[ಕೋವಿಡ್‌ 3ನೇ ಅಲೆ] ವರ್ಚುವಲ್ ಕಲಾಪದತ್ತ ದೇಶದ ಬಹುತೇಕ ನ್ಯಾಯಾಲಯಗಳು; ಸೋಂಕಿನ ಭೀತಿಯಲ್ಲಿ ನ್ಯಾಯಾಂಗ ಅಧಿಕಾರಿಗಳು

ವಕೀಲರೊಬ್ಬರು ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸಂಪೂರ್ಣ ಭೌತಿಕ ಅಥವಾ ನೇರ ವಿಚಾರಣೆಗೆ ಒಲವು ತೋರಿದ್ದ ಮದ್ರಾಸ್ ಹೈಕೋರ್ಟ್ ಕೂಡ ಸೋಮವಾರದಿಂದ ಹೈಬ್ರಿಡ್ ವಿಧಾನ ಅಳವಡಿಸಿಕೊಂಡಿದೆ.
Virtual Hearing

Virtual Hearing


Published on

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ಚುವಲ್‌ ಇಲ್ಲವೇ ಹೈಬ್ರಿಡ್‌ ವಿಧಾನದಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌, ದೇಶದ ವಿವಿಧ ಹೈಕೋರ್ಟ್‌ಗಳು, ನ್ಯಾಯಮಂಡಳಿಗಳು ಮರಳಿವೆ. ಕಳೆದ ಒಂದು ವಾರದಿಂದ ನ್ಯಾಯಾಲಯಗಳಲ್ಲಿ ಈ ಪರಿವರ್ತನೆ ಕಂಡುಬಂದಿದೆ.

ಚಳಿಗಾಲದ ರಜೆ ಅವಧಿಯ ನಂತರ ಅಂದರೆ ಜ. 3ರಿಂದ ಆರಂಭವಾಗಬೇಕಿದ್ದ ತನ್ನ ಕಲಾಪಗಳನ್ನು ವರ್ಚುವಲ್‌ ವಿಧಾನದ ಮೂಲಕ ನಡೆಸಲು ಸುಪ್ರೀಂಕೋರ್ಟ್‌ ಭಾನುವಾರ ಸುತ್ತೋಲೆ ಹೊರಡಿಸಿತು.

ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಎಸ್‌ಒಪಿ) ಮಾರ್ಗಸೂಚಿ ಹೊರಡಿಸಿತು. ಅದರಂತೆ ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಚಾರಣೆ ಮಾತ್ರ ನಡೆಯಲಿದ್ದು ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಹೈಬ್ರಿಡ್‌ ವಿಚಾರಣೆ ಅವಕಾಶ ಮಾಡಿಕೊಡಲಾಗಿದೆ. ಇಂದಿನಿಂದ ಪರಿಷ್ಕೃತ ಮಾರ್ಗಸೂಚಿ ಕಾರ್ಯಗತಗೊಂಡಿದ್ದು, ಜನವರಿ 14ರವರೆಗೆ ಜಾರಿಯಲ್ಲಿರಲಿದೆ.

ಇತ್ತ ವರ್ಚುವಲ್‌ ವಿಚಾರಣೆ ವೇಳೆ ವಕೀಲರೊಬ್ಬರು ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸಂಪೂರ್ಣ ಭೌತಿಕ ಅಥವಾ ನೇರ ವಿಚಾರಣೆಗೆ ಒಲವು ತೋರಿದ್ದ ಮದ್ರಾಸ್‌ ಹೈಕೋರ್ಟ್‌ ಕೂಡ ಸೋಮವಾರದಿಂದ ಹೈಬ್ರಿಡ್‌ ವಿಧಾನ ಅಳವಡಿಸಿಕೊಳ್ಳುವ ಕುರಿತು ಅಧಿಸೂಚನೆ ಹೊರಡಿಸಿದೆ.

