The Ashok, Delhi High Court
The Ashok, Delhi High Court 
ಸುದ್ದಿಗಳು

ಆಸ್ಪತ್ರೆಗೆ ದಾಖಲಿಸಲು ಕೇಳಿದ್ದೇವೆಯೇ ಹೊರತು ಪಂಚತಾರಾ ಕೋವಿಡ್‌ ವ್ಯವಸ್ಥೆ ಕೇಳಿಲ್ಲ: ದೆಹಲಿ ಹೈಕೋರ್ಟ್‌

Bar & Bench

ಕೋವಿಡ್‌ಗೆ ಚಿಕಿತ್ಸೆ ಪಡೆಯಲು ತನ್ನ ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಪಂಚತಾರಾ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ ಎಂಬ ವಿಚಾರವನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಅಲ್ಲಗಳೆದಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಚಾಣಕ್ಯಪುರಿಯಲ್ಲಿರುವ ಅಶೋಕ ಹೋಟೆಲ್‌ನಲ್ಲಿ 100 ಕೊಠಡಿಗಳನ್ನು ನಿಗದಿಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠವು ಮೇಲಿನಂತೆ ಹೇಳಿದೆ.

ಈ ಸಂಬಂಧ ಹೈಕೋರ್ಟ್‌ನಿಂದ ಮನವಿ ಸ್ವೀಕರಿಸಲಾಗಿದೆ ಎಂದು ಚಾಣಕ್ಯಪುರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಗೀತಾ ಗ್ರೋವರ್ ಆದೇಶದಲ್ಲಿ ನಿರ್ದೇಶಿಸಿದ್ದಾರೆ. “…ತತ್‌ಕ್ಷಣ ಜಾರಿಯಾಗುವಂತೆ ದೆಹಲಿಯ ಚಾಣಕ್ಯಪುರಿಯ ಸಮೀಪವಿರುವ ಪ್ರೈಮಸ್‌ ಆಸ್ಪತ್ರೆಯ ಬಳಿ ಗೌರವಾನ್ವಿತ ನ್ಯಾಯಮೂರ್ತಿಗಳು ಮತ್ತು ದೆಹಲಿ ಹೈಕೋರ್ಟ್‌ನ ಇತರೆ ನ್ಯಾಯಾಂಗ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರ ಬಳಕೆಗಾಗಿ ಕೋವಿಡ್ ಆರೋಗ್ಯ ಸೌಲಭ್ಯ ಕಲ್ಪಿಸಲು ನವದೆಹಲಿಯ ಅಶೋಕ ಹೋಟೆಲ್‌ನ 100 ಕೊಠಡಿಗಳು ಅಗತ್ಯವಿದೆ” ಎಂದು ಉಪವಿಭಾಗೀಯ ಅಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಆರ್ಭಟದಿಂದ ಸೃಷ್ಟಿಯಾಗಿರುವ ಆಮ್ಲಜನಕ ಕೊರತೆ ಮತ್ತಿತರ ವಿಚಾರಗಳ ಕುರಿತಾದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮಂಗಳವಾರ ಉಪವಿಭಾಗೀಯ ಅಧಿಕಾರಿ ಹೊರಡಿಸಿರುವ ಆದೇಶವು ದಾರಿ ತಪ್ಪಿಸುವಂತಿದೆ ಎಂದಿದೆ.

ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗುವುದು ಎಂದಿರುವ ಪೀಠವು ಆಸ್ಪತ್ರೆಗೆ ದಾಖಲು ಮಾಡಲು ವ್ಯವಸ್ಥೆ ಮಾಡುವಂತೆ ಮಾತ್ರ ಕೇಳಲಾಗಿದೆ ಎಂದು ಸ್ಪಷ್ಟಪಡಿಸಿದೆ. “ಇದು ಖಂಡಿತವಾಗಿಯೂ ದಾರಿ ತಪ್ಪಿಸುವಂತಿದೆ. ಈ ಕುರಿತು ಹೈಕೋರ್ಟ್‌ ಯಾವುದೇ ಮನವಿ ಸಲ್ಲಿಸಿಲ್ಲ” ಎಂದು ಪೀಠ ಹೇಳಿದೆ.

