A1
A1
ಸುದ್ದಿಗಳು

ಗುಜರಾತ್ ರಾಷ್ಟ್ರೀಯ ಕಾನೂನು ವಿವಿ ಪುನರಾರಂಭವಾದ ಕೆಲ ದಿನಗಳಲ್ಲೇ ಕೋವಿಡ್ ಉಲ್ಬಣ: ವಿದ್ಯಾರ್ಥಿಗಳು ಮನೆಗೆ

Bar & Bench

ಇದೇ ಏಪ್ರಿಲ್ 4ರಿಂದ ಭೌತಿಕ ತರಗತಿಗಳನ್ನು ಪುನರಾರಂಭಿಸಿದ್ದ ಗುಜರಾತ್‌ನ ಗಾಂಧಿನಗರದಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ- ಜಿಎನ್‌ಎಲ್‌ಯು ಕೋವಿಡ್‌ ಪ್ರಕರಣಗಳ ಉಲ್ಬಣದಿಂದಾಗಿ ಮತ್ತೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಬಾಗಿಲು ಹಾಕುತ್ತಿದೆ.

60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಫೆಬ್ರವರಿ 19 ರಿಂದ ಭೌತಿಕ ಹಾಗೂ ವರ್ಚುವಲ್‌ ತರಗತಿಗಳೆರಡಕ್ಕೂ ಅವಕಾಶ ನೀಡುವ ಹೈಬ್ರಿಡ್ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿವಿ ವಿದ್ಯಾರ್ಥಿಗಳು ಬಯಸಿದಲ್ಲಿ ಕ್ಯಾಂಪಸ್‌ಗೆ ಹಿಂತಿರುಗುವ ಆಯ್ಕೆ ನೀಡಿತ್ತು.

ಇತ್ತೀಚೆಗೆ ಗುಜರಾತ್‌ನ ಇತರೆ ವಿವಿಗಳು ಭೌತಿಕವಾಗಿ ತರಗತಿಗಳನ್ನು ಆರಂಭಿಸಿದ್ದರಿಂದ ಜಿಎನ್‌ಎಲ್‌ಯು ಕೂಡ ಏಪ್ರಿಲ್ 4 ರಿಂದ ಭೌತಿಕ ತರಗತಿಗಳನ್ನು ಆರಂಭ ಮಾಡಿತ್ತು.

ಪ್ರಸ್ತುತ ಋಣಾತ್ಮಕ ಆರ್‌ಟಿ-ಪಿಸಿಆರ್‌ ವರದಿ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಮರಳಲು ಟಿಕೆಟ್‌ ಕಾಯ್ದಿರಿಸುವಲ್ಲಿ ಮಗ್ನರಾಗಿದ್ದಾರೆ. ಅಂತೆಯೇ ವಿದ್ಯಾರ್ಥಿಗಳ ಅಸೈನ್ಮೆಂಟ್‌ ಸಲ್ಲಿಕೆ, ಸೆಮಿನಾರ್‌ ಪೇಪರ್‌ ಪ್ರಸ್ತುತಿ ಇತ್ಯಾದಿ ಚಟುವಟಿಕೆಗಳ ದಿನಾಂಕ ವಿಸ್ತರಿಸಿ ವಿವಿ ಆಡಳಿತ ಇಮೇಲ್‌ ರವಾನಿಸಿದೆ.