Also Read
ಕೋವಿಡ್‌ 3ನೇ ಅಲೆ: ಹೈಕೋರ್ಟ್‌ನಿಂದ ಪರಿಷ್ಕೃತ ಎಸ್‌ಒಪಿ ಪ್ರಕಟ; ಜ.14ರ ವರೆಗೆ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಚಾರಣೆ

ಅಲಾಹಾಬಾದ್‌ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿಗೆ ಕೋವಿಡ್‌ ಸೋಂಕು ತಗುಲಿದ್ದು ಅವರು ಮಂಗಳವಾರ ಮನೆಗಳಲ್ಲಿಯೇ ಸ್ವಯಂ ಪ್ರತ್ಯೇಕವಾಸದಲ್ಲಿದ್ದಾರೆ. ಉತ್ತರಪ್ರದೇಶದಲ್ಲಿ ಕೋವಿಡ್‌ ಸೋಂಕು ಉಲ್ಬಣಗೊಂಡಿರುವುದರಿಂದ ರಾಜ್ಯ ಹೈಕೋರ್ಟ್‌ನ ಅಲಾಹಾಬಾದ್‌ ಪ್ರಧಾನ ಪೀಠ ಹಾಗೂ ಲಖನೌ ಪೀಠಗಳು ವರ್ಚವಲ್‌ ವಿಧಾನದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ತೀರ್ಮಾನಿಸಿವೆ.

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಹೈಕೋರ್ಟ್‌ ತಕ್ಷಣದಿಂದ ಜಾರಿಗೆ ಬರುವಂತೆ ನೇರ/ಭೌತಿಕ ವಿಚಾರಣೆಯನ್ನು ಅಮಾನತುಗೊಳಿಸಿದೆ. ಆದರೆ ನೇರ ಇಲ್ಲವೇ ವರ್ಚುವಲ್‌ ವಿಧಾನದ ಮೂಲಕ ವಿಚಾರಣೆ ನಡೆಸುವ ನಿರ್ಧಾರವನ್ನು ಅದು ನ್ಯಾಯಾಧೀಶರಿಗೆ ಬಿಟ್ಟಿದೆ.

ಗುಜರಾತ್ ಹೈಕೋರ್ಟ್ ಸೋಮವಾರ ದಾವೆದಾರರು ಮತ್ತು ವಕೀಲರಿಗೆ ಹಲವಾರು ನಿರ್ದೇಶನಗಳನ್ನು ನೀಡಿದ್ದು ಬುಧವಾರದಿಂದ ಅದು ಜಾರಿಗೆ ಬಂದಿದೆ. ಕೈ ಕುಲುಕುವುದು, ಕೈ ಹಿಡಿದು ಅಭಿನಂದಿಸದಂತೆ ವಕೀಲರುಗಳಿಗೆ ಅದು ಸೂಚಿಸಿದೆ.

Also Read
[ಕೋವಿಡ್‌] ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮುಂದೂಡಲು ಪ್ರಧಾನಿ ಮೋದಿ, ಆಯೋಗಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಮನವಿ

ಬಿಹಾರದ ಕೆಲವು ನ್ಯಾಯಮೂರ್ತಿಗಳು ಮತ್ತು ಸಿಬ್ಬಂದಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಜ. 4ರಿಂದ ಪ್ರಕರಣಗಳನ್ನು ವರ್ಚುವಲ್‌ ವಿಧಾನದ ಮೂಲಕ ಮಾತ್ರವೇ ವಿಚಾರಣೆ ನಡೆಸಲು ಪಾಟ್ನಾ ಹೈಕೋರ್ಟ್‌ ಭಾನುವಾರ ನಿರ್ಧರಿಸಿತ್ತು.

ಕಳೆದ 48 ಗಂಟೆಗಳಲ್ಲಿ ಕೋವಿಡ್‌ ಪ್ರಕರಣಗಳು ಘಾತೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ ಬೆನ್ನಿಗೆ ಬಾಂಬೆ ಹೈಕೋರ್ಟ್‌ ಮುಂದಿನ ಆದೇಶದವರೆಗೆ ಜಾರಿಗೆ ಬರುವಂತೆ ಜ. 4ರಂದು ವರ್ಚುವಲ್‌ ವಿಧಾನಕ್ಕೆ ಹೊರಳಲು ನಿರ್ಧರಿಸಿದೆ. ಅಲ್ಲಿನ ಮೂವರು ನ್ಯಾಯಮೂರ್ತಿಗಳಿಗೆ ಕೋವಿಡ್‌ ತಗುಲಿದ್ದು ಅವರು ಕ್ವಾರೆಂಟೈನ್‌ನಲ್ಲಿದ್ದಾರೆ.

Also Read
ಕೋವಿಡ್‌ ಪರಿಹಾರ: ಆನ್‌ಲೈನ್‌ ಪೋರ್ಟಲ್‌ ಆರಂಭಿಸಿ ವ್ಯಾಪಕ ಪ್ರಚಾರ ನೀಡಲು ರಾಜ್ಯಗಳಿಗೆ ಸುಪ್ರೀಂ ಸೂಚನೆ

ಜಾರ್ಖಂಡ್‌ನಲ್ಲಿ ಕೋವಿಡ್‌ ಪ್ರಕರಣಗಳು ದಿಢೀರನೆ ಏರಿಕೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಹೈಕೋರ್ಟ್‌ ಜ. 3ರಿಂದ 14ರವರೆಗೆ ವರ್ಚುವಲ್‌ ವಿಧಾನದಲ್ಲಿ ಕಲಾಪ ನಡೆಸಲು ತೀರ್ಮಾನಿಸಿದೆ.