“ಆಸ್ಪತ್ರೆಗೆ ದಾಖಲಿಸುವ ಸ್ಥಿತಿ ಉದ್ಭವವಾದರೆ ಅದನ್ನು ಕಲ್ಪಿಸಿ ಎಂದಷ್ಟೇ ನಾವು ಕೇಳಿದ್ದೇವೆ. ಇದನ್ನು ಈ ಆದೇಶದ ಮೂಲಕ ಹೇಳಬೇಕಾಗಿದೆ… ಅದನ್ನು ಬಿಂಬಿಸುತ್ತಿರುವುದು ಹೇಗೆ?... ನಮಗೆ ಅನುಕೂಲ ಕಲ್ಪಿಸಲೋ ಅಥವಾ ನಮ್ಮನ್ನು ಓಲೈಸಲು ಹೀಗೆ ಮಾಡುತ್ತಿದ್ದೀರೋ?” ಎಂದು ಪೀಠ ಖಾರವಾಗಿ ಪ್ರಶ್ನಿಸಿದೆ.

ಮಾಧ್ಯಮಗಳು ದುರುದ್ದೇಶಪೂರಿತವಾಗಿ ವರದಿ ಮಾಡಿವೆ ಎಂದು ದೆಹಲಿ ಸರ್ಕಾರ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ರಾಹುಲ್‌ ಮೆಹ್ರಾ ಹೇಳಿದರು. ಇದಕ್ಕೆ ನ್ಯಾಯಾಲಯವು “ಸಂಸ್ಥೆಯಾಗಿ ನಾವು ನಿಮಗೆ ನಮಗೆ ಇಷ್ಟು ಹಾಸಿಗೆಗಳ ಸೌಲಭ್ಯ ಕಲ್ಪಿಸಿ ಎಂದು ಆದೇಶಿಸುತ್ತೇವೆಯೇ… ಇದು ಪ್ರಾಥಮಿಕವಾಗಿ ತಾರತಮ್ಯದಿಂದ ಕೂಡಿದೆ ಎಂದೆನಿಸುವುದಿಲ್ಲವೇ? ಮಾಧ್ಯಮಗಳು ತಪ್ಪಾಗಿ ವರದಿ ಮಾಡಿಲ್ಲ… ಆದೇಶ ತಪ್ಪಾಗಿದೆ” ಎಂದು ನ್ಯಾಯಾಲಯ ಒತ್ತಿ ಹೇಳಿತು.

ನಿಜಕ್ಕೂ ಹೀಗೆ ಯೋಚಿಸಲು ಸಾಧ್ಯವೇ ಇಲ್ಲ. ಜನರು ರಸ್ತೆಯಲ್ಲಿ ಸಾವನ್ನಪ್ಪುತ್ತಿರುವಾಗ ನಾವು ಸಂಸ್ಥೆಯಾಗಿ ಆದ್ಯತೆ ಪಡೆಯುತ್ತೇವೆಯೇ?
ದೆಹಲಿ ಹೈಕೋರ್ಟ್‌

ವಿಶೇಷವಾಗಿ ಅಧೀನ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ನಡೆಸುವುದನ್ನು ನಿರ್ಬಂಧಗೊಳಿಸಿರುವುದರಿಂದ ನ್ಯಾಯಾಲಯದ ಅಧಿಕಾರಿಗಳಿಗೆ ಒಂದಷ್ಟು ಸೌಲಭ್ಯ ಕಲ್ಪಿಸುವಂತೆ ಸರ್ಕಾರಿ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

“ನಾವು ಈಗಾಗಲೇ ಇಬ್ಬರು ನ್ಯಾಯಿಕ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ” ಎಂದು ಪೀಠ ಹೇಳಿದೆ. “ಸಂಬಂಧವೇ ಇಲ್ಲದ ರೀತಿಯಲ್ಲಿ ನೀವು ಆದೇಶ ಹೊರಡಿಸುತ್ತಿದ್ದೀರಿ. ನಾವು ಅದನ್ನು ಕೇಳಿಯೇ ಇಲ್ಲ. ಆ ಆಸ್ಪತ್ರೆಯೂ ಯಾವುದೇ ಸಿಬ್ಬಂದಿ, ಸಾಮಗ್ರಿ, ಯಾವುದೇ ವೆಂಟಿಲೇಟರ್ , ಯಾವುದೇ ಔಷಧಗಳನ್ನು ಹೊಂದಿಲ್ಲ” ಎಂದಿದೆ.

ಆಕ್ಷೇಪಾರ್ಹವಾದ ಆದೇಶವನ್ನು ಹಿಂಪಡೆಯಲಾಗುವುದು ಎಂದು ದೆಹಲಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ವಕೀಲ ಸಂತೋಷ್‌ ತ್ರಿಪಾಠಿ ಹೇಳಿದ್ದಾರೆ.