Supreme Court of India

 
ಸುದ್ದಿಗಳು

ರಿಜಿಸ್ಟ್ರಿಯ 150ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್: ಸುಪ್ರೀಂಗೆ ತೆರಳುವ ಬಗ್ಗೆ ವಕೀಲರಿಗೆ ಎಸ್‌ಸಿಬಿಎ ಎಚ್ಚರಿಕೆ

ಸುಪ್ರೀಂಕೋರ್ಟ್‌ನ ಕನಿಷ್ಠ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ಸೋಂಕು ತಗುಲಿದ್ದು ಇಂದಿನಿಂದ ನಿರ್ಬಂಧಿತ ವಿಧಾನದಲ್ಲಿ ಕಾರ್ಯನಿರ್ವಹಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

Bar & Bench

ಸುಪ್ರೀಂಕೋರ್ಟ್‌ನ ಕನಿಷ್ಠ 150 ರಿಜಿಸ್ಟ್ರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್‌ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಅತಿ ಭದ್ರತಾ ವಲಯವನ್ನು ಪ್ರವೇಶಿಸದಂತೆ ನ್ಯಾಯವಾದಿಗಳಿಗೆ ಸುಪ್ರೀಂಕೋರ್ಟ್‌ ವಕೀಲರ ಸಂಘ ಎಸ್‌ಸಿಬಿಎ ಎಚ್ಚರಿಕೆ ನೀಡಿದೆ.

ಪ್ರಾಕ್ಸಿಮಿಟಿ ಕಾರ್ಡ್‌ ಬಳಸಿ ಅತಿ ಭದ್ರತಾ ವಲಯಕ್ಕೆ ವಕೀಲರು ಪ್ರವೇಶಿಸಬಾರದು ಎಂದು ನ್ಯಾಯಾಲಯ ಯಾವುದೇ ಅಧಿಕೃತ ಸುತ್ತೋಲೆ ಅಥವಾ ಸೂಚನೆ ನೀಡದಿದ್ದರೂ ತೀರಾ ಅವಶ್ಯಕತೆ ಇಲ್ಲದಿದ್ದರೆ ಆ ವಲಯ ಪ್ರವೇಶಿಸದಿರುವುದು ಸೂಕ್ತ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಯಾವುದೇ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಂವಹನಕ್ಕಾಗಿ ಇಂದು ಕೋರ್ಟ್ ರಿಜಿಸ್ಟ್ರಿ ಸಹಾಯವಾಣಿ ಸಂಖ್ಯೆಗಳನ್ನು ನೀಡಲಿದೆ ಎಂದು ಅದು ಹೇಳಿದೆ. ಇತ್ತ ಸುಪ್ರೀಂಕೋರ್ಟ್‌ನ ಕನಿಷ್ಠ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ಸೋಂಕು ತಗುಲಿದ್ದು ಇಂದಿನಿಂದ ನಿರ್ಬಂಧಿತ ವಿಧಾನದಲ್ಲಿ ಕಾರ್ಯನಿರ್ವಹಿಸಲು ನ್ಯಾಯಾಲಯ ಈಗಾಗಲೇ ನಿರ್ಧರಿಸಿದೆ. ಈ ಸಂಬಂಧ ಜನವರಿ 6 ರಂದು ಹೊರಡಿಸಿದ್ದ ಪ್ರಕಟಣೆಯ ಪ್ರಕಾರ ಇಂದಿನಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ತಮ್ಮ ಮನೆಗಳಿಂದಲೇ ವರ್ಚುವಲ್‌ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಮುಖ್ಯವಾಗಿ, ಅತ್ಯಂತ ತುರ್ತು ಉಲ್ಲೇಖದ ಪ್ರಕರಣಗಳು, ಹೊಸ ಪ್ರಕರಣಗಳು, ಜಾಮೀನು ಪ್ರಕರಣಗಳು, ತಡೆಯಾಜ್ಞೆ ಪ್ರಕರಣಗಳು, ಬಂಧನದ ಪ್ರಕರಣಗಳು ಹಾಗೂ ನಿಗದಿತ ದಿನಾಂಕದ ಪ್ರಕರಣಗಳು ಇಂದಿನಿಂದ ವಿಚಾರಣೆಗೆ ಬರಲಿವೆ.

ಕೋವಿಡ್‌ ಉಲ್ಬಣದಿಂದಾಗಿ ಹಲವು ಹೈಕೋರ್ಟ್‌ಗಳು ವೀಡಿಯೊ ಕಾನ್ಫರೆನ್ಸ್‌ ಮೂಲಕ ವರ್ಚುವಲ್‌ ವಿಧಾನದಲ್ಲಿ ವಿಚಾರಣೆಗೆ ಮುಂದಾಗಿವೆ. ಬಾಂಬೆ, ಉತ್ತರಾಖಂಡ, ಕಲ್ಕತ್ತಾ ಮತ್ತು ಅಲಾಹಾಬಾದ್ ಸೇರಿದಂತೆ ವಿವಿಧ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕೂಡ ಕೋವಿಡ್‌ ದೃಢಪಟ್ಟಿದೆ.