ಕೋವಿಡ್‌ ಮೂರನೆ ಅಲೆ ಕಾರಣಕ್ಕೆ ಜನವರಿ ಮೂರರಿಂದ ಸಂಪೂರ್ಣವಾಗಿ ವರ್ಚುವಲ್‌ ವಿಧಾನದ ಕಲಾಪಗಳಿಗೆ ಬದಲಾಗಿರುವ ಕಲ್ಕತ್ತಾ ಹೈಕೋರ್ಟ್‌, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಕೇಸ್ ಡೈರಿಯೊಂದಿಗೆ ಹಾಜರಾಗಬೇಕಾದ ಜಾಮೀನು ಪ್ರಕರಣಗಳಲ್ಲಿ ಹಾಗೂ ಸರ್ಕಾರಿ ಮತ್ತಿತರ ವಕೀಲರು ನ್ಯಾಯಾಲಯದಲ್ಲಿ ದಾಖಲೆಗಳನ್ನು ನೇರವಾಗಿ ಸಲ್ಲಿಸಬೇಕಾದ ಸಂದರ್ಭದಲ್ಲಿ ಮಾತ್ರ ಭೌತಿಕವಾಗಿ ಉಪಸ್ಥಿತರಿರುವಂತೆ ಸೂಚಿಸಿದೆ.

ದೇಶದ ರಾಜಧಾನಿಯಲ್ಲಿ ಕೋವಿಡ್‌ ಸಂಬಂಧ ಹಳದಿ ಅಲರ್ಟ್‌ ಘೋಷಿಸಿದ ಹಿನ್ನೆಲೆಯಲ್ಲಿ ಜನವರಿ 3, 2022 ರಿಂದ ಜನವರಿ 15, 2022 ರವರೆಗೆ ಸಂಪೂರ್ಣ ವರ್ಚುವಲ್ ವಿಚಾರಣೆಗೆ ಹಿಂತಿರುಗಿಸಲು ದೆಹಲಿ ಹೈಕೋರ್ಟ್ ನಿರ್ಧರಿಸಿದೆ. ದೆಹಲಿಯ ಜಿಲ್ಲಾ ನ್ಯಾಯಾಲಯಗಳು ಕೂಡ ಈ ಅವಧಿಯಲ್ಲಿ ವರ್ಚುವಲ್ ಮೋಡ್ ಮೂಲಕ ಪ್ರಕರಣಗಳನ್ನು ವಿಚಾರಣೆ ನಡೆಸುತ್ತವೆ ಎಂದು ಡಿ. 30ರಂದು ಹೈಕೋರ್ಟ್ ಹೊರಡಿಸಿದ ಕಚೇರಿ ಆದೇಶ ತಿಳಿಸಿದೆ.

ವರ್ಚುವಲ್‌ ವಿಧಾನಕ್ಕೆ ಹೊರಳಿದ ನ್ಯಾಯಮಂಡಳಿ/ ಅರೆ ನ್ಯಾಯಿಕ ಸಂಸ್ಥೆಗಳು

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಎಲ್ಲಾ ಪೀಠಗಳು ಜನವರಿ 3, 2022 ರಿಂದ ಜನವರಿ 31, 2022ರವರೆಗೆ ವರ್ಚುವಲ್ ವಿಧಾನದಲ್ಲಿ ಪ್ರಕರಣಗಳನ್ನು ಆಲಿಸುತ್ತಿವೆ. ಈ ಕುರಿತು ಡಿ. 31ರಂದೇ ನ್ಯಾಯಮಂಡಳಿ ತೀರ್ಮಾನ ತೆಗೆದುಕೊಂಡಿತ್ತು.

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಕೂಡ ಇದೇ ಜನವರಿ 21ರವರೆಗೆ ಜಾರಿಗೆ ಬರುವಂತೆ ವರ್ಚುವಲ್‌ ವಿಧಾನಕ್ಕೆ ಮರಳಲು ಮಂಗಳವಾರ ನಿರ್ಧಾರ ಕೈಗೊಂಡಿದೆ.

Kannada Bar & Bench
kannada.barandbench.com