Supreme Court, Exams 
ಸುದ್ದಿಗಳು

ಕೋವಿಡ್‌ನಿಂದ ಪರಿಸ್ಥಿತಿ ಗಂಭೀರ: 11ನೇ ತರಗತಿ ಪರೀಕ್ಷೆ ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ತಡೆ

“ಕೇರಳದಲ್ಲಿ ಪ್ರತಿ ದಿನ 35,000 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ದೇಶದ ಶೇ. 70ರಷ್ಟು ಪ್ರಕರಣಗಳು ಇಲ್ಲೇ ಪತ್ತೆಯಾಗುತ್ತಿವೆ. ವಿದ್ಯಾರ್ಥಿಗಳನ್ನು ಕೋವಿಡ್‌ ಸೋಂಕಿಗೆ ತುತ್ತಾಗುವಂತೆ ಮಾಡಲಾಗದು” ಎಂದು ಪೀಠ ಹೇಳಿದೆ.

Bar & Bench

ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 6ರಿಂದ 11ನೇ ತರಗತಿ ಪರೀಕ್ಷೆ ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ, ಒಂದು ವಾರ ಪರೀಕ್ಷೆ ತಡೆ ಹಿಡಿಯಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ಹೃಷಿಕೇಷ್‌ ರಾಯ್‌ ಮತ್ತು ಸಿ ಟಿ ರವಿಕುಮಾರ್‌ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

“ಕೇರಳದಲ್ಲಿ ಪ್ರತಿ ದಿನ 35,000 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ದೇಶದ ಶೇ. 70ರಷ್ಟು ಪ್ರಕರಣಗಳು ಇಲ್ಲೇ ಪತ್ತೆಯಾಗುತ್ತಿವೆ. ಈ ವಯೋಮಾನದ ಮಕ್ಕಳನ್ನು ಕೋವಿಡ್‌ ಸೋಂಕಿಗೆ ತುತ್ತಾಗುವಂತೆ ಮಾಡಲಾಗದು” ಎಂದು ಪೀಠ ಹೇಳಿದೆ.

ಯಾವುದೇ ವಿದ್ಯಾರ್ಥಿ ಕೋವಿಡ್‌ಗೆ ತುತ್ತಾಗುವುದಿಲ್ಲ ಎಂದು ಖಾತರಿಪಡಿಸಿ. ಇಲ್ಲವಾದಲ್ಲಿ ರಾಜ್ಯ ಸರ್ಕಾರವನ್ನು ಹೊಣೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿತು. ಕೇರಳ ಸರ್ಕಾರದ ಪರ ವಕೀಲರು ಖಾತರಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಪರೀಕ್ಷೆಗೆ ತಡೆ ನೀಡಿತು.

ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಿಗದಿ ಮಾಡಿರುವುದರಿಂದ ಮಕ್ಕಳನ್ನು ಅನಗತ್ಯವಾಗಿ ಒತ್ತಡಕ್ಕೆ ನೂಕಿದಂತಾಗಲಿದೆ ಎಂದು ಜೂನ್‌ನಲ್ಲಿ ವಿದ್ಯಾರ್ಥಿಗಳ ಪರ ವಕೀಲ ಪ್ರಶಾಂತ್‌ ಪದ್ಮನಾಭನ್‌ ಹೇಳಿದರು. ಸೆಪ್ಟೆಂಬರ್‌ ವೇಳೆಗೆ ಕೋವಿಡ್‌ ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆ ಇದೆ ಎಂದು 11ನೇ ತರಗತಿ ಪರೀಕ್ಷೆ ನಡೆಸುವ ಕೇರಳ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಲು ಸುಪ್ರೀಂ ಕೋರ್ಟ್‌ ಈ ಹಿಂದೆ ನಿರಾಕರಿಸಿತ್ತು.