಿದರು.