Orissa HC, Covid 19

 
ಸುದ್ದಿಗಳು

ಕೋವಿಡ್ ಪ್ರಕರಣಗಳ ದಿಢೀರ್ ಹೆಚ್ಚಳ: ಇಂದಿನಿಂದ ಐದು ದಿನಗಳ ಕಾಲ ಒಡಿಶಾ ಹೈಕೋರ್ಟ್ ಸಂಪೂರ್ಣ ಸ್ಥಗಿತ

ಜನವರಿ 13 ರಿಂದ ಜನವರಿ 17 ರವರೆಗೆ ಹೈಕೋರ್ಟ್ ಮತ್ತು ಅದರ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

Bar & Bench

ಒಡಿಶಾದಲ್ಲಿ ಕೋವಿಡ್‌ ಪ್ರಕರಣಗಳ ದಿಢೀರ್‌ ಏರಿಕೆಯಿಂದಾಗಿ ಮತ್ತು ಹೈಕೋರ್ಟ್‌ ಸಿಬ್ಬಂದಿ ಸಾಂಕ್ರಾಮಿಕದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್‌ ಕಾರ್ಯ ನಿರ್ವಹಣೆ ಐದು ದಿನಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಜನವರಿ 13 ರಿಂದ ಜನವರಿ 17 ರವರೆಗೆ ಹೈಕೋರ್ಟ್ ಮತ್ತು ಅದರ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು ಜ. 18 ರಿಂದ ಪುನರಾರಂಭಗೊಳ್ಳಲಿವೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ (ನ್ಯಾಯಾಂಗ) ಬುಧವಾರ ಹೊರಡಿಸಿದ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ.

ಐದು ದಿನಗಳ ಕಾಲ ಹೈಕೋರ್ಟ್‌ನ ಎಲ್ಲಾ ಪೀಠಗಳು ಸ್ಥಗಿತಗೊಳ್ಳಲಿವೆ. ಜ 18 ರಿಂದ ತುರ್ತು ಪ್ರಕರಣಗಳ ವಿಚಾರಣೆಗಾಗಿ ಎರಡು ಪೀಠಗಳು ಮತ್ತು ಏಳು ಏಕಸದಸ್ಯ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಈ ವ್ಯವಸ್ಥೆಯು ಫೆಬ್ರವರಿ 4 ರವರೆಗೆ ಮುಂದುವರಿಯುತ್ತದೆ.

ಜನವರಿ 10 ರಿಂದ ಫೆಬ್ರವರಿ 4 ರವರೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣಗಳನ್ನು ಆಲಿಸಲು ಒಡಿಶಾ ಹೈಕೋರ್ಟ್‌ ಇತ್ತೀಚೆಗೆ ನಿರ್ಧರಿಸಿತ್ತು.ಸುಪ್ರೀಂ ಕೋರ್ಟ್, ಉತ್ತರಾಖಂಡ, ಗುಜರಾತ್, ಗುವಾಹಟಿ, ಕರ್ನಾಟಕ, ತೆಲಂಗಾಣ, ಪಾಟ್ನಾ, ಜಾರ್ಖಂಡ್, ಮದ್ರಾಸ್, ಬಾಂಬೆ, ಕಲ್ಕತ್ತಾ ಹಾಗೂ ದೆಹಲಿ ಸೇರಿದಂತೆ ವಿವಿಧ ಹೈಕೋರ್ಟ್‌ಗಳು ವರ್ಚುವಲ್‌ ವಿಧಾನದಲ್ಲಿ ಈಗಾಗಲೇ ವಿಚಾರಣೆ ನಡೆಸುತ್ತಿವೆ.