ಸುದ್ದಿಗಳು

48 ಗಂಟೆಗಳಲ್ಲಿ ಕರ್ಫ್ಯೂ/ ವಾರಾಂತ್ಯದ ಲಾಕ್‌ಡೌನ್‌ ನಿರ್ಧರಿಸದಿದ್ದರೆ ಮುಂದಿನ ಕ್ರಮ: ತೆಲಂಗಾಣ ಹೈಕೋರ್ಟ್ ಎಚ್ಚರಿಕೆ

ಸರ್ಕಾರದ ಸನ್ನದ್ಧತೆ ಮತ್ತು ಸೋಂಕನ್ನು ಎದುರಿಸಲು ಹಾಗೂ ಅದನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು ಸಮಗ್ರವಾದ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದೆ.

Bar & Bench

ಕೋವಿಡ್‌ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ / ವಾರಾಂತ್ಯದ ಲಾಕ್‌ಡೌನ್ ಹೇರುವ ಕುರಿತು ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ನಿರ್ಧರಿಸುವಂತೆ ತೆಲಂಗಾಣ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇಲ್ಲದಿದ್ದರೆ ಆ ರೀತಿ ಕ್ರಮಕೈಗೊಳ್ಳುವಂತೆ ನ್ಯಾಯಾಲಯ ಒತ್ತಾಯಿಸಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ವಿಜಯಸೇನ್ ರೆಡ್ಡಿ ಅವರಿದ್ದ ಪೀಠ ಅಡ್ವೊಕೇಟ್‌ ಜನರಲ್‌ ಬಿ ಎಸ್‌ ಪ್ರಸಾದ್‌ ಅವರಿಗೆ ತಿಳಿಸಿದೆ.

ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುತ್ತಿರುವವರಿಗೆ ನೀಡಲಾಗಿರುವ ಮಾರ್ಗಸೂಚಿ, ಹಿಂದುಳಿದ ವರ್ಗಗಳಿಗೆ ಸೇರಿದ ರೋಗಿಗಳ ಆರೋಗ್ಯ ತಪಾಸಣೆಗಾಗಿ ಮಾಡಲಾದ ವ್ಯವಸ್ಥೆ, ರೋಗಿಗಳ ಸಹಾಯಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡುವುದು, ದಾಳಿ ವೇಳೆ ಜಪ್ತಿ ಮಾಡಲಾದ ಔಷಧಗಳ ಸಂಗ್ರಹಕ್ಕಾಗಿ ಮಾಡಿಕೊಳ್ಳಲಾದ ವ್ಯವಸ್ಥೆ, ಮನೆಯಲ್ಲಿ ಸೋಂಕಿನ ಶಂಕೆಯಿಂದಾಗಿ ಪ್ರತ್ಯೇಕವಾಸದಲ್ಲಿರುವ (ಕ್ವಾರಂಟೈನ್‌) ವ್ಯಕ್ತಿಗಳಿಗೆ ಆಹಾರ ಒದಗಿಸಲು ಸಾರ್ವಜನಿಕ ಅಡುಗೆಮನೆಗಳ ಸ್ಥಾಪನೆ, ಕೋವಿಡ್‌ ಆರೈಕೆ ಕೇಂದ್ರಗಳ ಪಟ್ಟಿ, ಆಮ್ಲಜನಕ ಸಿಲಿಂಡರ್‌ ಲಭ್ಯತೆ, ಆರ್‌ಟಿಪಿಸಿಆರ್‌ ವರದಿಗಳನ್ನು ಶೀಘ್ರವಾಗಿ ಒದಗಿಸಿವುದು ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಸಮಗ್ರವಾದ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ. ಏಪ್ರಿಲ್ 22 ಅಥವಾ ಅದಕ್ಕೂ ಮೊದಲು ಅಫಿಡವಿಟ್‌ ಸಲ್ಲಿಸುವಂತೆ ಗಡುವು ವಿಧಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕರು ಸಲ್ಲಿಸಿದ ಅಫಿಡವಿಟ್ ಅನ್ನು ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರಿಂದ ವರದಿಯನ್ನು ಪಡೆದ ನಂತರ ಮುಂದಿನ ವಿಚಾರಣೆ ವೇಳೆ ಮರುಪರಿಶೀಲಿಸಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.

ಇದಲ್ಲದೆ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕರು ಇಬ್ಬರೂ ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

ಇದರೊಟ್ಟಿಗೆ, ಹೈಕೋರ್ಟ್ ಈ ಕೆಳಗಿನ ಅಂಶಗಳನ್ನು ದಾಖಲಿಸಿಕೊಂಡಿತು:

  • ಪಬ್‌, ರೆಸ್ಟೋರೆಂಟ್‌, ಸಿನೆಮಾ ಹಾಲ್‌ ಇತ್ಯಾದಿ ಕಡೆಗಳಲ್ಲಿ ಒಟ್ಟು ಸಾಮರ್ಥ್ಯದ ಶೇ 50 ಅಥವಾ 1/3 ಭಾಗದಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡುವ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • ಏಪ್ರಿಲ್ 1ರಿಂದ 14ರ ನಡುವೆ ನಡೆಸಿದ RAT, RT-PCR, CBNAT, TRUNAT ಪರೀಕ್ಷೆಗಳ ಸಂಖ್ಯೆ ಎಷ್ಟೆಂಬುದನ್ನು ತೋರಿಸುವ ಯಾವುದೇ ಹೇಳಿಕೆಗಳನ್ನು ಸಲ್ಲಿಸಿಲ್ಲ.

  • ಅಂತರ ರಾಜ್ಯ ಬಸ್ ಟರ್ಮಿನಲ್‌, ರೈಲ್ವೆ ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ಸೋಂಕು ಕುರಿತು ನಿಗಾವಹಿಸಲು ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ.

  • ಕೋವಿಡ್‌ ಪ್ರಕರಣಗಳು ಉತ್ತುಂಗಕ್ಕೇರಿರುವ ರಾಜ್ಯಗಳ ಗಡಿ ಮುಚ್ಚುವ ನಿರ್ಧಾರ ಕುರಿತಂತೆ ಸರ್ಕಾರ ನಿರ್ಧರಿಸಿಲ್ಲ.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 23ಕ್ಕೆ ನಿಗದಿಯಾಗಿದೆ.