ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇಂದಿನಿಂದ 9 ಮತ್ತು 10ನೇ ತರಗತಿಗಳನ್ನು ಹಂತಹಂತವಾಗಿ ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ವಿವರಿಸಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳನ್ನು ಪುನಾರಂಭಿಸುವಂತೆ ಕೋರಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೃಷ್ಣ ಪಿ ಭಟ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನಡೆಸಿತು.
“ಇದು (ಕೋವಿಡ್) ವ್ಯಾಪಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಶಾಲೆ ಪುನಾರಂಭದ ಕುರಿತು ನಾವು ದಿನಾಂಕ ಸೂಚಿಸಿರಲಿಲ್ಲ. ಕೊರೊನಾ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ… ಶಾಲೆ ತೆರೆಯುವುದು ಸುಲಭ. ಆದರೆ, ಅದು ವ್ಯಾಪಕವಾಗಿ ಹಬ್ಬುವಂತಾಗಬಾರದು” ಎಂದು ಪೀಠ ಹೇಳಿದೆ.
ಪ್ರತಿದಿನ ಬೆಳಗಿನ ಅವಧಿಯಲ್ಲಿ ತರಗತಿಗಳನ್ನು ನಡೆಸಲಾಗುವುದು. ಭೌತಿಕವಾಗಿ ಅಥವಾ ಆನ್‌ಲೈನ್ ಮೂಲಕ ಮಕ್ಕಳು ತರಗತಿಯಲ್ಲಿ ಭಾಗಿಯಾಗಬಹುದು ಎಂದು ರಾಜ್ಯ ಸರ್ಕಾರವು ವಿವರಿಸಿದೆ.
ಇದನ್ನು ಆಲಿಸಿದ ಪೀಠವು ಸೋಂಕನ್ನು ನಿಯಂತ್ರಿಸುವ ಸಂಬಂಧ ಶಾಲೆಗಳಲ್ಲಿ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಅನಿರೀಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
“ಶಾಲೆಗಳಲ್ಲಿ ಕೋವಿಡ್ ಹರಡುವುದನ್ನು ತಡೆಗಟ್ಟಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಒಳಗೊಂಡಿರುವ ಆಗಸ್ಟ್ 16ರ ಸುತ್ತೋಲೆಯನ್ನು ಪರಿಶೀಲಿಸಿದ್ದೇವೆ. ಶಿಕ್ಷಣ ಸಂಸ್ಥೆಗಳು ಎಸ್‌ಒಪಿ ಅನುಸರಿಸುವ ಸಂಬಂಧ ಸೂಚನೆ ಮತ್ತು ಮೇಲ್ವಿಚಾರಣೆಯ ಕಾರ್ಯವಿಧಾನ ಜಾರಿಯಲ್ಲಿರುವುದನ್ನು ಸರ್ಕಾರ ಮತ್ತು ಅಧಿಕಾರಿಗಳು ಖಾತರಿಪಡಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ತನ್ನ ಎಲ್ಲಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಯಾದೃಚ್ಛಿಕವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಶಾಲೆಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳಿಂದ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗಳು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಬೇಕು. ಇದನ್ನು ಆಗಸ್ಟ್ 30ರ ಒಳಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಶಾಲೆಗಳು ಪುನಾರಂಭವಾದಾಗ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಲಾಗುತ್ತದೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿದೆ. ಶಾಲೆಗಳ ಎಷ್ಟು ಸಿಬ್ಬಂದಿಗೆ (ಬೋಧಕ ಮತ್ತು ಬೋಧಕೇತರರಿಗೆ) ಲಸಿಕೆ ಹಾಕಿಸಲಾಗಿದೆ ಎಂಬ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸರ್ಕಾರ ಹೇಳಿತು. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯ ವೇಳೆಗೆ ಆಗಸ್ಟ್ 30ರೊಳಗೆ ಅಧಿಕೃತವಾಗಿ ಮಾಹಿತಿ ಸಲ್ಲಿಸುವಂತೆ ಪೀಠವು ಆದೇಶಿಸಿದೆ.